ದಲಿತ ವಿದ್ಯಾರ್ಥಿ ರೋಹಿತ್ ವೇಮುಲು ಆತ್ಮಹತ್ಯೆ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಕಾರಣ: ವಿ.ಎಸ್. ಉಗ್ರಪ್ಪ
ಬೆಂಗಳೂರು.ಜ.21: ಹೈದರಾಬಾದ್‌ನ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ದಲಿತ ಸಮುದಾದಯ ವಿದ್ಯಾರ್ಥಿ ರೋಹಿತ್ ವೇಮುಲು ಆತ್ಮಹತ್ಯೆ ಮಾಡಿಕೊಳ್ಳಲು ಕೇಂದ್ರ ಸರ್ಕಾರವೇ ಮೂಲ ಕಾರಣವಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ದಲಿತ ಸಮುದಾಯದ ಕ್ಷಮೆಯಾಚಿಸಬೇಕೆಂದು ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮೇಲ್ಮನೆ ಸದಸ್ಯ ವಿ.ಎಸ್. ಉಗ್ರಪ್ಪ ಇಂದಿಲ್ಲಿ ಆಗ್ರಹಿಸಿದ್ದಾರೆ.
ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆಪಾದನೆ ಎದುರಿಸುತ್ತಿರುವ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮತಿ ಇರಾನಿ ಮತ್ತು ಕಾರ್ಮಿಕ ಸಚಿವ ಬಂಡಾರು ದತ್ತಾತ್ರೆಯ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲವಾದಲ್ಲಿ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೆ ಹಲವು ಮಂದಿ ಕಾರಣರಾಗಿದ್ದು, ಹೈದರಾಬಾದ್‌ನ ಮೇಲ್ಮನೆ ಸದಸ್ಯ ರಾಮಚಂದ್ರರಾವ್, ವಿ.ವಿ. ಕುಲಪತಿ ಮೇಲೂ ಕ್ರಮ ಕೈಗೊಳ್ಳಬೇಕು. ಇದು ಕೇಂದ್ರ ಸರ್ಕಾರದ ದಲಿತ ವಿರೋಧಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಕೇಂದ್ರ ಸರ್ಕಾರದ ಸುಪರ್ದಿಯಲ್ಲಿರುವ ವಿ.ವಿ.ಗಳಲ್ಲಿ ಉಸಿರುಗಟ್ಟಿಸುವ ವಾತಾವರಣ ಇದೆ ಎಂದರು.
ರೋಹಿತ್ ಬರೆದ ಡೆತ್ ನೋಟ್ ನೋಡಿದರೆ ಆತ ಎಂತಹ ಒತ್ತಡದ ಪರಿಸ್ಥಿತಿಯಲ್ಲಿ ಬದುಕುತ್ತಿದ್ದ ಎನ್ನವುದು ತಿಳಿಯುತ್ತದೆ. ದಲಿತರನ್ನು ಕೇಂದ್ರ ಸರ್ಕಾರ ಎರಡನೇ ದರ್ಜೆ ಪ್ರಜೆಗಳಂತೆ ನೋಡಿಕೊಳ್ಳಲಾಗುತ್ತಿದೆ. ಈ ಪ್ರಕರಣದಲ್ಲಿ ಯಾರ್ಯಾರ ಮೇಲೆ ಎಫ್.ಐ.ಆರ್ ದಾಖಲಾಗಿದೆಯೋ ಅವರೆಲ್ಲಾ ರಾಜೀನಾಮೆ ನೀಡಬೇಕೆಂದರು.
ಇಂತಹ ನೊಂದ ಕುಟುಂಬಕ್ಕೆ ಸಾಂತ್ವಾನ ಹೇಳಲು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ತೆರಳಿದರೆ ಅದಕ್ಕೂ ರಾಜಕೀಯ ಬಣ್ಣ ಕಟ್ಟಲಾಗುತ್ತಿದೆ. ವಿದ್ಯಾರ್ಥಿ ಸಮುದಾಯದ ಪ್ರತಿಭಟನೆಯನ್ನು ವ್ಯವಸ್ಥಿತವಾಗಿ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಎಂದು ಉಗ್ರಪ್ಪ ಆಪಾದಿಸಿದರು.