ಕರ್ಬೆಟ್ಟು-ಬೋಳಂತೂರು ರಸ್ತೆ ದುರಸ್ತಿಗೆ ವಿದ್ಯಾರ್ಥಿಗಳಿಂದ ಶ್ರಮದಾನ

Update: 2016-01-21 18:24 GMT


 

ಬಂಟ್ವಾಳ, ಜ.21: ತಾಲೂಕಿನ ನರಿಕೊಂಬು ಗ್ರಾಪಂ ವ್ಯಾಪ್ತಿಯ ಬೋಳಂತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಇಲ್ಲಿನ ಹದಗೆಟ್ಟ ಗ್ರಾಮೀಣ ರಸ್ತೆಗಿಳಿದು ಸ್ವತಃ ‘ಶ್ರಮದಾನ’ ನಡೆಸುವ ಮೂಲಕ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಪಾಠ ಕಲಿಸಿದ ಘಟನೆ ಗುರುವಾರ ನಡೆದಿದೆ.

ನರಿಕೊಂಬು ಗ್ರಾಪಂನಲ್ಲಿ ಬುಧವಾರ ನಡೆದ ‘ಮಕ್ಕಳ ಗ್ರಾಮಸಭೆ’ಯಲ್ಲಿ ಇಲ್ಲಿನ ಕರ್ಬೆಟ್ಟು- ಬೋಳಂತೂರು ರಸ್ತೆಯನ್ನು ತ್ವರಿತವಾಗಿ ದುರಸ್ತಿಗೊಳಿ ಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದಾರೆ.

ಇದೀಗ ಶಾಲೆ ಎದುರಿನ ರಸ್ತೆಗೆ ಮುಖ್ಯ ಶಿಕ್ಷಕಿ ಚಂದ್ರಾ ವತಿ ನೇತೃತ್ವದಲ್ಲಿ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿ ಗಳು ಸ್ವತಃ ರಸ್ತೆಗಿಳಿದು ಮಣ್ಣು ಮತ್ತು ಜೆಲ್ಲಿ ಹುಡಿ ಹಾಕುವ ಮೂಲಕ ಶ್ರಮದಾನ ನಡೆಸಿ ಗಮನ ಸೆಳೆದಿದ್ದಾರೆ. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮೋಹನ ಅಂತರ, ಸ್ಥಳೀಯ ಗ್ರಾಪಂ ಸದಸ್ಯ ಕಿಶೋರ್ ಶೆಟ್ಟಿ, ಮಾಜಿ ಉಪಾಧ್ಯಕ್ಷ ಪ್ರೇಮನಾಥ ಶೆಟ್ಟಿ, ಶಿಕ್ಷಕಿಯರಾದ ಪ್ರೆಸಿಲ್ಲಾ ಎವ್ಲಿನ್ ಡಿಸೋಜ, ಟಿ.ಶರ್ಮಿಳಾ, ಕೆಲವೊಂದು ರಿಕ್ಷಾ ಚಾಲಕರು ಮತ್ತು ಮಕ್ಕಳ ಪೋಷಕರು ಕೂಡಾ ಶ್ರಮದಾನದಲ್ಲಿ ಪಾಲ್ಗೊಂಡರು.

ತಾಲೂಕಿನಲ್ಲಿ ಇತರ ಗ್ರಾಮ ಪಂಚಾಯತ್‌ಗೆ ಹೋಲಿಸಿದರೆ ರಾಷ್ಟ್ರೀಯ ಹೆದ್ದಾರಿ ಮತ್ತು ಬಂಟ್ವಾಳ ಪುರಸಭೆಗೆ ಸಮೀಪದಲ್ಲಿದ್ದು, ಎಎಂಆರ್ ಕಿರು ಜಲವಿದ್ಯುತ್ ಘಟಕದಂತಹ ಬಲಾಢ್ಯ ಉದ್ದಿಮೆ ಮತ್ತಿತರ ಆದಾಯ ಮೂಲ ಇದ್ದರೂ ಇಂತಹ ರಸ್ತೆ ದುರಸ್ತಿಗೆ ಏಕೆ ಮುಂದಾಗುತ್ತಿಲ್ಲ ಎಂಬ ಪ್ರಶ್ನೆ ಇಲ್ಲಿನ ನಾಗರಿಕರನ್ನು ಕಾಡುತ್ತಿದೆ.

ಗ್ರಾಪಂ ಚುನಾವಣೆ ವೇಳೆ ಸರಕಾರದ ಜೈಕಾ ಯೋಜನೆಯಡಿ ರಸ್ತೆ ಸರ್ವೇ ಕಾರ್ಯ ನಡೆಸಿ ಬಳಿಕ ಚುನಾವಣಾ ನೀತಿ ಸಂಹಿತೆ ನೆಪದಲ್ಲಿ ಅರ್ಧದಲ್ಲೇ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಚುನಾವಣಾ ನೀತಿ ಸಂಹಿತೆ ನೆಪದಲ್ಲಿ ಜನಪ್ರತಿನಿಧಿಗಳು ಕೈಕಟ್ಟಿ ಕುಳಿತಿದ್ದು, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ತಕ್ಷಣವೇ ಮಧ್ಯೆ ಪ್ರವೇಶಿಸಿ ಈ ರಸ್ತೆ ದುರಸ್ತಿಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಸ್ಥಳೀಯರ ಮನವಿಗೆ ಸ್ಪಂದನೆಯಿಲ್ಲ

ಈ ಹಿಂದೆ ಸ್ಥಳೀಯ ಜಿಪಂ ಸದ ಸ್ಯರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಂಸದ ರಿಗೂ ರಸ್ತೆ ದುರಸ್ತಿ ಮತ್ತು ಡಾಂಬರೀಕರಣಗೊಳಿಸು ವಂತೆ ಆಗ್ರಹಿಸಿ ವಿದ್ಯಾರ್ಥಿ ಗಳು ಮತ್ತು ಸ್ಥಳೀಯರು ಸಾಕಷ್ಟು ಬಾರಿ ಮನವಿ ಸಲ್ಲಿಸಿ ದ್ದರೂ ಯಾವುದೇ ಪ್ರಯೋಜನ ವಾಗಿಲ್ಲ. ಮೂರು ವರ್ಷಗಳ ಹಿಂದೆಯಷ್ಟೇ ಇಲ್ಲಿಗೆ ಸಮೀಪದ ಪಾಣೆಮಂಗಳೂರು ನೆಹರೂ ನಗರ-ಕರ್ಬೆಟ್ಟು ರಸ್ತೆಯು ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿ ಡಾಂಬರೀ ಕರಣಗೊಂಡಿದೆ. ಇತ್ತೀಗಷ್ಟೇ ಬ್ರಹ್ಮಕಲಶೋತ್ಸವ ನೆಪದಲ್ಲಿ ಇಲ್ಲಿಗೆ ಸಮೀಪದ ಶೇಡಿಗುರಿ-ನಾಟಿ ಬೀದಿ ರಸ್ತೆ ದುರಸ್ತಿ ಡಾಂಬರೀಕರಣ ಮತ್ತು ಕಾಂಕ್ರಿಟೀ ಕರಣಗೊಂಡಿದೆ.
ಕೇವಲ ಎರಡೂವರೆ ಕಿ.ಮೀ. ಉದ್ದದ ಈ ರಸ್ತೆ ಮಾತ್ರ ತೇಪೆ ಡಾಂಬ ರೀಕರಣವೂ ಇಲ್ಲದೆ ತೀರಾ ನಿರ್ಲಕ್ಷ್ಯಕ್ಕೀಡಾಗಿದೆ. ಇದರಿಂದಾಗಿ ಇಲ್ಲಿನ ರಸ್ತೆಗೆ ಬರಲು ರಿಕ್ಷಾ ಚಾಲಕರು ಕೂಡಾ ಹಿಂದೇಟು ಹಾಕುತ್ತಿದ್ದಾರೆ ಎಂಬುದು ನಾಗರಿಕರ ಆರೋಪ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News