ಮೂರನೆ ಟ್ವೆಂಟಿ-20 ಪಂದ್ಯ: ಪಾಕ್ ವಿರುದ್ಧ ನ್ಯೂಝಿಲೆಂಡ್‌ಗೆ 95 ರನ್ ಜಯ: ಸರಣಿ 2-1 ವಶ

Update: 2016-01-22 18:58 GMT

ವೆಲ್ಲಿಂಗ್ಟನ್, ಜ.22: ಆಲ್‌ರೌಂಡರ್ ಕೋರಿ ಆ್ಯಂಡರ್ಸನ್ ಬಾರಿಸಿದ ಸ್ಫೋಟಕ 82 ರನ್‌ಗಳ ನೆರವಿನಿಂದ ನ್ಯೂಝಿಲೆಂಡ್ ತಂಡ ಪಾಕಿಸ್ತಾನ ವಿರುದ್ಧ ಇಲ್ಲಿ ನಡೆದ ಮೂರನೆ ಟ್ವೆಂಟಿ-20 ಪಂದ್ಯದಲ್ಲಿ 95 ರನ್‌ಗಳ ಜಯ ಗಳಿಸಿದ್ದು, 3 ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ ವಶಪಡಿಸಿಕೊಂಡಿದೆ.
ವೆಸ್ಟ್‌ಪಾಕ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 101 ರನ್‌ಗಳ ಸವಾಲನ್ನು ಪಡೆದ ಪಾಕಿಸ್ತಾನ ತಂಡ 16.1 ಓವರ್‌ಗಳಲ್ಲಿ 101 ರನ್‌ಗಳಿಗೆ ಆಲೌಟಾಯಿತು.
ವಿಕೆಟ್ ಕೀಪರ್ ಸರ್ಫ್ರಾಝ್ ಅಹ್ಮದ್ 41ರನ್ ಮತ್ತು ಶುಐಬ್ ಮಲಿಕ್14 ರನ್ ಇವರನ್ನು ಹೊರತುಪಡಿಸಿದರೆ ತಂಡದ ಸಹ ಆಟಗಾರರು ಎರಡಂಕೆಯ ಸ್ಕೋರ್ ದಾಖಲಿಸುವಲ್ಲಿ ವಿಫಲರಾದರು.
ನ್ಯೂಝಿಲೆಂಡ್‌ನ ಎಎಫ್ ಮಿಲ್ನೆ (3-8), ಎಲಿಯೆಟ್ (3-7) ಆ್ಯಂಡರ್ಸನ್(2-17) ಮತ್ತು ಬೌಲ್ಟ್ (1-32) ದಾಳಿಯನ್ನು ಎದುರಿಸಲಾರದೆ ಪಾಕ್‌ನ ದಾಂಡಿಗರು ಕೈ ಸುಟ್ಟುಕೊಂಡರು.
ಕೋರಿ ಆ್ಯಂಡರ್ಸನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇದಕ್ಕೂ ಮೊದಲು ಟಾಸ್ ಜಯಿಸಿದ ಪಾಕಿಸ್ತಾನ ತಂಡದ ನಾಯಕ ಶಾಹಿದ್ ಅಫ್ರಿದಿ ನ್ಯೂಝಿಲೆಂಡ್‌ನ್ನು ಬ್ಯಾಟಿಂಗ್‌ಗೆ ಇಳಿಸಿದ್ದರು.
 ಆಲ್‌ರೌಂಡರ್ ಕೋರಿ ಆ್ಯಂಡರ್ಸನ್ ಔಟಾಗದೆ 58 ನಿಮಿಷಗಳ ಬ್ಯಾಟಿಂಗ್‌ಲ್ಲಿ 42 ಎಸೆತಗಳನ್ನು ಎದುರಿಸಿ 6 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಲ್ಲಿ 82 ರನ್ ಗಳಿಸಿದರು.
ಮೊದಲ ವಿಕೆಟ್‌ಗೆ ಆರಂಭಿಕ ದಾಂಡಿಗ ಮಾರ್ಟಿನ್ ಗಫ್ಟಿಲ್ (42) ಮತ್ತು ವಿಲಿಯಮ್ಸನ್(33) ಅವರು ಜೊತೆಯಾಟದಲ್ಲಿ ತಂಡದ ಖಾತೆಗೆ 6 ಓವರ್‌ಗಳಲ್ಲಿ 57 ರನ್ ಸೇರಿಸಿದ್ದರು. ನಾಲ್ಕನೆ ವಿಕೆಟ್‌ಗೆ ಎಲಿಯಟ್ ಮತ್ತು ಆ್ಯಂಡರ್ಸನ್ 64 ರನ್ ಸೇರಿಸಿದರು.
ಸಂಕ್ಷಿಪ್ತ ಸ್ಕೋರ್ ವಿವರ
ನ್ಯೂಝಿಲೆಂಡ್ 20 ಓವರ್‌ಗಳಲ್ಲಿ 196/5( ಕೋರಿ ಆ್ಯಂಡರ್ಸನ್ ಔಟಾಗದೆ 82, ಗಫ್ಟಿಲ್ 42, ವಿಲಿಯಮ್ಸನ್ 33; ರಿಯಾಝ್ 2-43).

ಪಾಕಿಸ್ತಾನ 16.1 ಓವರ್‌ಗಳಲ್ಲಿ ಆಲೌಟ್ 101(ಸರ್ಫ್ರಾಝ್ ಅಹ್ಮದ್ 41; ಎಎಫ್ ಮಿಲ್ನೆ 3-8, ಎಲಿಯೆಟ್ 3-7, ಆ್ಯಂಡರ್ಸನ್ 2-17 )
ಪಂದ್ಯಶ್ರೇಷ್ಠ: ಕೋರಿ ಆ್ಯಂಡರ್ಸನ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News