ಭುವನೇಶ್ವರ ಶಿಬಿರಕ್ಕೆ 26 ಸಂಭಾವ್ಯರ ಮೊದಲ ಪಟ್ಟಿ ಪ್ರಕಟ; ಫಿಫಾ ವಿಶ್ವಕಪ್ 2026ರ 2ನೇ ಅರ್ಹತಾ ಸುತ್ತಿನ ಪಂದ್ಯಗಳಿಗೆ ಸಿದ್ಧತೆ

Update: 2024-05-04 17:00 GMT

PC : fifa.com

ಹೊಸದಿಲ್ಲಿ: ಭಾರತೀಯ ಹಿರಿಯ ಪುರುಷರ ಫುಟ್ಬಾಲ್ ತಂಡದ ಪ್ರಧಾನ ಕೋಚ್ ಐಗರ್ ಸ್ಟೈಮ್ಯಾಕ್, ಭುವನೇಶ್ವರದಲ್ಲಿ ನಡೆಯಲಿರುವ ಶಿಬಿರಕ್ಕಾಗಿ 26 ಸಂಭಾವ್ಯ ಆಟಗಾರರ ಮೊದಲ ಪಟ್ಟಿಯನ್ನು ಶನಿವಾರ ಪ್ರಕಟಿಸಿದ್ದಾರೆ. ಕುವೈತ್ ಮತ್ತು ಖತರ್ ವಿರುದ್ಧದ ಫಿಫಾ ವಿಶ್ವಕಪ್ 2026ರ 2ನೇ ಪ್ರಾಥಮಿಕ ಜಂಟಿ ಅರ್ಹತಾ ಸುತ್ತಿನ ಪಂದ್ಯಗಳಿಗೆ ಸಿದ್ಧತೆಗಳನ್ನು ಮಾಡಿಕೊಳ್ಳಲು ಈ ಶಿಬಿರವನ್ನು ಏರ್ಪಡಿಸಲಾಗಿದೆ.

ಸಂಭಾವ್ಯ ಆಟಗಾರರ ಎರಡನೇ ಪಟ್ಟಿಯನ್ನು ಇನ್ನು ಕೆಲವೇ ದಿನಗಳಲ್ಲಿ ಪ್ರಕಟಿಸಲಾಗುವುದು.

ಭಾರತದ ತರಬೇತಿ ಶಿಬಿರುವ ಒಡಿಶಾ ರಾಜಧಾನಿ ಭುವನೇಶ್ವರದಲ್ಲಿ ಮೇ 10ರಂದು ಆರಂಭಗೊಳ್ಳಲಿದೆ.

ಭಾರತೀಯ ಫುಟ್ಬಾಲ್ ತಂಡವು ಜೂನ್ 6ರಂದು ಕೋಲ್ಕತದಲ್ಲಿ ಕುವೈತನ್ನು ಎದುರಿಸಲಿದೆ. ಬಳಿಕ ಅದು ಜೂನ್ 11ರಂದು ಖತರ್ ರಾಜಧಾನಿ ದೋಹಾದಲ್ಲಿ ಖತರ್ ವಿರುದ್ಧ ಆಡಲಿದೆ.

ಭಾರತವು ಎ ಗುಂಪಿನಲ್ಲಿ ಆಡುತ್ತಿದ್ದು, ಪ್ರಸಕ್ತ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದೆ. ಅದು ನಾಲ್ಕು ಪಂದ್ಯಗಳಿಂದ ನಾಲ್ಕು ಅಂಕಗಳನ್ನು ಗಳಿಸಿದೆ. ಈ ಗುಂಪಿನ ಎರಡು ಅಗ್ರ ತಂಡಗಳು ಫಿಫಾ ವಿಶ್ವಕಪ್ ಮೂರನೇ ಅರ್ಹತಾ ಸುತ್ತಿಗೆ ತಲುಪುತ್ತವೆ. ಅದೇ ವೇಳೆ, 2027ರಲ್ಲಿ ನಡೆಯಲಿರುವ ಎಎಫ್‍ಸಿ ಏಶ್ಯನ್ ಕಪ್‍ನ ಪ್ರಾಥಮಿಕ ಜಂಟಿ ಅರ್ಹತಾ ಸುತ್ತಿನಲ್ಲಿ ಪಾಲ್ಗೊಳ್ಳುವ ಅರ್ಹತೆಯನ್ನೂ ಪಡೆಯುತ್ತವೆ.

ಈ ಮೊದಲಿನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾರತವು ಅಫ್ಘಾನಿಸ್ತಾನದ ವಿರುದ್ಧ 1-2 ಗೋಲಿನ ಅಂತರದ ಸೋಲನುಭವಿಸಿತ್ತು. ಇದು ಫಿಫಾ ವಿಶ್ವಕಪ್ 2026ರ ಮೂರನೇ ಅರ್ಹತಾ ಸುತ್ತಿನಲ್ಲಿ ಮತ್ತು ಎಎಫ್‍ಸಿ ಏಶ್ಯನ್ ಕಪ್ 2027ರ ಪ್ರಾಥಮಿಕ ಅರ್ಹತಾ ಸುತ್ತಿಗೆ ಪ್ರವೇಶ ಪಡೆಯುವ ಭಾರತದ ಆಸೆಗೆ ತೀವ್ರ ಹೊಡೆತ ನೀಡಿದೆ.

ನಾಲ್ಕು ತಂಡಗಳ ಎರಡನೇ ಸುತ್ತಿನ ಗುಂಪಿನಲ್ಲಿ, ಭಾರತ ನಾಲ್ಕು ಪಂದ್ಯಗಳಿಂದ ಕೇವಲ ನಾಲ್ಕು ಅಂಕಗಳನ್ನು ಗಳಿಸಿದ್ದು, ಎರಡನೇ ಸ್ಥಾನದಲ್ಲಿದೆ. ಮೂರು ಪಂದ್ಯಗಳಿಂದ ಒಂಭತ್ತು ಅಂಕಗಳನ್ನು ಗಳಿಸಿರುವ ಖತರ್ ಗುಂಪಿನಲ್ಲಿ ಅಗ್ರ ಸ್ಥಾನದಲ್ಲಿದೆ. ಅಫ್ಘಾನಿಸ್ತಾನವೂ ನಾಲ್ಕು ಪಂದ್ಯಗಳಿಂದ ನಾಲ್ಕು ಅಂಕಗಳನ್ನು ಗಳಿಸಿದೆ.

ಭಾರತ ಇನ್ನು ಎರಡು ಪಂದ್ಯಗಳನ್ನು ಆಡಬೇಕಾಗಿದೆ. ಏಶ್ಯನ್ ಚಾಂಪಿಯನ್ ಖತರ್ ತಂಡವನ್ನು ಅದರದ್ದೇ ನೆಲದಲ್ಲಿ ಸೋಲಿಸುವುದು ಸಾಹಸದ ಕೆಲಸವೇ ಸರಿ. ಏನಿದ್ದರೂ, ಜೂನ್ 6ರಂದು ನಡೆಯಲಿರುವ ಕುವೈತ್ ವಿರುದ್ಧದ ಪಂದ್ಯದಲ್ಲಿ ಭಾರತವು ತನ್ನ ಚಾಕಚಕ್ಯತೆಯನ್ನು ತೋರಿಸಬೇಕಾಗಿದೆ.

ಭುವನೇಶ್ವರ ಶಿಬಿರಕ್ಕೆ ಆಯ್ಕೆಯಾದ 26 ಸಂಭಾವ್ಯ ಆಟಗಾರರು

ಗೋಲ್‍ಕೀಪರ್ ಗಳು: ಅಮರಿಂದರ್ ಸಿಂಗ್, ಗುರ್‍ಪ್ರೀತ್ ಸಿಂಗ್ ಸಂಧು

ಡಿಫೆಂಡರ್‍ಗಳು: ಅಮೇ ಗಣೇಶ್ ರಣವಾಡೆ, ಜಯ್ ಗುಪ್ತ, ಲಾಲ್‍ಚುಂಗ್‍ನುಂಗ, ಮುಹಮ್ಮದ್ ಹಮೀದ್, ನರೇಂದ್ರ, ನಿಖಿಲ್ ಪೂಜಾರಿ, ರೋಶನ್ ಸಿಂಗ್ ನವೊರೆಮ್.

ಮಿಡ್‍ಫೀಲ್ಡರ್‍ಗಳು: ಬ್ರಾಂಡನ್ ಫೆರ್ನಾಂಡಿಸ್, ಎಡ್ಮಂಡ್ ಲಾಲ್ರಿಂಡಿಕ, ಇಮ್ರಾನ್ ಖಾನ್, ಇಸಾಕ್ ವಾನ್‍ಲಲ್ರುವತ್ಫೆಲ, ಜೀಕ್ಸನ್ ಸಿಂಗ್ ತೌನವೊಜಮ್, ಮಹೇಶ್ ಸಿಂಗ್ ನವೊರೆಮ್, ಮುಹಮ್ಮದ್ ಯಾಸಿರ್, ನಂದಕುಮಾರ್ ಶೇಖರ್, ರಾಹುಲ್ ಕನ್ನೋಲಿ ಪ್ರವೀಣ್, ಸುರೇಶ್ ಸಿಂಗ್ ವಾಂಗ್‍ಜಿಯಮ್, ವಿಬಿನ್ ಮೋಹನನ್.

ಫಾರ್ವರ್ಡ್‍ಗಳು: ಡೇವಿಡ್ ಲಾಲ್‍ಹ್ಲನ್‍ಸಂಗ, ಜಿತಿನ್ ಮಡತಿಲ್ ಸುಬ್ರನ್, ಲಾಲ್‍ರಿಂಝುವಲ, ಪಾರ್ತಿಬ್ ಸುಂದರ್ ಗೊಗೊಯ್, ರಹೀಮ್ ಅಲಿ, ಸುನೀಲ್ ಛೇತ್ರಿ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News