ಒಂದು ಕಿ.ಮೀ. ರಸ್ತೆ ದುರಸ್ತಿಗೆ 20 ಲಕ್ಷ ರೂ. ವೆಚ್ಚ!

Update: 2016-01-24 18:27 GMT

ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿ ಕಾಮಗಾರಿಯಲ್ಲಿ ಅವ್ಯವಹಾರ ಆರೋಪ

ಬೆಳ್ತಂಗಡಿ, ಜ.24: ತಾಲೂಕಿನ ಕುಗ್ರಾಮಗಳೆಂದೇ ಗುರುತಿಸಲ್ಪಟ್ಟಿರುವ ಸವಣಾಲು ಹಾಗೂ ಶಿರ್ಲಾಲು ನಡುವೆ ಸಂಪರ್ಕ ಕಲ್ಪಿಸುವ ಬೆಳ್ತಂಗಡಿ- ಸವಣಾಲು- ಶಿರ್ಲಾಲು ರಸ್ತೆಯಿದೆ. ಸವಣಾಲು-ಕರಂಬಾರು ನಡುವೆ ಎರಡು ಕಿಲೋಮೀಟರ್ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು ಜನರ, ವಾಹನಗಳ ಸಂಚಾರ ಕಷ್ಟ ಸಾಧ್ಯವಾಗಿದೆ. ಈ ರಸ್ತೆಯ ದುರಸ್ತಿಗೆ 20 ಲಕ್ಷ ರೂ. ಮಂಜೂರಾಗಿದ್ದರೂ ರಸ್ತೆ ಮಾತ್ರ ಇನ್ನೂ ಅಭಿವೃದ್ಧಿಯಾಗಿಲ್ಲ. ಕೇವಲ ಒಂದು ಕಿ.ಮೀ. ದೂರ ದುರಸ್ತಿ ಮಾಡಿ ಜನರ ಕಣ್ಣಿಗೆ ಮಣ್ಣೆರಚಿ 20 ಲಕ್ಷ ರೂ. ಅನುದಾನದ ಬಿಲ್ ಮಾಡಲಾಗಿದೆ ಎಂದು ಜನರು ಆರೋಪಿಸುತ್ತಿದ್ದಾರೆ.

ಬೆಳ್ತಂಗಡಿಯಿಂದ ಬೈಲಡ್ಕವರೆಗೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ರಸ್ತೆ ನಿರ್ಮಾಣವಾಗಿದೆ. ಇದು ಎರಡು ರಸ್ತೆಗಳಾಗಿದ್ದು, ಇದೆರಡರ ನಡುವೆ( ಸವಣಾಲು- ಕರಂಬಾರು ನಡುವೆ) ಎರಡು ಕಿಲೋಮೀಟರ್ ರಸ್ತೆ ಸಡಕ್ ವ್ಯಾಪ್ತಿಗೆ ಬರುವುದಿಲ್ಲ. ಈ ರಸ್ತೆ ಕಳೆದ ಕೆಲವು ವರ್ಷಗಳಿಂದ ಸಂಪೂರ್ಣ ಹದಗೆಟ್ಟು ಹೋಗಿತ್ತು. ರಸ್ತೆ ದುರಸ್ತಿಗೆ ಒತ್ತಾಯಿಸಿ ಇಲ್ಲಿನ ಜನರು ನಡೆಸಿದ ಹೋರಾಟಗಳ, ನೀಡಿದ ಮನವಿಗಳ ಫಲವಾಗಿ ನಕ್ಸಲ್ ಪೀಡಿತ ಪ್ರದೇಶಗಳ ವ್ಯಾಪ್ತಿಗೆ ಬರುವ ಈ ಗ್ರಾಮಗಳ ಅಭಿವೃದ್ಧಿಗೆ ವಿಶೇಷ ಅನುದಾನದಲ್ಲಿ 20 ಲಕ್ಷ ರೂ. ಅನುದಾನವನ್ನು ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಮಂಜೂರು ಮಾಡಿತ್ತು. ಇನ್ನಾದರೂ ರಸ್ತೆ ಅಭಿವೃದ್ದಿಯಾಗಬಹುದು ಎಂದು ಇಲ್ಲಿನ ಜನರು ಭಾವಿಸಿದ್ದರೆ, ರಸ್ತೆ ಮಾತ್ರ ದುರಸ್ತಿಯಾಗಲೇ ಇಲ್ಲ.

2014ರಲ್ಲಿ ರಸ್ತೆ ದುರಸ್ತಿಯ ಕಾಮಗಾರಿಯನ್ನೂ ಆರಂಭಿಸಲಾಗಿತ್ತು. ಸವಣಾಲು ಮಸೀದಿಯ ಬಳಿಯಿಂದ ಪೂರ್ಣವಾಗಿ ಹದಗೆಟ್ಟ ಕಡೆಗಳಲ್ಲಿ ಅಲ್ಲಲ್ಲಿ ರಸ್ತೆಯಲ್ಲಿದ್ದ ಡಾಮರನ್ನು ಯಂತ್ರಗಳಿಂದ ತೆಗೆದು ಹಾಕಲಾಗಿತ್ತು. ಮರುಡಾಮರೀಕರಣದ ಬದಲಿಗೆ ಕೇವಲ ಒಂದು ಕಿ.ಮೀ.ವರೆಗೆ ಪ್ಯಾಚ್ ವರ್ಕ್ ಅನ್ನು ಮಾತ್ರ ಮಾಡಲಾಯಿತು. ಅದೂ ಈಗ ಅಲ್ಲಲ್ಲಿ ಎದ್ದು ಹೋಗಲಾರಂಭಿಸಿದೆ. ಉಳಿದೆಡೆ ಅಗೆದು ಹಾಕಿರುವ ರಸ್ತೆ ಇನ್ನೂ ಹಾಗೆಯೇ ಇದೆ. ಅದರತ್ತ ಯಾವ ಅಧಿಕಾರಿಗಳೂ ತಿರುಗಿ ನೋಡಿಲ್ಲ ಎನ್ನುತ್ತಾರೆ ಸ್ಥಳೀಯ ಜನರು.

ದಾಖಲೆಗಳಲ್ಲಿ ಎರಡು ಕಿ.ಮೀ. ಕಾಮಗಾರಿ

ಎರಡು ಕಿಲೋಮೀಟರ್ ರಸ್ತೆ ದುರಸ್ತಿಗೆಂದು 20 ಲಕ್ಷ ರೂ. ಅನು ದಾನ ಮಂಜೂರಾದರೂ ರಸ್ತೆ ಅಭಿವೃದ್ಧಿಯಾಗಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿದಾಗ ಕಂಡುಬರುವ ಮಾಹಿತಿಗಳು ಕುತೂಹಲಕಾರಿಯಾಗಿದೆ. ಕಾಮಗಾರಿಯ ಮೇಲುಸ್ತುವಾರಿ ವಹಿಸಿದ್ದ ಸಹಾಯಕ ಎಂಜಿನಿಯರ್ ಅವರಲ್ಲಿ ಈ ಬಗ್ಗೆ ವಿಚಾರಿಸಿದಾಗ, ‘‘20 ಲಕ್ಷ ರೂ.ಗಳಲ್ಲಿ ಕೇವಲ ಒಂದು ಕಿಲೋಮೀಟರ್ ದುರಸ್ತಿಗೆ ಮಾತ್ರ ಕ್ರಿಯಾಯೋಜನೆ ತಯಾರಿಸಲಾಗಿತ್ತು ಆ ಕಾಮಗಾರಿ ಪೂರ್ಣಗೊಂಡಿದೆ. ಉಳಿದ ರಸ್ತೆಯನ್ನು ವಾಹನ ಸಂಚಾರಕ್ಕೆ ಸುಗಮವಾಗಲೆಂದು ಮೇಲಿನ ಡಾಮರನ್ನು ತೆಗೆದು ಹಾಕಿದ್ದೇವೆ. ಯಾವುದೇ ಅವ್ಯವಹಾರ ಆಗಿಲ್ಲ’’ ಎಂದು ಉತ್ತರ ನೀಡಿದ್ದಾರೆ.

ಆದರೆ 2014ರ ಫೆ.22ರಂದು ಜಿಲ್ಲಾಧಿಕಾರಿಯವರ ನೇತೃತ ್ವದಲ್ಲಿ ನಡೆದ ಸಭೆಯಲ್ಲಿ ಬೆಳ್ತಂಗಡಿಯ ಎಂಜಿನಿಯರಿಂಗ್ ಉಪವಿಭಾಗ ದಿಂದ ಸಲ್ಲಿಸಿರುವ ವರದಿ ಹೇಳುವುದೇ ಬೇರೆ. ಬೈಲಡ್ಕ- ಸವಣಾಲು-ಕರಂಬಾರು ರಸ್ತೆಯ ಸವಣಾಲು- ಕರಂಬಾರು ಮಧ್ಯೆ 2 ಕಿ.ಮೀ ರಸ್ತೆಯ ದುರಸ್ತಿಯ ಕಾರ್ಯ ಪೂರ್ಣಗೊಂಡಿರುವುದಾಗಿ ವರದಿ ನೀಡಿದೆ. ಇದೇ ಸಭೆಯಲ್ಲಿ ಕಾಮಗಾರಿಯ ಗುಣಮಟ್ಟ ಪರಿಶೀಲಿಸುವಂತೆ ಜಿಲ್ಲಾಧಿಕಾರಿಯವರು ಸೂಚನೆಯನ್ನೂ ನೀಡಿದ್ದಾರೆ.

ಇದಲ್ಲದೆ 2014ರ ಜೂ.25ರಂದು ನಡೆದ ಮತ್ತೊಂದು ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, 18.968 ಲಕ್ಷ ರೂ. ಅನುದಾನ ಪಾವತಿಸಲು ಜಿಲ್ಲಾಧಿಕಾರಿಯವರನ್ನು ಕೋರಲಾಗಿರುವುದಾಗಿಯೂ ವರದಿ ಹೇಳಿದೆ. ಇದನ್ನು ಗಮನಿಸಿ ದರೆ ದಾಖಲೆಗಳಲ್ಲಿ ಮಾತ್ರ ಕಾಮಗಾರಿ ನಡೆದಿದೆ ಎಂದು ತೋರಿಸಿ ಅವ್ಯವಹಾರ ನಡೆಸಿರಬಹುದು ಎಂಬ ಅನುಮಾನ ಮೂಡುವಂತಾಗಿದೆ. ಸರಕಾರಿ ಹಾಗೂ ಖಾಸಗಿ ಬಸ್‌ಗಳು ಸಂಚರಿಸುವ ರಸ್ತೆ ಇದಾಗಿದ್ದು, ದ್ವಿಚಕ್ರ ವಾಹನಗಳು ಹಾಗೂ ರಿಕ್ಷಾಗಳು ಈ ರಸ್ತೆಯಲ್ಲಿ ಓಡಾಡುತ್ತಿವೆ. ವಿದ್ಯಾರ್ಥಿಗಳು ಸಾರ್ವಜನಿಕರು ದಿನನಿತ್ಯದ ಪ್ರಯಾಣಕ್ಕೆ ಇದೇ ರಸ್ತೆಯನ್ನು ಅವಲಂಬಿಸಿದ್ದು, ನರಕಯಾತನೆ ಅನುಭವಿಸುವಂತಾಗಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ರಸ್ತೆಯ ಅಭಿವೃದ್ಧಿಯ ಬಗ್ಗೆ ಗಮನಹರಿಸಬೇಕಾಗಿದ್ದು, ನಡೆದಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಯಬೇಕು ಎಂಬುದು ಜನತೆಯ ಆಗ್ರಹ.

ಜಿಲ್ಲಾಧಿಕಾರಿಗೆ ದೂರು

ರಸ್ತೆಯ ಅವ್ಯವಸ್ಥೆಯಿಂದಾಗಿ ಜನರು ಸಂಚರಿಸಲು ಅಸಾಧ್ಯವಾದ ಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಕಾಮಗಾರಿ ಇಲ್ಲಿ ಸರಿಯಾಗಿ ನಡೆದಿಲ್ಲ. ಇದರಲ್ಲಿ ಭಾರೀ ಅವ್ಯವಹಾರವಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗೂ ಮನವಿ ಸಲ್ಲಿಸಲಾಗಿದೆ. ಸಮಗ್ರ ತನಿಖೆ ನಡೆಸಿ ತಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ರಸ್ತೆ ಮರುಡಾಮರೀಕರಣಕ್ಕೆ ಕ್ರಮ ಕೈಗೊಳ್ಳ ಬೇಕಾಗಿದೆ. ಇಲ್ಲವಾದಲ್ಲಿ ನಾಗರಿಕರು ಹೋರಾಟ ನಡೆಸ ಬೇಕಾದ ಅನಿವಾರ್ಯತೆ ಎದುರಾಗಲಿದೆ

ಪುಷ್ಪರಾಜ ಎಂ.ಕೆ. ಮಾಜಿ ಅಧ್ಯಕ್ಷರು, ಗ್ರಾಪಂ ಶಿರ್ಲಾಲು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News