ಅದ್ಭುತ ಮಿಮಿಕ್ರಿ ಕಲಾವಿದ ಈ ಸೆಕ್ಯುರಿಟಿ ಗಾರ್ಡ್ !

Update: 2016-01-26 15:10 GMT

ಮಣಿಪಾಲ, ಜ.26: ಒಡಿಸ್ಸಾದ ರಮಾಕಾಂತ್ ಉದ್ಯೋಗದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದರೂ ತನ್ನ ವಿಶಿಷ್ಟ ಪ್ರತಿಭೆಯಿಂದ ಉಡುಪಿ, ಮಣಿಪಾಲ ಪರಿಸರದಲ್ಲಿ ಜನಮನ್ನಣೆಗೆ ಪಾತ್ರರಾಗುತ್ತಿದ್ದಾರೆ. ಬಾಯಲ್ಲಿ ಸುಮಾರು 20ಕ್ಕೂ ಅಧಿಕ ಬಗೆಯ ಪ್ರಾಣಿ, ಪಕ್ಷಿಗಳ ಕೂಗು, ಸಂಗೀತವನ್ನು ನುಡಿಸುವ ಇವರು ಅದ್ಭುತ ಮಿಮಿಕ್ರಿ ಕಲಾವಿದರಾಗಿ ಮೂಡಿಬಂದಿದ್ದಾರೆ.

ಒಡಿಶಾ ರಾಜ್ಯದ ಜಗತ್‌ಸಿಗ್‌ಪುರ್ ಜಿಲ್ಲೆಯ ದುರ್ಯೋದನ್ ಪರಿಡಾ ಹಾಗೂ ಕಾಮಿನಿ ಪಡಿಯಾ ದಂಪತಿಯ ಪುತ್ರರಾಗಿರುವ ರಮಾಕಾಂತ್, ಎಸ್ಸೆಸೆಲ್ಸಿವರೆಗೆ ಶಿಕ್ಷಣ ಪಡೆದಿದ್ದು, ಅದರ ನಂತರ ನಿರುದ್ಯೋಗ ಸಮಸ್ಯೆಯಿಂದ ಉದ್ಯೋಗ ಅರಸಿ ಉಡುಪಿಗೆ ಬಂದು, ಇದೀಗ ಮಣಿಪಾಲ ವಿವಿಯಲ್ಲಿ ಸೆಕ್ಯು ರಿಟಿ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಮಂಗ, ನಾಯಿ, ನಾಯಿಗಳ ನಡುವಿನ ಜಗಳ, ಆಡು, ಕುರಿ, ಬೆಕ್ಕು, ಬೆಕ್ಕಿನ ಕಾಳಗ, ನರಿ, ದನ, ಕಪ್ಪೆ, ಮಗು ಆಳುವುದು, ಕೋಗಿಲೆ, ಬಾವಲಿ, ಕಾಗೆ, ಕೋಳಿಗಳ ಕೂಗಿನ ಅನುಕರಣೆಯನ್ನು ಬಾಯಲ್ಲಿ ಮಾಡುತ್ತಾರೆ. ಬಸ್ ಹಾರ್ನ್, ಡ್ರಮ್ಸ್ ಹಾಗೂ ಹಲವು ಹಿಂದಿ ಚಿತ್ರಗೀತೆಯ ಸಂಗೀತವನ್ನು ಸುಶ್ರಾವ್ಯವಾಗಿ ನುಡಿಸುತ್ತಾರೆ.

ತಮ್ಮ ರಾಜ್ಯದ ಶಾಲಾ, ಕಾಲೇಜುಗಳ ಸಮಾರಂಭ, ಗ್ರಾಮದ ಜಾತ್ರೆ, ದೇವಸ್ಥಾನಗಳಲ್ಲಿನ ಕಾರ್ಯಕ್ರಮ ಸೇರಿದಂತೆ ಸುಮಾರು 100ಕ್ಕೂ ಅಧಿಕ ಪ್ರದರ್ಶನಗಳನ್ನು ಇವರು ನೀಡಿದ್ದಾರೆ. ತಮ್ಮ ಅದ್ಭುತ ಪ್ರತಿಭೆಗೆ ಇವರು 2007ರಲ್ಲಿ ಅಲ್ಲಿನ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರಿಂದ ಸನ್ಮಾನಗೊಂಡಿದ್ದರು. ಅದೇ ರೀತಿ ಕಳೆದ ಆರು ವರ್ಷಗಳಿಂದ ಮಣಿಪಾಲದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಇವರು, ಇಲ್ಲಿಯೂ ಅನೇಕ ಕಡೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಣಿಪಾಲ, ಉಡುಪಿ, ಕಾಪುಗಳಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಇವರು ತಮ್ಮ ಮಿಮಿಕ್ರಿ ಪ್ರದರ್ಶನವನ್ನು ನೀಡಿದ್ದಾರೆ. ರಮಾಕಾಂತ್ 10-12ವರ್ಷ ಪ್ರಾಯದಲ್ಲಿ ಮನೆ ಸುತ್ತಮುತ್ತಲಿನ ಸಾಕು ಪ್ರಾಣಿಗಳ ಕೂಗನ್ನು ಅನುಕರಿಸಿ ತಾನು ಕೂಡ ಅದೇ ರೀತಿ ಕೂಗುತ್ತಿದ್ದನು. ಮುಂದೆ ಇದನ್ನು ನಿರಂತರ ಅಭ್ಯಾಸ ಮಾಡಿ ಕರಗತ ಮಾಡಿಕೊಂಡರು.

9ನೆ ತರಗತಿಯಲ್ಲಿರುವಾಗ ಇವರ ಪ್ರತಿಭೆಯನ್ನು ಗಮನಿಸಿದ ಶಿಕ್ಷಕಿ ಸಚಿತ್ರ್ ಮಹಾಪಾತ್ರ ರಮಾಕಾಂತ್‌ಗೆ ಇನ್ನಷ್ಟು ಪ್ರೋತ್ಸಾಹ ನೀಡಿದರು. ಇದು ಇವರ ಬದುಕಿನ ತಿರುವು ಆಗಿ ಪರಿಣಮಿಸಿತ್ತು. ನಂತರ 2005ರಲ್ಲಿ ಇವರು ತಮ್ಮ ಊರಿನಲ್ಲಿ ಮೊತ್ತಮೊದಲ ಬಾರಿಗೆ ಸಮಾರಂಭವೊಂದರ ವೇದಿಕೆ ಮೇಲೇರಿ ಪ್ರದರ್ಶನ ನೀಡಿದರು. ಆರಂಭದಲ್ಲಿ ಎರಡು ಮೂರು ಪ್ರಾಣಿ ಪಕ್ಷಿಗಳ ಕೂಗಿಗೆ ಸೀಮಿತವಾಗಿದ್ದ ಇವರ ಮಿಮಿಕ್ರಿ ಈಗ ಅದರ ಸಂಖ್ಯೆ 20ಕ್ಕೆ ಮುಟ್ಟಿದೆ. ಒಂದು ಕಾರ್ಯಕ್ರಮ ದಲ್ಲಿ ಸುಮಾರು 45ನಿಮಿಷಗಳ ಕಾಲ ಮಿಮಿಕ್ರಿ ಪ್ರದರ್ಶನ ನೀಡುವ ಚಾಕಚಕ್ಯತೆ ಇವರಲ್ಲಿದೆ. ಇವರ ಪ್ರತಿಭೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವೇದಿಕೆ ಕಲ್ಪಿಸು ವವರು ಇವರ ಮೊಬೈಲ್ ನಂ.- 8904068891- ನ್ನು ಸಂಪರ್ಕಿಸ ಬಹುದಾಗಿದೆ.

‘ನನ್ನ ನಿರಂತರ ಪರಿಶ್ರಮದಿಂದ ಈ ಕಲೆಯನ್ನು ಕರಗತ ಮಾಡಿಕೊಂಡಿದ್ದೇನೆ. ದೇವರ ಅನುಗ್ರಹದಿಂದ ಈ ಸಾಧನೆ ಮಾಡಲು ನನಗೆ ಸಾಧ್ಯವಾಗಿದೆ. ನನ್ನ ಮನೆಯವರು, ಗ್ರಾಮಸ್ಥರು, ಈಗ ಸಹೋದ್ಯೋಗಿ ಒಳ್ಳೆಯ ಪ್ರೋತ್ಸಾಹ ನೀಡು ತ್ತಿದ್ದಾರೆ. ಮುಂದೆ ಇನ್ನಷ್ಟು ಪ್ರಾಣಿ, ಪಕ್ಷಿಗಳ ಕೂಗನ್ನು ಅಭ್ಯಾಸ ಮಾಡುತ್ತಿದ್ದೇನೆ’

- ರಮಾಕಾಂತ್, ಮಿಮಿಕ್ರಿ ಕಲಾವಿದ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News