×
Ad

ಬೆಂಗಳೂರು;ಪತಿಯನ್ನು ಉಳಿಸಿಕೊಳ್ಳಲು ಹೆತ್ತ ಕಂದಮ್ಮನನ್ನೇ ಮಾರಲು ಹೊರಟ ತಾಯಿ

Update: 2016-01-31 19:36 IST

ಬೆಂಗಳೂರು,ಜ.31-ಪೌರಾಣಿಕದಲ್ಲಿ ಪತಿಯನ್ನು ಉಳಿಸಿಕೊಳ್ಳೋಕೆ ಯಮನನ್ನು ಗೆದ್ದ ಸತಿಯ ಕಥೆಯನ್ನು ಕೇಳಿದೀರಿ, ಆದರೆ ಇಲ್ಲಿನ ಸತಿಯೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪತಿಯನ್ನು ಉಳಿಸಿಕೊಳ್ಳಲು ಹೆತ್ತ ಕಂದಮ್ಮನನ್ನೇ ಮಾರಲು ಹೊರಟಿದ್ದಾಳೆ.!
ನಿಜ,ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಂಡನನ್ನು ಉಳಿಸಿಕೊಳ್ಳಲು ಪತ್ನಿಯೊಬ್ಬಳು ತನ್ನ ಕಂದಮ್ಮನನ್ನೇ ಮಾರಲು ಹೊರಟಿದ್ದಾಳೆ,

ಚಿತ್ರದುರ್ಗ ಮೂಲದ ಜಯಣ್ಣ-ರೂಪಾ ಅವರು 7 ವರ್ಷದ ಹಿಂದೆ ಮನೆಯವರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾಗಿ ಬನಶಂಕರಿಯಲ್ಲಿ ವಾಸವಾಗಿದ್ದು ದಂಪತಿ ಗಾರೆ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ಕಳೆದ ಮಂಗಳವಾರ 3 ಮಕ್ಕಳ ಸುಂದರ ಕುಟುಂಬಕ್ಕೆ ಸಂಕಷ್ಟ ಒದಗಿಬಂದಿತ್ತು. ಅಂದು ಗಾರೆ ಕೆಲಸ ಮಾಡುವಾಗ ಜಯಣ್ಣನಿಗೆ ಸೀಲಿಂಗ್ ಶೀಟ್ ಬಿದ್ದು ಕೈಬೆರಳು ತುಂಡಾಗಿ, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದು ಮಧುಮೇಹದ ಸಮಸ್ಯೆಯಿರುವುದರಿಂದ ಆಪರೇಷನ್ ಕೂಡ ಆಗಿದೆ.

ಬಡತನದ ಬೇಗೆಯಲ್ಲಿರುವ ಇವರಿಗೆ ಆಸ್ಪತ್ರೆಯಲ್ಲಿ ದೊರೆಯದ ಕೆಲವೊಂದು ಔಷಧಗಳನ್ನು ತರಲು ಹೇಳಿದ್ದಾರೆ. ಆದರೆ ತುತ್ತು ಅನ್ನಕ್ಕೂ ಪರದಾಡುವ ಇವರು ಹಣಕ್ಕಾಗಿ ದಿಕ್ಕು ತೋಚದೇ ತಮ್ಮ 6 ತಿಂಗಳ ಹಸುಗೂಸನ್ನು ಮಾರಲು ನಿರ್ಧರಿಸಿದ್ದಾರೆ. ನಿನ್ನೆ ರಾತ್ರಿ ದಿಕ್ಕು ಕಾಣದ ರೂಪಾ ಗಂಡನ ಚಿಕಿತ್ಸೆಗಾಗಿ ಮಗುವನ್ನು ಮಾರ್ತೀನಿ ಹಣ ಕೊಡಿಸಿ ಅಂತ ಕಂಡ ಕಂಡವರಿಗೆ ಕಾಲು ಹಿಡಿದಿದ್ದಾಳೆ. ಅಕ್ಕ ಪಕ್ಕದ ಬೆಡ್‌ನವರು ರೂಪನ ಕಷ್ಟವನ್ನ ನೋಡಲಾರದೆ ಎಲ್ಲರೂ ನೂರು ಇನ್ನೂರು ಸಹಾಯ ಮಾಡಿ ಮಗುವನ್ನು ಮಾರದಂತೆ ಬುದ್ದಿ ಹೇಳಿದ್ದಾರೆ.
ಹೀಗೆ ಅವರು ಇವರು ಕೊಟ್ಟ ಹಣದಿಂದ ರೂಪ ಗಂಡನಿಗೆ ಚಿಕಿತ್ಸೆ ಕೊಡಿಸುತ್ತಿದ್ದಾರೆ. ರೂಪಾ ಪತಿಗೆ ಮಧುಮೇಹ ಬೇರೆ ಇರುವುದರಿಂದ ಇನ್ನೂ 6 ತಿಂಗಳು ಚಿಕಿತ್ಸೆ ಕೋಡಿಸಬೇಕಾಗಿದೆ. ಹೀಗಾಗಿ ದಿಕ್ಕು ತೋಚದೆ ಕೂತಿರುವ ರೂಪಾ ನೆರವಿನ ನಿರೀಕ್ಷೆಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News