×
Ad

ಬೆಂಗಳೂರು :ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಬಿಜೆಪಿ ಹಾಗೂ ಕಾಂಗ್ರೆಸ್ ಭರ್ಜರಿ ಪ್ರಚಾರಕ್ಕೆ ಚಾಲನೆ

Update: 2016-01-31 20:02 IST

ಬೆಂಗಳೂರು,ಜ.31: ತೀವ್ರ ಕುತೂಹಲ ಕೆರಳಿಸಿರುವ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಬಿಜೆಪಿ ಹಾಗೂ ಕಾಂಗ್ರೆಸ್ ಭರ್ಜರಿ ಪ್ರಚಾರಕ್ಕೆ ಚಾಲನೆ ನೀಡಿದ್ದು, ಪರಸ್ಪರ ಆರೋಪ - ಪ್ರತ್ಯಾರೋಪಗಳಲ್ಲಿ ತೊಡಗಿವೆ.

 ಪಕ್ಷದ ನೀತಿ, ಸಿದ್ಧಾಂತಗಳಷ್ಟೇ ಅಲ್ಲದೇ ಮಹದಾಯಿ ನದಿ ನೀರಿನ ವಿಚಾರದ ಬಗ್ಗೆಯೂ ಆರೋಪಗಳ ಸುರಿಮಳೆಯಾಗಿದೆ. ಫೆಬ್ರವರಿ 13 ರಂದು ಉಪ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಹೆಬ್ಬಾಳದ ಬಿ. ನಾಗೇನಹಳ್ಳಿಯಲ್ಲಿ ಕಾಂಗ್ರೆಸ್ ರೆಹಮಾನ್ ಷರೀಫ್ ಅವರ ಪರವಾಗಿ ಪ್ರಚಾರ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಜವನ್ನು ಒಡೆದು ಆಳುತ್ತಿರುವ ಬಿಜೆಪಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ. ವಿಭಜಕ ಶಕ್ತಿಗಳ ವಿರುದ್ಧ ಪಕ್ಷ ತೀವ್ರ ಹೋರಾಟ ನಡೆಸಲಿದೆ ಎಂದು ಘೋಷಿಸಿದ್ದಾರೆ. ಬಿಜೆಪಿ ದೇಶದಲ್ಲಿ ಜಾತಿ, ಧರ್ಮ, ಮತ್ತಿತರ ಮೂಲಭೂತವಾದಿ ಗುಂಪುಗಳ ಮೂಲ ರಾಜಕಾರಣ ಮಾಡುತ್ತಿದೆ. ಏಕತೆಯನ್ನು ಬಯಸುವ ಜನತೆ ಇವರ ರಾಜಕಾರಣಕ್ಕೆ ಸೊಪ್ಪು ಹಾಕುವುದಿಲ್ಲ ಎಂದು ಹೇಳಿದರು. ಮಹದಾಯಿ ನದಿ ನೀರಿನ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಕೈ ತೊಳೆದುಕೊಂಡಿರುವ ಬಗ್ಗೆ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಆದರೆ ಮುಖ್ಯಮಂತ್ರಿಗಳ ಆರೋಪಕ್ಕೆ ಕೇಂದ್ರ ಕಾನೂನು ಸಚಿವ ಸದಾನಂದಗೌಡ ತಿರುಗೇಟು ನೀಡಿದರು. ಬೆಳಗಾವಿ, ಧಾರವಾಡ ಮತ್ತು ಗದಗ್ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಕಳಸಾ ಬಂಡೂರಿ ನಾಲಾ ಯೋಜನೆಯ ಜಾರಿಗೆ ಮಾತ್ರ ರಾಜ್ಯ ಸರ್ಕಾರ ಆಸಕ್ತವಾಗಿದ್ದು ಮಹದಾಯಿ ನೀರು ಹಂಚಿಕೆ ಕುರಿತ ಅಂತರರಾಜ್ಯ ವಿವಾದ ಇತ್ಯರ್ಥಕ್ಕೆ ಆಸಕ್ತಿ ತೋರುತ್ತಿಲ್ಲ ಎಂದು ಆರೋಪಿಸಿದರು.  ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ನಡುವಣ ಮಹದಾಯಿ ನದಿ ನೀರು ಹಂಚಿಕೆ ವಿವಾದ ಬಗೆಹರಿಯದೇ ಇರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಉದಾಸೀನವೇ ಕಾರಣ ಎಂದು ಟೀಕಿಸಿದರು. ನ್ಯಾಯಾಲಯದ ಹೊರಗೆ ಈ ವಿವಾದವನ್ನು ಬಗೆಹರಿಸಿಕೊಳ್ಳಲು ಗೋವಾ ಮತ್ತು ಮಹಾರಾಷ್ಟ್ರ ಸರ್ಕಾರಗಳು ನಿರಾಕರಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಜಲ ಪ್ರಾಧಿಕಾರದ ನಿರ್ಧಾರದವರೆಗೂ ಕಾಯಬೇಕೆಂದು ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿ ರಾಜ್ಯದ ಮುಖ್ಯಮಂತ್ರಿಗೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಸದಾನಂದಗೌಡರ ಈ ಅಸಮಾಧಾನ ವ್ಯಕ್ತವಾಗಿದೆ. ಉಳಿದೆರಡು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಿದ್ದರಾಮಯ್ಯ ವೈಯಕ್ತಿಕವಾಗಿ ಈ ವಿಷಯವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುತ್ತಿಲ್ಲ. ಕೇಂದ್ರಕ್ಕೆ ಪತ್ರ ಬರೆದು ವಿನಾಕಾರಣ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಸದಾನಂದಗೌಡ ಆಕ್ಷೇಪಿಸಿದರು. ಇದಕ್ಕೆ ಪ್ರತಿಯಾಗಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಸದಾನಂದಗೌಡರ ಆರೋಪ ಸತ್ಯಕ್ಕೆ ದೂರವಾಗಿದ್ದು, ಮಹದಾಯಿ ವಿವಾದ ಕುರಿತಂತೆ ದೆಹಲಿಯಲ್ಲಿ ನಡೆದ ಪ್ರತಿಯೊಂದು ಸಭೆಗೂ ತಾವು ಹಾಜರಾಗಿದ್ದು, ಪ್ರಧಾನಿ ಅವರನ್ನೂ ವಿವಾದ ಬಗೆಹರಿಸಲು ನೆರವಾಗುವಂತೆ ಖುದ್ದು ಮನವಿ ಮಾಡಲಾಗಿದೆ. ಕೇಂದ್ರದಿಂದ ಇದಕ್ಕೆ ಸೂಕ್ತ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಉಮಾಭಾರತಿ ಅವರ ಪತ್ರಕ್ಕೆ ಈ ಎಲ್ಲ ಬೆಳವಣಿಗೆಗಳೂ ಕಾರಣ ಎಂದಿದ್ದಾರೆ. ಕೇಂದ್ರದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಮೂವರು ಮಂತ್ರಿಗಳಿದ್ದಾರೆ. ರಾಜ್ಯಕ್ಕೆ ಸಂಬಂಧಿಸಿದ ಈ ವಿವಾದ ಬಗೆಹರಿಸುವಲ್ಲಿ ಅವರ ಜವಾಬ್ದಾರಿಯೂ ಸೇರಿದೆ ಎಂದು ಮುಖ್ಯಮಂತ್ರಿ ಪ್ರತ್ಯಾರೋಪ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News