ಬೆಂಗಳೂರು : ಸೂಫಿ ಚಿಂತನೆಯಿಂದ ಭಯೋತ್ಪಾದನಾ ಕೃತ್ಯಗಳಿಗೆ ತಡೆ - ಎ.ಪಿ. ಉಸ್ತಾದ್

Update: 2016-01-31 17:33 GMT

ಸೂಫಿ ಚಿಂತನೆಯಿಂದ ಭಯೋತ್ಪಾದನಾ ಕೃತ್ಯಗಳಿಗೆ ತಡೆ

*ಕಾಂತಪುರಂ ಅಬೂಬಕ್ಕರ್ ಮುಸ್ಲಿಯಾರ್/ ಎ.ಪಿ. ಉಸ್ತಾದ್

ಬೆಂಗಳೂರು, ಜ.31: ಇಸ್ಲಾಂ ಭಯೋತ್ಪಾದನೆ, ಉಗ್ರವಾದವನ್ನು ವಿರೋಧಿಸುತ್ತಿದೆ. ಇಂತಹ ಚಿಂತನೆಗಳು ಇಸ್ಲಾಮಿನ ಹಾಗೂ ಪ್ರವಾದಿ ಸಂದೇಶಗಳಿಗೆ ವಿರುದ್ಧವಾಗಿದೆ. ಮುಸ್ಲಿಮ್ ಯುವಕರು ಭಯೋತ್ಪಾದನಾ ಚಿಂತನೆಗಳಿಂದ ದೂರವಿದ್ದು, ಸೂಫಿ ಚಿಂತನೆಯನ್ನು ಬೆಳೆಸಿಕೊಂಡು, ಅವರು ತೋರಿಸಿಕೊಟ್ಟ ಹಾದಿಯನ್ನು ಮುಂದುವರಿಸಬೇಕಾಗಿದೆ ಎಂದು ಅಖಿಲ ಭಾರತ ಸುನ್ನಿ ಉಲಮಾ ಒಕ್ಕೂಟದ ಅಧ್ಯಕ್ಷ ಕಾಂತಾಪುರಂ ಅಬೂಬಕರ್ ಮುಸ್ಲಿಯಾರ್ ಹೇಳಿದರು.

ಬೆಂಗಳೂರಿನಲ್ಲಿ ರವಿವಾರ ನಡೆದ ಎಸ್ಸೆಸ್ಸೆಫ್ ಕ್ಯಾಂಪಸ್ ಸಮಾವೇಶದಲ್ಲಿ ಅವರು ಮಾತನಾಡಿದರು.

ಈ ದೇಶದ ಸ್ವಾತಂತ್ರ್ಯಕ್ಕಾಗಿ ಮೌಲಾನ ಮಹಮ್ಮದ್ ಅಲಿ ಜೌಹರ್, ಅಬುಲ್ ಕಲಾಂ ಆಝಾದ್ ರಂತಹ ಮುಸ್ಲಿಂ ನಾಯಕರು, ಉಲಮಾಗಳು ಹೋರಾಡಿದ್ದಾರೆ. ಆದುದರಿಂದ ಮುಸ್ಲಿಮರ ದೇಶಪ್ರೇಮವನ್ನು ಸಂಶಯಿಸುವುದು ಮೂರ್ಖತನ. ಮುಸ್ಲಿಮರ ದೇಶಪ್ರೇಮ ಯಾರ ಮುಂದೆಯೂ ತೋರಿಸಬೇಕಾದ ಅಗತ್ಯವಿಲ್ಲ. ಏಕದೇವ ವಿಶ್ವಾಸದೊಂದಿದೆ ಸೂಫಿ ಚಿಂತನೆಯನ್ನು ಬೆಳೆಸಿದ ಯಾರೂ ಉಗ್ರವಾದದೊಂದಿಗೆ ನಂಟು ಹೊಂದಲು ಸಾಧ್ಯವಿಲ್ಲವೆಂದು ಹೇಳಿದರು.

ಪ್ರಸಕ್ತ ಸನ್ನಿವೇಶದಲ್ಲಿ ದೇಶದಲ್ಲಿ ಭಯೋತ್ಪಾದನೆ, ಉಗ್ರವಾದ ಕೃತ್ಯಗಳ ಹೆಸರಿನಲ್ಲಿ ಹಲವಾರು ಅಮಾಯಕ ಮುಸ್ಲಿಂ ನಿರಪರಾಧಿ ಯುವಕರನ್ನು ಸಂಶಯದ ಆಧಾರದ ಮೇಲೆ ಬಂಧಿಸಲಾಗುತ್ತಿದೆ. ಅವರನ್ನು ವಿಚಾರಣಾಧೀನ ಕೈದಿಗಳಾಗಿ ಸೆರೆಮನೆಯಲ್ಲಿರಿಸುವಂತಹ ಪ್ರಕ್ರಿಯೆಗಳು ನಡೆಯುತ್ತಿದೆ. ಭಯೋತ್ಪಾದನೆ, ಉಗ್ರವಾದದ ಹೆಸರಿನಲ್ಲಿ ಬಂಧಿತರಾದ ಯುವಕರು ಅಪರಾಧಿಗಳಾಗಿದ್ದರೆ ಅವರನ್ನು ಕಠಿಣವಾಗಿ ಶಿಕ್ಷಿಸಬೇಕು. ಅವರು ನಿರಪರಾಧಿಗಳಾಗಿದ್ದರೆ ಅವರನ್ನು ತ್ವರಿತವಾಗಿ ಬಿಡುಗಡೆಗೊಳಿಸಬೇಕು ಎಂದು ಎಪಿ ಉಸ್ತಾದ್ ಒತ್ತಾಯಿಸಿದರು.

ರಾಜ್ಯ ಎಸ್ಸೆಸ್ಸೆಫ್ ಅಧ್ಯಕ್ಷ ಶಾಫಿ ಸಅದಿ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ತಿಮ್ಮೇಗೌಡ ಮಾತನಾಡಿ, ಎಸ್ಸೆಸ್ಸೆಫ್ ಕಾರ್ಯಚಟುವಟಿಕೆಯನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ‘ಡ್ಯೂಟಿ ಆಫ್ ಇಸ್ಲಾಮ್’ ಎಂಬ ವಿಷಯದಲ್ಲಿ ಫೈಝಲ್ ಅಹ್ಸನಿ ರಂಡೆತ್ತಾನಿ, ‘ಕ್ಯಾಂಪಸ್ ರೋಲ್ ಮಾಡೆಲ್’ ಎಂಬ ವಿಷಯದಲ್ಲಿ ಅಬೂಬಕರ್ ನೂರಾನಿ, ಱಆಧ್ಯಾತ್ಮಿಕ ಬದಲಾವಣೆ’ ಎಂಬ ವಿಷಯದಲ್ಲಿ ಡಾ. ಅಬ್ದುಲ್ ಸಲಾಮ್ ದೇವರಶೋಲ ಉಸ್ತಾದ್ ವಿಷಯ ಮಂಡಿಸಿದರು.

ಪ್ರೆಸ್ಟೀಜ್ ಯುನಿವರ್ಸಿಟಿಯ ಉಪಕುಲಪತಿ, ರಾಜ್ಯ ಎಸ್ಸೆಸ್ಸೆಫ್ ಉಪಾಧ್ಯಕ್ಷ ಇಸ್ಮಾಯೀಲ್ ಸಖಾಫಿ, ಅಬ್ದುಲ್ ರಹ್ಮಾನ್ ರಝ್ವಿ ಕಲ್ಕಟ್ಟ, ಸೈಯದ್ ಸಿ.ಟಿ.ಎಂ. ತಂಙಳ್ ಮನ್‌ಶರ್, ಅಬ್ದುಲ್ ರಹ್ಮಾನ್ ಮಂಗಳೂರು, ರಾಷ್ಟ್ರೀಯ ಕಾರ್ಯದರ್ಶಿ ಸಿದ್ಧೀಕ್ ಮೋಂಟುಗೋಳಿ, ಯಾಕೂಬ್ ಮಾಸ್ಟರ್ ಮಡಿಕೇರಿ, ಅಬ್ದುಲ್ ಹಮೀದ್ ಮಡಿಕೇರಿ ಮುಂತಾದವರು ಉಪಸ್ಥಿತರಿದ್ದರು.

ಸ್ವಾದಿಕ್ ಮಾಸ್ಟರ್ ಸ್ವಾಗತಿಸಿದರು. ಶರೀಫ್ ಬೆಂಗಳೂರು ವಂದಿಸಿದರು. ಮುಜೀಬ್ ಸಖಾಫಿ ಕಾರ್ಯಕ್ರಮ ನಿರೂಪಿಸಿದರು....

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News