ಬೆಂಗಳೂರು;ಕರ್ನಾಟಕದಲ್ಲಿ ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಮುಂದೆ ಬರುವ ಕೈಗಾರಿಕೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ
ಬೆಂಗಳೂರು.ಫೆ.1: ಈ ತಿಂಗಳ 3ರಿಂದ 5ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶ-ಇನ್‌ವೆಸ್ಟ್ ಕರ್ನಾಟಕದಲ್ಲಿ ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಮುಂದೆ ಬರುವ ಕೈಗಾರಿಕೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ, ಸಹಾಯದ ಜತೆಗೆ ಯೋಜನೆ ಅನುಷ್ಠಾನ ಹಾಗೂ ಉದ್ಯೋಗ ಸೃಷ್ಠಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಹೂಡಿಕೆದಾರರ ಸಮಾವೇಶದಲ್ಲಿ ಐದು ಲಕ್ಷ ಕೋಟಿ ರೂ ಬಂಡವಾಳ ಆಕರ್ಷಿಸಲಾಗುವುದು. ನಿರುದ್ಯೋಗ ಸಮಸ್ಯೆ ನಿವಾರಿಸಲು ಪ್ರಧಾನ ಆದ್ಯತೆ ನೀಡುತ್ತಿದ್ದು, 15 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗಿನ ಸಂವಾದದಲ್ಲಿ ಮಾತನಾಡಿದ ಅವರು, ವಿವಿಧ ಜಿಲ್ಲೆಗಳಿಗೆ ಬಂಡವಾಳ ಆಕರ್ಷಿಸಲು ಒತ್ತು ನೀಡಲಾಗುವುದು. ಬೆಂಗಳೂರು ಹಾಗೂ ಸುತ್ತಮುತ್ತ ಕೈಗಾರಿಕೆಗಳು ಕೇಂದ್ರೀಕೃತವಾಗದೆ, ರಾಜ್ಯದ 2 ಮತ್ತು 3ನೇ ಶೇಣಿ ನಗರಗಳಲ್ಲಿ ಬಂಡವಾಳ ಹೂಡಿಕೆ ಮೂಲಕ ಪ್ರಾದೇಶಿಕ ಅಸಮತೋಲನ ನಿವಾರಣೆ ಹಾಗೂ ಇತರೆ ಜಿಲ್ಲೆಗಳಲ್ಲೂ ಹೆಚ್ಚಿನ ಉದ್ಯೋಗವಕಾಶ ಲಭಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕೈಗಾರಿಕೆಗಳು ಸ್ಥಳೀಯರಿಗೆ ಉದ್ಯೋಗ ನೀಡಬೇಕು. ಈ ವಿಚಾರದಲ್ಲಿ ಯಾವುದೇ ರಾಜೀ ಇಲ್ಲ. ಕೈಗಾರಿಕೆಗಳು ಕೆಳ ಹಂತದ ಉದ್ಯೋಗ ನೀಡಲೇಬೇಕಾಗಿದೆ. ನಮ್ಮದು ಒಕ್ಕೂಟ ವ್ಯವಸ್ಥೆ. ಇಲ್ಲಿ ಶೇ 100 ರಷ್ಟು ಕನ್ನಡಿಗರಿಗೆ ಉದ್ಯೋಗ ದೊರಕಿಸಿಕೊಡುವಂತೆ ಒತ್ತಡ ಹೇರಲು ಸಾಧ್ಯವಿಲ್ಲ. ತಾಂತ್ರಿಕೇತರ ಮತ್ತು ಕೌಶಲ್ಯವಲ್ಲದ ಉದ್ಯೋಗಳನ್ನು ಸ್ಥಳೀಯರಿಗೆ ನೀಡುವಂತೆ ಕೋರಲಾಗುವುದು ಎಂದರು. ಹೊಸ ಕೈಗಾರಿಕಾ ನೀತಿಯನ್ವಯ ಮುಂದಿನ ಮೂರು ವರ್ಷಗಳಲ್ಲಿ ಐದು ಲಕ್ಷ ಕೋಟಿ ರೂ ಬಂಡವಾಳ ಆಕರ್ಷಿಸಿ, ಐದು ಲಕ್ಷ ಉದ್ಯೋಗವಕಾಶಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾದರೆ ಸಹಜವಾಗಿಯೇ ಸ್ಥಳೀಯರಿಗೆ ಉದ್ಯೋಗ ದೊರೆಯಲಿದೆ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು.
ಸಮಾವೇಶದಲ್ಲಿ ಬೃಹತ್ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು. ಮೂಲ ಸೌಕರ್ಯ ಮತ್ತು ಕೈಗಾರಿಕಾ ವಲಯದಲ್ಲಿ ಈಗಾಗಲೇ 116 ಯೋಜನೆಗಳನ್ನು ಗುರುತಿಸಲಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 1.30 ಲಕ್ಷ ಕೋಟಿ ರೂ ಬಂಡವಾಳ ಹರಿದು ಬಂದಿದೆ. ಹೊಸ ಕೈಗಾರಿಕಾ ನೀತಿಯಿಂದ ಶೇ 12 ರಷ್ಟು ಕೈಗಾರಿಕಾ ಬೆಳವಣಿಗೆ ಸಾಧಿಸುವ ಉದ್ದೇಶ ಹೊಂದಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು. ಇಂತಹ ಮಹತ್ವದ ಹೂಡಿಕೆದಾರರ ಸಮಾವೇಶದಲ್ಲಿ ಜಗತ್ತಿನ ಪ್ರಮುಖ 100 ಕಂಪೆನಿಗಳ ಮುಖ್ಯಸ್ಥರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಜಾಗತಿಕ ಮತ್ತು ಸ್ಥಳೀಯ ಕಾರ್ಪೋರೇಟ್ ಕಂಪೆನಿಗಳು ಸಮಾವೇಶದಲ್ಲಿ ಭಾಗಿಯಾಗಲಿವೆ ಎಂದು ತಿಳಿಸಿದರು. ರಾಜ್ಯವು ವಿಪುಲ ನೈಸರ್ಗಿಕ ಹಾಗೂ ಮಾನವ ಸಂಪತ್ತು ಹೊಂದಿದ್ದು, ಬಂಡವಾಳ ಹೂಡಿಕೆದಾರರಿಗೆ ನೆಚ್ಚಿನ ತಾಣವಾಗಿದ್ದು, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಅವರು ತಿಳಿಸಿದರು.
ಇಂಧನ ಕ್ಷೇತ್ರಕ್ಕೆ ಆದ್ಯತೆ ನೀಡುವ ಮೂಲಕ 2022ರ ವೇಳೆಗೆ ವಿವಿಧ ಮೂಲಗಳಿಂದ 22 ಗಿಗಾ ವ್ಯಾಟ್ವಿದ್ಯುತ್ ಉತ್ಪಾದನೆ ಗುರಿ ಹೊಂದಲಾಗಿದೆ, ಅಲ್ಲದೆ, ಪ್ರಸಕ್ತ ಸಾಲಿನ ಜುಲೈ ವೇಳೆಗೆ ವಿವಿಧ ಯೋಜನೆಗಳ ಅನುಷ್ಠಾನದೊಂದಿಗೆ ವಿದ್ಯುತ್ ಕೊರತೆ ನಿವಾರಣೆಗೆ ಉದ್ದೇಶಿಸಲಾಗಿದೆ ಎಂದು ಅವರು ವಿವರಿಸಿದರು.
ಮೂಲಭೂತ ಸೌಕರ್ಯ ಹಾಗೂ ಬೆಂಗಳೂರು ಅಭಿವೃದ್ಧ್ದಿಗೆ ಪ್ರಾಶಸ್ತ್ಯ ನೀಡಲಾಗಿದೆ, ನಮ್ಮ ಮೆಟ್ರೊ ಒಂದನೇ ಹಂತ ಪೂರ್ಣಗೊಂಡಿದ್ದು, ಮೆಟ್ರೊ 2ನೇ ಹಂತದ ಕಾಮಗಾರಿ ಆರಂಭಿಸಲಾಗಿದೆ, ಇದರೊಂದಿಗೆ ಕೆಐಎಎಲ್ ಎಕ್ಷ್‌ಪ್ರೆಸ್‌ವೇ ನಿರ್ಮಾಣ ಕಾರ್ಯವೂ ಆರಂಭವಾಗಿದೆ, ಉತ್ತರ ದಕ್ಷಿಣ, ಪೂರ್ವ ಪಶ್ಚಿಮ ಕಾರಿಡಾರ್‌ಗಳ ಅಭಿವೃದ್ಧಿ ಸರ್ಕಾರದ ಮುಂದಿನ ಹೆಜ್ಜೆಯಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ಎಲ್ಲರನ್ನೂ ಒಳಗೊಂಡ ಸಮರ್ಥ-ಸಮತೋಲಿತ ಕೈಗಾರಿಕಾ ಅಭಿವೃದ್ಧಿಯೊಂದಿಗೆ ಅಭ್ಯುದಯ ಕರ್ನಾಟಕ ನಿರ್ಮಾಣ ಹಾಗೂ ಹೆಚ್ಚಿನ ಉದ್ಯೋಗಾವಕಾಶ ಸೃಷ್ಠಿ ಈ ಸಮಾವೇಶದ ಧ್ಯೇಯೋದ್ದೇಶವಾಗಿದೆ ಎಂದು ಅವರು ಹೇಳಿದರು. ಮಹಿಳಾ ಉದ್ಯಮಿಗಳನ್ನು ಆಕರ್ಷಿಸಲು ಹಾಗೂ ಉತ್ತೇಜಿಸಲು ಹಾರೋಹಳ್ಳಿಯಲ್ಲಿ ಇದೇ ಮೊದಲೊ ಬಾರಿಗೆ ಪ್ರತ್ಯೇಕ ಮಹಿಳಾ ಕೈಗಾರಿಕಾ ಪ್ರದೇಶ ಅಭಿವೃದ್ಧಿಪಡಿಸಲಾಗುವುದು, ನಿಯಾಮಾವಳಿ ಸರಳೀಕರಣ ಸಂಬಂಧ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ, ಮುಂದಿನ ದಿನಗಳಲ್ಲಿ ವ್ಯಾಪಾರ ಮತ್ತು ಬಂಡವಾಳ ಹೂಡಿಕೆಗೆ ಅವಕಾಶವಾಗುವಂತೆ ನಿಯಾಮಾವಳಿಗಳನ್ನು ಮತ್ತಷ್ಟು ಸರಳೀಕರಣಗೊಳಿಸಲಾಗುವುದು ಎಂದು ಅವರು ತಿಳಿಸಿದರು. ಇನ್‌ವೆಸ್ಟ್ ಕರ್ನಾಟಕ ಸಮಾವೇಶದ ಒಂದು ಲಕ್ಷ ಚದರ ಅಡಿ ಪ್ರದೇಶದಲ್ಲಿ ವಸ್ತು ಪ್ರದರ್ಶನ ಆಯೋಜಿಸಲಾಗಿದ್ದು, 400ಕ್ಕೂ ಹೆಚ್ಚು ಪ್ರದರ್ಶನಕಾರರು ತಮ್ಮ ಕ್ಷೇತ್ರಗಳ ವೈಶಿಷ್ಠ್ಯತೆ ಪ್ರದರ್ಶಿಸಲು ಮಳಿಗೆಗಳನ್ನು ಪಡೆದಿದ್ದಾರೆ ಎಂದು ಅವರು ಹೇಳಿದರು.