ಮೊಹಮ್ಮದ್ ಅಲಿ ಶಿಹಾಬ್ : ಅನಾಥಾಲಯದಿಂದ ಐಎಎಸ್ ವರೆಗಿನ ಅಪರೂಪದ ಯಶೋಗಾಥೆ

Update: 2016-02-05 08:55 GMT

ಅಲಿ , ನಿಮ್ಮ ಸಾಮರ್ಥ್ಯವೇನು ? ೨೦೧೧ ರಲ್ಲಿ ಯುಪಿಎಸ್ಸಿ ಸಂದರ್ಶನದಲ್ಲಿ ಕೇಳಿದ ಪ್ರಶ್ನೆಯಿದು. ಈ ಪ್ರಶ್ನೆಗೆ ಮೊಹಮ್ಮದ್ ಅಲಿ ಶಿಹಾಬ್ ನೀಡಿದ ಉತ್ತರ ಅವರ ಬದುಕನ್ನೇ ಬದಲಿಸಿಬಿಟ್ಟಿತು . 

"ಕೇರಳದ ಮಲಪ್ಪುರಂ ಜಿಲ್ಲೆಯ ಕುಗ್ರಾಮವೊಂದರಲ್ಲಿ ಹುಟ್ಟಿದ ನಾನು ಅನಾಥಾಶ್ರಮವೊಂದರಲ್ಲಿ ಬೆಳೆದಿದ್ದೇನೆ. ೧೫೦ ಇತರ ಮಕ್ಕಳೊಂದಿಗೆ ಬೆಳೆದ ನಾನು ದಿನದ ೨೪ ಗಂಟೆ ಕೂಡ ಸಮಾಜ ಜೀವಿಯಾಗಿದ್ದೆ. ಈ ಅವಧಿಯಲ್ಲಿ ಸಹಿಷ್ಣುತೆ, ತಾಳ್ಮೆ ಹಾಗು ನಾಯಕತ್ವ ಗುಣ ಸಹಿತ ಮಾದರಿ ಜನ ಸೇವಕನಿಗೆ ಇರಬೇಕಾದ ಎಲ್ಲ ಗುಣಗಳನ್ನು ನನಗೆ ಆ ಅನಾಥಾಶ್ರಮ ಕಲಿಸಿದೆ " ಎಂದು ಉತ್ತರಿಸಿದರು ಮೊಹಮ್ಮದ್ ಅಲಿ ಶಿಹಾಬ್ . 

ಈ ಒಂದು ಉತ್ತರದ ಮೂಲಕ ಲಕ್ಷಾಂತರ ಮಂದಿ ಕನಸು ಕಾಣುವ , ಕೆಲವೇ ಕೆಲವರ ಪಾಲಿಗೆ ಮಾತ್ರ ನನಸಾಗುವ " ಐಎಎಸ್ ಅಧಿಕಾರಿ " ಎಂಬ ಹುದ್ದೆಗಿದ್ದ  ಕೊನೆಯ ಅಡೆತಡೆಯನ್ನು ಶಿಹಾಬ್ ಯಶಸ್ವಿಯಾಗಿ ದಾಟಿದರು. ಕ್ಯಾಲಿಕಟ್ ನ ಮುಕ್ಕಾಂ ಮುಸ್ಲಿಂ ಅನಾಥಾಲಯದ ಹುಡುಗ ಆ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲಿ ದೇಶಕ್ಕೆ ೨೨೬ ನೆ ಸ್ಥಾನದೊಂದಿಗೆ ಆಯ್ಕೆಯಾಗಿದ್ದ. 

ಈಗ ನಾಗಾಲ್ಯಾಂಡ್ ನ ಮೊನ್ ನಲ್ಲಿ ಜಿಲ್ಲಾಧಿಕಾರಿಯಾಗಿರುವ ಶಿಹಾಬ್ ಇನ್ನೊಂದು ಮಹತ್ಕಾರ್ಯಕ್ಕೆ ಮುಂದಾಗಿದ್ದಾರೆ. ಯುವಜನರಲ್ಲಿರುವ ನಾಗರಿಕ ಸೇವಾ ಪರೀಕ್ಷೆಗಳ ಕುರಿತ ಅನಗತ್ಯ ಭಯ ಹಾಗು ಭ್ರಮೆಗಳನ್ನು ನಿವಾರಿಸಿ ಅವರನ್ನು ಈ ಮಹತ್ವದ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಲು ಸಜ್ಜುಗೊಳಿಸುವುದು ಈಗ ಅವರ ಗುರಿ. " ಚಿಕ್ಕ ವಯಸ್ಸಲ್ಲೇ ತಂದೆಯನ್ನು ಕಳಕೊಂಡ ನಾನು ಇವತ್ತು ಐಎಎಸ್ ಅಧಿಕಾರಿಯಾಗಿದ್ದೇನೆ. ನನ್ನ ಪಾಲಿಗೆ ನನ್ನ ಶಿಕ್ಷಕರೇ ಹೀರೋಗಳು . ಹಾಗಾಗಿ ನಾನೂ ಇನ್ನೊಂದು ಅನಾಥಾಲಯದಲ್ಲಿ ಶಿಕ್ಷಕನಾಗುವ ಕನಸು ಮಾತ್ರ ಕಂಡಿದ್ದೆ. ಆದರೆ ಪರಿಶ್ರಮ ಹಾಗು ಛಲ ಇದನ್ನು ಸಾಧ್ಯವಾಗಿಸಿತು" ಎಂದು ಟೂ ಸರ್ಕಲ್ಸ್ ಡಾಟ್ ನೆಟ್ ಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ. 

" ನಮ್ಮ ದೇಶದಲ್ಲಿ ಕೇವಲ ಪದವಿ ಪಡೆದವರೂ ಐಎಎಸ್ ಪರೀಕ್ಷೆ ಎದುರಿಸಿ, ಯಶಸ್ವಿಯಾಗಬಹುದು. ಇಲ್ಲಿ ಬೇಧ ಭಾವ ಇಲ್ಲ. ವ್ಯವಸ್ಥೆ ಪೂರ್ಣ ಪಾರದರ್ಶಕವಾಗಿದೆ. ಆದರೆ ಕೇವಲ ನಮ್ಮ ಮನೋಭಾವನೆಯಿಂದಾಗಿಯೇ ಹೆಚ್ಚಿನ ಯುವಜನತೆ ಈ ಪರೀಕ್ಷೆ ಪಾಸಾಗುವಲ್ಲಿ ಎಡವುತ್ತಿದ್ದಾರೆ. ಇಂತಹ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಅವರಲ್ಲಿ ಜಾಗೃತಿ ಮೂಡಿಸುವ ಮೂಲಕ ಈ ಮನೋಭಾವ ಬದಲಾಯಿಸುವುದು ನನ್ನ ಗುರಿ " ಎಂದು ಹೇಳಿದ್ದಾರೆ ೩೫ ರ ಹರೆಯದ ಶಿಹಾಬ್. 

ಮಲಯಾಳಂ ಮಾಧ್ಯಮದಲ್ಲಿ ಕಲಿತ ಶಿಹಾಬ್ "ಮೈನ್ಸ್ ( ಮುಖ್ಯ ಲಿಖಿತ )"  ಪರೀಕ್ಷೆಯನ್ನು ಮಲಯಾಳಂ ನಲ್ಲೇ ಬರೆದಿರುವುದು ಅವರ ಇನ್ನೊಂದು ಸಾಧನೆಯಾಗಿದೆ. 

ಪ್ರತಿ ಬಾರಿ ಶಿಹಾಬ್ ರಜೆಯಲ್ಲಿ ಊರಿಗೆ ಬಂದರೆ ಹೆಚ್ಚಿನ ಸಮಯ ಶಾಲಾ ಕಾಲೇಜುಗಳು , ಅನಾಥಾಳಯಗಳಲ್ಲಿ  ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲೇ ಕಳೆಯುತ್ತಾರೆ. " ನಂಬುವುದು ಕಷ್ಟ , ಕಳೆದ ಬಾರಿ ಒಂದು ತಿಂಗಳ ರಜೆಯಲ್ಲಿ ಹೋದಾಗ ನಾನು ೨೯ ದಿನ ಬೇರೆ ಬೇರೆ ಶಿಕ್ಷಣ ಸಂಸ್ಥೆಗಳಿಗೆ ಹೋಗುವುದರಲ್ಲೇ ಕಳೆದು ಹೋಯಿತು " ಎಂದು ಹೇಳುತ್ತಾರೆ ಶಿಹಾಬ್. 

ಶಿಹಾಬ್ ಗೆ ದೆಹಲಿಯ ಝಕಾತ್ ಫ಼ಉನ್ದೆಶನ್ ಯುಪಿಎಸ್ಸಿ ಪರೀಕ್ಷೆಗೆ ಉಚಿತ ತರಬೇತಿ ನೀಡಿ ಸಹಕರಿಸಿತ್ತು. ವೃತ್ತಿ ಜೀವನದ ಅನುಭವದಿಂದ ಅನಾಥಾಲಯಗಳ ಮಕ್ಕಳು ಎದುರಿಸುವ ಸವಾಲುಗಳನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ ಎಂಬುದು ಶಿಹಾಬ್ ರ ಅಭಿಪ್ರಾಯ. 

ಅನಾಥಾಲಯ ಬಿಟ್ಟ ಬಳಿಕ ನಾನು ಅಲ್ಲಿಗೆ ಆಗಾಗ ಹೋಗುತ್ತಿದ್ದೆ. ಅಲ್ಲಿರುವವರಲ್ಲಿ ಹೆಚ್ಚಿನವರಿಗೆ ಪ್ರತಿಭೆಯಿದ್ದರೂ ಅವರಿಗೆ ಸರಿಯಾಗಿ ಮಾರ್ಗದರ್ಶನ , ಪ್ರೋತ್ಸಾಹ ಸಿಗುತ್ತಿರಲಿಲ್ಲ. ದೇವರ ದಯೆಯಿಂದ ನಾನು ಯಶಸ್ವಿಯಾದೆ. ಇನ್ನು ಅಂಥಹ ಮಕ್ಕಳನ್ನು ಪ್ರೋತ್ಸಾಹಿಸಲು , ತರಬೇತಿ ನೀಡಲು ನಾನು ಹೆಚ್ಚಿನ ಸಮಯ ಮೀಸಲು ಇಡಲು ನಿರ್ಧರಿಸಿದ್ದೇನೆ ಎಂದು ಶಿಹಾಬ್ ಹೇಳುತ್ತಾರೆ. 

ಐಎಎಸ್ ಅಧಿಕಾರಿಯಾದ ಮೇಲೆ ಶಿಹಾಬ್ ರಿಗೆ ಅವರ ಅನಾಥಾಲಯದಲ್ಲಿ ಸನ್ಮಾನ ಏರ್ಪಡಿಸಿದ್ದರು. ಆಗ ಅಲ್ಲಿದ್ದ ವಿದ್ಯಾರ್ಥಿಗಳ ಬಳಿ "ನಿಮ್ಮ ಗುರಿಯೇನು ? " ಎಂದು ನಾನು ಕೇಳಿದೆ. ಆಗ ಎಲ್ಲ ಮಕ್ಕಳು ಐಎಎಸ್, ಐಎಎಸ್ ಎಂದರು. ಮೂರು ನಾಲ್ಕು ವರ್ಷದ ಮಕ್ಕಳು ಅದೇ ಉತ್ತರ ನೀಡಿದರು. ಅವರಿಗೆ ಹಾಗಂದರೆ ಏನೆಂದೇ ಗೊತ್ತಿಲ್ಲ. ಆದರೂ ಹಾಗೆ ಹೇಳಿದ್ದು ನೋಡಿ ನನಗೆ ಮನಸ್ಸು ತುಂಬಿ ಬಂತು. ಅದು ನನ್ನ ಪಾಲಿಗೆ ಅತ್ಯಂತ ಸ್ಮರಣೀಯ ದಿನ " ಎಂದು ಶಿಹಾಬ್ ನೆನಪಿಸಿಕೊಳ್ಳುತ್ತಾರೆ.

ಕೃಪೆ: www.twocircles.net

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News