×
Ad

ಪಂಚಾಯತ್ ಚುನಾವಣೆ:ಪಕ್ಷ ರಾಜಕಾರಣವನ್ನು ತಿರಸ್ಕರಿಸಿ

Update: 2016-02-09 23:14 IST

ಒಂದೆಡೆ ಬೆಂಗಳೂರಿನಲ್ಲಿ ಉಪಚುನಾವಣೆಯ ಕಾವು. ಇದರ ನಡುವೆಯೇ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ರಾಜ್ಯದಲ್ಲಿ ರಾಜಕೀಯ ನಾಯಕರನ್ನು ತಮ್ಮ ತಮ್ಮ ಕ್ಷೇತ್ರಗಳೆೆಡೆಗೆ ಸೆಳೆದಿವೆ. ಚುನಾವಣೆ ಗೆದ್ದು ಬೆಂಗಳೂರು ಸೇರಿದವರೆಲ್ಲ, ಅನಿವಾರ್ಯವಾಗಿ ತಮ್ಮ ಕ್ಷೇತ್ರಗಳಿಗೆ ಭೇಟಿ ನೀಡಲೇಬೇಕಾದಂತಹ ಸ್ಥಿತಿ. ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗಿಂತಲೂ, ಸ್ಥಳೀಯ ಪಂಚಾಯತ್ ಚುನಾವಣೆಗಳ ಕುರಿತಂತೆ ಪಕ್ಷಗಳು ಹೆಚ್ಚು ತಲೆಕೆಡಿಸಿಕೊಂಡಿವೆ. ಪಂಚಾಯತ್ ಚುನಾವಣೆಯೆಂದರೆ, ಪಕ್ಷಗಳ ತಳ ಮಟ್ಟದ ಕಾರ್ಯಕರ್ತರ ಸಂಘಟನೆಯೂ ಹೌದು. ತಳಮಟ್ಟದಿಂದ ಪಕ್ಷವನ್ನು ಬೆಳೆಸಬೇಕಾದರೆ, ತಳ ಮಟ್ಟದಿಂದಲೇ ಅಧಿಕಾರವನ್ನು ಹಿಡಿಯಬೇಕು. ಹಾಗೆಯೇ ತಮ್ಮ ತಮ್ಮ ಹಿಂಬಾಲಕರಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿದರೆ, ಮುಂದಿನ ಮಹಾಚುನಾವಣೆಯ ಸಂದರ್ಭದಲ್ಲಿ ಅದು ಅವರಿಗೆ ಅನುಕೂಲಕರವಾಗಿ ಪರಿಣಮಿಸುತ್ತದೆ. ಈ ದೂರದೃಷ್ಟಿಯನ್ನು ಹೊಂದಿರುವುದರಿಂದಲೇ, ನಾಯಕರು ಜಿಲ್ಲಾಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯ ಕುರಿತಂತೆ ತಲೆಕೆಡಿಸಿಕೊಳ್ಳುತ್ತಿದ್ದಾರೆ. ತಮ್ಮ ತಮ್ಮ ಅಭ್ಯರ್ಥಿಗಳಿಗೆ ಟಿಕೆಟ್ ಕೊಡಿಸುವಲ್ಲಿ ಭಾರೀ ಲಾಬಿ ನಡೆಯುತ್ತಿದೆ. ಹಣದ ವ್ಯವಹಾರಗಳು ತೀವ್ರವಾಗಿವೆ. ಯಾವುದೇ ಮಹಾಚುನಾವಣೆಗೆ ಕಮ್ಮಿಯಿಲ್ಲದಂತೆ, ಪರಸ್ಪರ ಕೆಸರೆರಚಾಟ, ಟೀಕೆ, ಆರೋಪ, ಗದ್ದಲಗಳು ಕಾಣಿಸಿಕೊಳ್ಳುತ್ತಿವೆ. ಅಧಿಕಾರ ರಾಜಧಾನಿಯಲ್ಲಿ ಕೇಂದ್ರೀಕೃತವಾಗಿರಬಾರದು. ಅದು ತಳಮಟ್ಟದವರೆಗೂ ಹಂಚಿ ಹೋಗಬೇಕು ಎನ್ನುವ ಕಾರಣಕ್ಕಾಗಿ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯನ್ನು ಜಾರಿಗೊಳಿ ಸಲಾಗಿದೆ. ನಮ್ಮ ಹಳ್ಳಿ, ಪಟ್ಟಣದ ರಸ್ತೆಯನ್ನು, ಶಾಲೆಯನ್ನು ಬೆಂಗಳೂರಿ ನಲ್ಲಿ ಕೂತ ರಾಜಕಾರಣಿಗಳು ಅಭಿವೃದ್ಧಿಗೊ ಳಿಸಲು ಸಾಧ್ಯವಿಲ್ಲ. ನಮ್ಮ ಜಿಲ್ಲೆ, ನಮ್ಮ ತಾಲೂಕು, ನಮ್ಮ ಗ್ರಾಮದ ಅಭಿವೃದ್ಧಿ ಜನರ ಕೈಯಲ್ಲೇ ಇರಬೇಕು ಎನ್ನುವ ಕಾರಣದಿಂದ ಈ ವ್ಯವಸ್ಥೆಯನ್ನು ಅನು ಷ್ಠಾನಕ್ಕೆ ತರಲಾಗಿದೆ. ಪ್ರಜಾಪ್ರಭುತ್ವ ಇನ್ನಷ್ಟು ಪರಿಣಾಮಕಾರಿಯಾಗಿ ಜನರನ್ನು ತಲುಪಿದ್ದು ಅಧಿಕಾರ ವಿಕೇಂದ್ರೀಕರಣದ ಮೂಲಕ. ಹಳ್ಳಿ-ದಿಲ್ಲಿಯ ನಡುವೆ ಈ ವಿಕೇಂದ್ರೀಕರಣ ವ್ಯವಸ್ಥೆ ಸೇತುವೆ ಯನ್ನು ನಿರ್ಮಿಸಿತು. ಆದರೆ ಈ ವಿಕೇಂದ್ರೀ ಕರಣದ ಸದುದ್ದೇಶವನ್ನು ರಾಜಕಾರಣಿಗಳ ಹಸ್ತಕ್ಷೇಪ ಸಂಪೂರ್ಣ ನಾಶ ಮಾಡು ತ್ತಿದೆ. ರಾಜಕೀಯ ರಹಿತವಾಗಿ ನಡೆಯಬೇ ಕಾಗಿದ್ದ ಈ ಚುನಾವಣೆ ಇಂದು ರಾಜಕೀಯ ಪಕ್ಷಗಳ ನೇತೃತ್ವದಲ್ಲೇ ನಡೆಯುತ್ತಿದೆ. ಯಾರು ಚುನಾವಣೆಗೆ ನಿಲ್ಲಬೇಕು, ಯಾರು ಗೆಲ್ಲಬೇಕು, ಯಾರು ಸೋಲಬೇಕು ಎನ್ನುವುದದೆಲ್ಲ ರಾಜಧಾನಿ ಯಲ್ಲೇ ತೀರ್ಮಾನವಾಗುತ್ತದೆ. ಜನರಿಗೆ ತಮ್ಮದೇ ಆದ ಅಭ್ಯರ್ಥಿಯನ್ನು ಗೆಲ್ಲಿಸುವ ಸ್ವಾತಂತ್ರವೂ ಇಲ್ಲದಂತಾಗಿದೆ. ಹಣ, ಹೆಂಡದ ಬಲದಿಂದ ಅಭ್ಯರ್ಥಿಯನ್ನು ಗೆಲ್ಲಿಸುವುದಕ್ಕೆ ರಾಜಕೀಯ ಪಕ್ಷಗಳು ಮುಂದಾಗಿವೆ. ಸ್ಥಳೀಯವಾಗಿ ಪಕ್ಷಕ್ಕೆ ನಿಷ್ಠರಾಗಿರುವ ಅಥವಾ ರಾಜಕಾರಣಿಗೆ ನಿಷ್ಠರಾಗಿರುವ ಕಾರ್ಯಕರ್ತರು ಟಿಕೆಟ್ ಪಡೆದು ಜಿಪಂ, ತಾಪಂನಲ್ಲಿ ಚುನಾವಣೆಗೆ ನಿಲ್ಲುತ್ತಾರೆ. ಇಲ್ಲೂ ಟಿಕೆಟ್‌ಗಾಗಿ ಹಣ ವರ್ಗಾವಣೆಯಾಗುತ್ತದೆ. ಹಣ, ಹೆಂಡದ ಮೂಲಕ ಜನರ ದಾರಿಯನ್ನು ತಪ್ಪಿಸುತ್ತಾರೆ. ಆವರೆಗೆ ಮುಗ್ಧವಾಗಿದ್ದ ಗ್ರಾಮೀಣ ಪ್ರದೇಶಗಳು ಈ ಚುನಾವಣೆಯಿಂದಾಗಿ ಒಮ್ಮೆಲೆ ಉದ್ವಿಗ್ನಗೊಳ್ಳುತ್ತದೆ. ಇದರ ನೇರ ಪರಿಣಾಮವನ್ನು ಜನಸಾಮಾನ್ಯರು ಎದುರಿಸಬೇಕಾಗುತ್ತದೆ. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್‌ನಲ್ಲಿ ರಾಜಕಾರಣಿ ಗಳು, ರಾಷ್ಟ್ರೀಯ ಪಕ್ಷಗಳು ನೇರವಾಗಿ ಹಸ್ತಕ್ಷೇಪ ಮಾಡುತ್ತವೆೆಯಾದರೆ, ಈ ಅಧಿಕಾರ ವಿಕೇಂದ್ರೀಕರಣಕ್ಕೆ ಅರ್ಥವಾದರೂ ಏನು? ನೇರವಾಗಿ ಜನರ ಕೈಗೆ ಅಧಿಕಾರ ಎನ್ನುವುದೇ ಸುಳ್ಳಾದಂತಾಗುವುದಿಲ್ಲವೇ? ಸ್ಥಳೀಯವಾಗಿ ಯಾರು ಯೋಗ್ಯರು ಎನ್ನುವುದನ್ನು ಆಯಾ ಗ್ರಾಮ, ಊರಿನ ಜನರು ಚೆನ್ನಾಗಿ ಬಲ್ಲರು. ಆದರೆ ಯಾವಾಗ ಚುನಾವಣೆಯಲ್ಲಿ ಹಣ, ಹೆಂಡ ಮುಖ್ಯವಾಗುತ್ತದೋ, ಆಗ ಅರ್ಹ ಅಭ್ಯರ್ಥಿ ಬದಿಗೆ ಸರಿಯಬೇಕಾಗುತ್ತದೆ. ಜೊತೆಗೆ, ಪಕ್ಷದ ಬಲದಿಂದ ಗೆಲ್ಲುವ ಅಭ್ಯರ್ಥಿಗಳೇ ಮುಂಚೂಣಿಯಲ್ಲಿರುತ್ತಾರೆ. ಗ್ರಾಮೀಣ ಪ್ರದೇಶದ ಅಭಿವೃದ್ಧಿ ಚುನಾವಣೆಯ ವಿಷಯವಾಗದೆ, ಪಕ್ಷ, ಕೋಮು, ಜಾತಿ ಚುನಾವಣೆಯ ವಿಷಯವಾಗುತ್ತದೆ. ಇಂತಹ ಚುನಾವಣೆಗಳು ಗ್ರಾಮ, ತಾಲೂಕುಗಳನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ಯದೆ ಇನ್ನಷ್ಟು ಹಿಂದಕ್ಕೆ ಒಯ್ಯುತ್ತದೆ. ಇತ್ತೀಚೆಗೆ ಕೊಡಗಿನಲ್ಲಿ ಟಿಪ್ಪುಸುಲ್ತಾನ್ ಹೆಸರಿನಲ್ಲಿ ನಡೆದ ಗಲಭೆ, ಹಲವೆಡೆ ನಡೆಯುತ್ತಿರುವ ಸಂಘರ್ಷಗಳ ಹಿಂದೆ ಸ್ಥಳೀಯ ಪಂಚಾಯತ್ ಚುನಾವಣೆಗಳ ಪರಿಣಾಮವಿತ್ತು. ಅಂದರೆ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಎಂತಹ ನೀಚ ಸ್ಥಿತಿಗೆ ಇಳಿಯುವುದಕ್ಕೂ ರಾಜಕೀಯ ಪಕ್ಷಗಳು ಸಿದ್ಧವಿರುವಾಗ, ಅಧಿಕಾರ ವಿಕೇಂದ್ರೀಕರಣ ಎನ್ನುವುದು ಕೇವಲ ರಾಜಕಾರಣಿಗಳ ಭಾಷಣದಲ್ಲಷ್ಟೇ ಉಳಿಯುತ್ತದೆ. ಅಧಿಕಾರ ವಿಕೇಂದ್ರೀಕರಣದ ಉದ್ದೇಶ ಈಡೇರಬೇಕಾದರೆ, ಮತದಾರರು ರಾಜಕೀಯ ಪಕ್ಷಗಳ ಅಧಿಕೃತ ಅಭ್ಯರ್ಥಿಯಾಗಿ ಚುನಾವಣೆಗಿಳಿಯುವವರನ್ನು ಸಾರಾಸಗಟಾಗಿ ತಿರಸ್ಕರಿಸಬೇಕು. ಪಕ್ಷೇತರವಾಗಿ, ಸ್ಥಳೀಯ ಅಭಿವೃದ್ಧಿಯನ್ನು ಗುರಿಯಾಗಿಟ್ಟುಕೊಂಡು ಮತ ಹಾಕಬೇಕು. ತಮ್ಮ ಊರಿನಲ್ಲಿ ಸ್ಪರ್ಧಿಸುವ ಹೊರಗಿನ ಅಭ್ಯರ್ಥಿಯನ್ನು ತಿರಸ್ಕರಿಸಿ, ತಮ್ಮ ಊರನ್ನು ತಿಳಿದುಕೊಂಡ, ಅದನ್ನು ಉದ್ಧಾರಮಾಡಲ್ಲ, ಅಭಿವೃದ್ಧಿಗೆ ಸ್ಪಂದಿಸಬಲ್ಲ ವ್ಯಕ್ತಿಯನ್ನು ಗುರುತಿಸಿ ಮತ ಹಾಕಬೇಕು. ಸ್ಥಳೀಯ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಗೆಲ್ಲದೆ, ಮತದಾರರು ಗೆಲ್ಲುವಂತಾಗಬೇಕು. ಆಗ ಮಾತ್ರ ವಿಕೇಂದ್ರೀಕರಣ ವ್ಯವಸ್ಥೆ ಅರ್ಥಪೂರ್ಣವಾಗಿ ಜಾರಿಗೊಳ್ಳಲು ಸಾಧ್ಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News