ಅರಾವಳಿ ಶ್ರೇಣಿ ಏಕೆ ಸುದ್ದಿಯಲ್ಲಿದೆ? ರಕ್ಷಣೆಗೆ ಆಗಿರುವ ಪ್ರಯತ್ನಗಳೇನು?
Photo Credit : X
ಅರಾವಳಿ ಬೆಟ್ಟಗಳ ಸಾಲಿನಲ್ಲಿ ಬರುವ ಸಾರಿಸ್ಕ ಹುಲಿ ಅಭಯಾರಣ್ಯ ಗಣಿಗಾರಿಕೆಯಿಂದಾಗಿ ಅತಿ ಹೆಚ್ಚು ಪರಿಣಾಮ ಬೀರಿದ ಪ್ರದೇಶವಾಗಿದೆ. ಪರಿಸರ ಮೌಲ್ಯವನ್ನು ಮೀರಿ ಈ ಪ್ರದೇಶ ಆಧ್ಯಾತ್ಮಿಕವಾಗಿ ಪ್ರಾಮುಖ್ಯತೆ ಪಡೆದಿದೆ.
ಕಳೆದೊಂದು ತಿಂಗಳಿಂದ ಸುದ್ದಿಯಲ್ಲಿರುವ ಅರಾವಳಿ ಬೆಟ್ಟದ ಸಾಲುಗಳು ಗುಜರಾತ್ನಿಂದ ರಾಜಸ್ಥಾನದ ಮೂಲಕ ಹರ್ಯಾಣದವರೆಗೆ ವ್ಯಾಪಿಸಿದೆ. ಇದು ಭಾರತದ ಭೌಗೋಳಿಕ ಮತ್ತು ಇತಿಹಾಸದಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಭಾರತದ ಅತಿ ಹಳೆಯ ಬೆಟ್ಟ ಸಾಲುಗಳೆನ್ನುವ ಎರಡು ಶತಕೋಟಿ ವರ್ಷಗಳಷ್ಟು ಹಳೆಯದಾದ ಅರಾವಳಿ ಶ್ರೇಣಿಗಳು ಭಾರತೀಯ- ಗಂಗಾ ಬಯಲು ಪ್ರದೇಶ ಮರುಭೂಮಿಯಾಗದಂತೆ ಪ್ರಮುಖ ಪರಿಸರ ತಡೆಗೋಡೆಯಾಗಿ ಕೆಲಸ ಮಾಡುತ್ತವೆ.
ಅರಾವಳಿ ಶ್ರೇಣಿಯ ಪ್ರಾಮುಖ್ಯತೆ ಏನು?
ಅವು ಅರಾವಳಿ ಬೆಟ್ಟದ ಸಾಲುಗಳು ಥಾರ್ ಮರುಭೂಮಿಯನ್ನು ಹರ್ಯಾಣ, ರಾಜಸ್ಥಾನ ಮತ್ತು ಪಶ್ಚಿಮ ಉತ್ತರ ಪ್ರದೇಶಗಳಿಗೆ ಹರಡುವುದನ್ನು ತಡೆಯುತ್ತವೆ. ದಿಲ್ಲಿಯಿಂದ ಗುಜರಾತ್ವರೆಗೆ 650 ಕಿಮೀಗಳಲ್ಲಿ ಹರಡಿರುವ ಅರಾವಳಿ ಬೆಟ್ಟ ಸಾಲು ಅಂತರ್ಜಲ ಮರುಪೂರಣಕ್ಕೆ ನೆರವಾಗುತ್ತವೆ. ಚಂಬಲ್, ಸಬರಮತಿ ಮತ್ತು ಲುನಿಯಂತಹ ಪ್ರಮುಖ ನದಿಗಳಿಗೆ ನೀರಿನ ಮೂಲ ಈ ಬೆಟ್ಟಗಳು.
ಆದರೆ ಮರಳಶಿಲೆ, ಸುಣ್ಣದ ಕಲ್ಲು, ಅಮೃತಶಿಲೆ, ಬೆಣಚುಕಲ್ಲು ಮತ್ತು ಸೀಸ, ಸತು, ತಾಮ್ರ, ಚಿನ್ನ ಮತ್ತು ಟಂಗ್‌ಸ್ಟನ್ನಂತಹ ಖನಿಜಗಳಿಂದ ಸಮೃದ್ಧವಾಗಿದೆ. ಇವುಗಳಿಗಾಗಿ ಈ ಪ್ರದೇಶದಲ್ಲಿ ಗಣಿಗಾರಿಕೆ ಐತಿಹಾಸಿಕವಾಗಿ ನಡೆಯುತ್ತಾ ಬಂದಿದ್ದರೂ ಕಳೆದ ನಾಲ್ಕು ದಶಕಗಳಲ್ಲಿ ಅತಿಯಾಗಿ ಗಣಿಗಾರಿಕೆಯಾಗಿದೆ. ಬಹುಭಾಗ ಅಕ್ರಮ ಗಣಿಗಾರಿಕೆ. ಇದರಿಂದಾಗಿ ವಾಯುಗುಣಮಟ್ಟ ಮತ್ತು ಅಂತರ್ಜಲದ ಮರುಪೂರಣಕ್ಕೆ ಸಮಸ್ಯೆಯಾಗಿದೆ.
ಆಧ್ಯಾತ್ಮಿಕವಾಗಿ ಪ್ರಾಮುಖ್ಯತೆ ಪಡೆದ ಬೆಟ್ಟಗಳು
ಅರಾವಳಿ ಬೆಟ್ಟಗಳ ಸಾಲಿನಲ್ಲಿ ಬರುವ ಸಾರಿಸ್ಕ ಹುಲಿ ಅಭಯಾರಣ್ಯ ಗಣಿಗಾರಿಕೆಯಿಂದಾಗಿ ಅತಿ ಹೆಚ್ಚು ಪರಿಣಾಮ ಬೀರಿದ ಪ್ರದೇಶವಾಗಿದೆ. ಪರಿಸರ ಮೌಲ್ಯವನ್ನು ಮೀರಿ ಈ ಪ್ರದೇಶ ಆಧ್ಯಾತ್ಮಿಕವಾಗಿ ಪ್ರಾಮುಖ್ಯತೆ ಪಡೆದಿದೆ. ಸಪ್ತ ಋಷಿಗಳ ಧ್ಯಾನದ ಬೀಡು ಎಂದೇ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಅರಾವಳಿ ಬೆಟ್ಟಗಳು ‘ಓಂ’ ಚಿಹ್ನೆಯನ್ನು ಪ್ರತಿಬಿಂಬಿಸುತ್ತವೆ. ಭರ್ತೃಹರಿ ತಪಸ್ಥಳಿಯಂತಹ ಪವಿತ್ರ ಸ್ಥಳಗಳು ಇಲ್ಲಿವೆ. ಪಾಂಡವರು ತಮ್ಮ ವನವಾಸದ ಸಂದರ್ಭದಲ್ಲಿ ಈ ಪ್ರದೇಶದಲ್ಲಿ ನೆಲೆಸಿದ್ದರು ಎನ್ನುವ ಪ್ರತೀತಿಯಿದೆ.
ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳಲಾಗಿದೆಯೆ?
1990ರ ಆರಂಭದಲ್ಲಿ ಪರಿಸರ ಸಚಿವಾಲಯ ಮಂಜೂರಾದ ಯೋಜನೆಗಳಿಗೆ ಮಾತ್ರ ಗಣಿಗಾರಿಕೆಗೆ ಅವಕಾಶ ನೀಡಿದೆ. ಆದರೆ ಈ ನಿಯಮವನ್ನು ಸಂಪೂರ್ಣವಾಗಿ ಅಲಕ್ಷಿಸಲಾಗಿದೆ. 2009ರಲ್ಲಿ ಸುಪ್ರೀಂಕೋರ್ಟ್ ಮುಂದೆ ಬಂದು ಹರ್ಯಾಣದ ಜಿಲ್ಲೆಗಳಾದ ಫರೀದಾಬಾದ್, ಗುರುಗ್ರಾಂ ಮತ್ತು ಮೇವಾತ್ ಜಿಲ್ಲೆಗಳಲ್ಲಿ ಗಣಿಗಾರಿಕೆಗೆ ಸಂಪೂರ್ಣ ನಿಷೇಧ ಹೇರಿತು.
2014 ಮೇಯಲ್ಲಿ ಸುಪ್ರೀಂಕೋರ್ಟ್ ಈ ವ್ಯಾಪ್ತಿಯಲ್ಲಿ ಹೊಸದಾಗಿ ಗಣಿಗಾರಿಕೆಗೆ ಅವಕಾಶ ನೀಡುವುದು ಅಥವಾ ಪರವಾನಗಿ ನವೀಕರಣಕ್ಕೆ ನಿಷೇಧ ಹೇರಿತು. ಮಾತ್ರವಲ್ಲದೆ ತನ್ನ ಸೆಂಟ್ರಲ್ ಎಂಪವರ್ಡ್ ಕಮಿಟಿಗೆ (ಸಿಇಸಿ) ಪರಿಸರದ ವಿವರವಾದ ಪರಿಶೀಲನೆ ನಡೆಸುವಂತೆ ಸೂಚಿಸಿತು. ಎಲ್ಲಾ ರಾಜ್ಯಗಳ ಅರಾವಳಿ ವ್ಯಾಪ್ತಿಯಲ್ಲಿ ಸಂಪೂರ್ಣ ವೈಜ್ಞಾನಿಕ ನಕ್ಷೆ ರಚಿಸುವುದು, ಬೃಹತ್ ಮಟ್ಟದಲ್ಲಿ ಗಣಿಗಾರಿಕೆ ಚಟುವಟಿಕೆಯಿಂದ ಪರಿಸರ ಪರಿಣಾಮದ ಮೌಲ್ಯಮಾಪನದ ಪ್ರಸ್ತಾಪನೆಯನ್ನು ಸಿಇಸಿ ಮುಂದಿಟ್ಟಿದೆ. ಜೊತೆಗೆ ಪರಿಸರ ಸೂಕ್ಷ್ಮ ಪ್ರದೇಶಗಳಾದ ರಕ್ಷಿತ ಆವಾಸಸ್ಥಾನ, ಜಲ ಮೂಲಗಳು, ಹುಲಿ ಕಾರಿಡಾರ್ಗಳು, ರಾಷ್ಟ್ರೀಯ ರಾಜಧಾನಿ ಪ್ರದೇಶಗಳಲ್ಲಿ ಗಣಿಗಾರಿಕೆ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಹೇಳಿದೆ.
ಈಗಿನ ಕಾನೂನು ಏನು ಹೇಳುತ್ತದೆ?
ಸುಪ್ರೀಂಕೋರ್ಟ್ 2023ರ ತೀರ್ಪಿನಲ್ಲಿ ಅರಾವಳಿಯ ಒಂದು ಕಿಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆಯನ್ನು ನಿಷೇಧಿಸಿದೆ. ಆದರೆ 2024ರಲ್ಲಿ ಸರ್ಕಾರ ಸಲ್ಲಿಸಿದ ವಿವರಗಳನ್ನು ಗಮನಿಸಿದರೆ, ಈ ನಿಷೇಧಿತ ಪ್ರದೇಶಗಳಲ್ಲಿ 110 ಗಣಿಗಳಿದ್ದು, ಅವುಗಳಲ್ಲಿ 68 ಸಕ್ರಿಯವಾಗಿವೆ. ಆ ನಂತರ ಈ ವ್ಯಾಪ್ತಿಯಲ್ಲಿ ಎಲ್ಲಾ ಗಣಿಗಾರಿಕೆಯನ್ನು ತಡೆಯಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಆದರೆ ಎನ್ಡಿಟಿವಿ ಇತ್ತೀಚೆಗೆ ಪ್ರಕಟಿಸಿದ ತನಿಖಾ ವರದಿಯ ಪ್ರಕಾರ ಸಾರಿಸ್ಕಾ, ತೆಹ್ಲಾ ಮತ್ತು ಸಮೀಪದ ಅಲ್ವಾರ್ ಪ್ರದೇಶಗಳಲ್ಲಿ ಗಣಿಗಾರಿಕೆ ಮುಂದುವರಿದಿರುವುದು ಕಂಡುಬಂದಿದೆ. ಅಕ್ರಮ ಗಣಿಗಾರಿಕೆ ಈ ಪ್ರದೇಶದಲ್ಲಿ ಇನ್ನೂ ಮುಂದುವರಿದಿದೆ. ರಾತ್ರಿ ಸಮಯದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತದೆ ಎಂದು ಸ್ಥಳೀಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಅರಾವಳಿ ಶ್ರೇಣಿ ವ್ಯಾಪ್ತಿಯಲ್ಲಿ 100 ಮೀಟರ್ಗಿಂತ ಕಡಿಮೆ ಎತ್ತರದಲ್ಲಿರುವ ಬೆಟ್ಟಗಳಲ್ಲಿ ಗಣಿಗಾರಿಕೆಗೆ ಅಕ್ಷೇಪವಿಲ್ಲ ಎನ್ನುವ ನಿರ್ಧಾರ ಮೊತ್ತಮೊದಲಿಗೆ ದೊಡ್ಡ ಪ್ರಮಾದವೆಂದು ವಿಪಕ್ಷಗಳು ಆರೋಪಿಸುತ್ತಿವೆ. “ಈ ನಿರ್ಧಾರದಿಂದ ಬೆಟ್ಟಗಳಲ್ಲಿ ಅಕ್ರಮ ಗಣಿಗಾರಿಕೆಗೆ ಮುಕ್ತ ಆಹ್ವಾನ ನೀಡಿದಂತಾಗಿದೆ” ಎಂದು ಕಾಂಗ್ರೆಸ್ನ ಮಾಜಿ ಮುಖ್ಯಸ್ಥರಾದ ಸೋನಿಯಾ ಗಾಂಧಿ ಇತ್ತೀಚೆಗೆ ಟೀಕಿಸಿದ್ದರು. “ಸರ್ಕಾರವು 1980 ಅರಣ್ಯ (ಸಂರಕ್ಷಣಾ) ಕಾಯ್ದೆ ಮತ್ತು ಅರಣ್ಯ ಸಂರಕ್ಷಣಾ ನಿಯಮಗಳ (2022) ತಿದ್ದುಪಡಿಯನ್ನು ಹಿಂಪಡೆಯಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
ಬೆಟ್ಟಸಾಲುಗಳ ಎತ್ತರ ಏಕೆ ಪ್ರಾಮುಖ್ಯತೆ ಪಡೆದಿದೆ?
2024ರ ಅಕ್ಟೋಬರ್ನಲ್ಲಿ ಭಾರತೀಯ ಅರಣ್ಯ ಸಮೀಕ್ಷೆ (ಎಫ್ಎಸ್ಐ) ಸ್ವತಃ ಪ್ರಸ್ತಾಪವಿಟ್ಟು, 30 ಮೀಟರ್ ಎತ್ತರವಿರುವ 4.57ರ ಇಳಿಜಾರಿನಲ್ಲಿರುವ ಗುಡ್ಡಗಳನ್ನು ಸಂರಕ್ಷಿಸಬೇಕು ಎಂದು ಕೇಳಿಕೊಂಡಿತ್ತು. ಭಾರತೀಯ ಅರಣ್ಯ ಸಮೀಕ್ಷೆಯ ಆಂತರಿಕ ಮೌಲ್ಯಮಾಪನದ ಪ್ರಕಾರ ರಾಜಸ್ಥಾನದ 15 ಜಿಲ್ಲೆಗಳಲ್ಲಿ ವ್ಯಾಪಿಸಿರುವ 12,081 ಗುಡ್ಡಗಳು 20 ಮೀಟರ್ಗಳಷ್ಟು ಎತ್ತರದಲ್ಲಿವೆ. ಇವುಗಳಲ್ಲಿ 1,048 ಗುಡ್ಡಗಳು (ಶೇ 8.7) ಮಾತ್ರ 100 ಮೀಟರ್ಗಿಂತ ಎತ್ತರ ಇವೆ. ಅಂದರೆ ಹೊಸ ನಿಯಮದ ಪ್ರಕಾರ ಅರಾವಳಿ ಗುಡ್ಡಗಾಡು ಪ್ರದೇಶದ ಶೇ 90ರಷ್ಟು ವ್ಯಾಪ್ತಿ ರಕ್ಷಣೆಯನ್ನು ಕಳೆದುಕೊಳ್ಳುತ್ತದೆ. ದತ್ತಾಂಶ ತೋರಿಸಿರುವ ಪ್ರಕಾರ ಅರಾವಳಿ ಗುಡ್ಡಗಾಡು ಪ್ರದೇಶದ 1594 ಗುಡ್ಡಗಳು 80 ಮೀಟರ್ ಎತ್ತರದಲ್ಲಿವೆ, 2656 ಗುಡ್ಡಗಳು 60 ಮೀಟರ್ ಎತ್ತರ ಮತ್ತು 50009 ಗುಡ್ಡಗಳು 49 ಮೀಟರ್ ಎತ್ತರದಲ್ಲಿವೆ. ಸುಮಾರು 107,494 ಗುಡ್ಡಗಳು 20 ಮೀಟರ್ ಎತ್ತರದಲ್ಲಿವೆ!