ಭಾರತೀಯ ರೈಲುಗಳಲ್ಲಿ ಇನ್ನು ಮುಂದೆ 25 ವಿವಿಧ ಸ್ವಾದಗಳಲ್ಲಿ ಚಹಾ ಲಭ್ಯ

Update: 2016-02-10 14:04 GMT

ಹೊಸದಿಲ್ಲಿ,ಫೆ.10: ಭಾರತೀಯ ರೈಲ್ವೆಯು ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಬದಲಾವಣೆಗಳೊಂದಿಗೆ ನವೀಕರಣಕ್ಕೆ ತೆರೆದುಕೊಳ್ಳುತ್ತಿದೆ. ಕೆಲವೇ ದಿನಗಳ ಹಿಂದೆ ನೂತನ ವಿನ್ಯಾಸದ ಬೋಗಿಗಳನ್ನು ಹೊಂದಿರುವ ಮಹಾಮಾನಾ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿರುವ ಇಲಾಖೆಯು ತನ್ನ ಲಕ್ಷಾಂತರ ಪ್ರಯಾಣಿಕರಿಗೆ ರೈಲು ಪ್ರಯಾಣವನ್ನು ಆಹ್ಲಾದಕರ ಅನುಭವವನ್ನಾಗಿಸುವ ನಿಟ್ಟಿನಲ್ಲಿ ಮೂರು ಹೊಸ ಸೌಲಭ್ಯಗಳನ್ನು ಪ್ರಕಟಿಸಿದೆ.


25 ಸ್ವಾದಗಳಲ್ಲಿ ಚಹಾ

ರೈಲ್ವೆ ಪ್ರಯಾಣದಲ್ಲಿ ಹೆಚ್ಚುಕಡಿಮೆ ಎಲ್ಲರೂ ಚಹಾದ ದಾರಿ ಕಾಯುತ್ತಿರುವವರೇ ಆಗಿದ್ದಾರೆ. ಪ್ರಯಾಣದಲ್ಲಿ ಒಂದೊಳ್ಳೆಯ ಚಹಾ ಸಿಕ್ಕಿದರೆ ಅದೇ ದೊಡ್ಡ ಪುಣ್ಯ. ಆದರೆ ಈ ವಿಷಯದಲ್ಲಿ ಕೊಂಚ ಒಳ್ಳೆಯ ದಿನಗಳು ಪ್ರಯಾಣಿಕರ ಪಾಲಿಗೆ ಬರಲಿವೆ. ಇದಕ್ಕಾಗಿ ಐಆರ್‌ಸಿಟಿಸಿಯೊಂದಿಗೆ ತನ್ನ ಚಹಾದ ರುಚಿಗಾಗಿಯೇ ಖ್ಯಾತವಾಗಿರುವ ‘‘ಚಾಯೊಸ್’’ಕೈ ಜೋಡಿಸಲಿದೆ.
ಈ ಸಹಭಾಗಿತ್ವದೊಂದಿಗೆ ಭಾರತೀಯ ರೈಲ್ವೆಯು ಪ್ರಯಾಣಿಕರಿಗೆ 25 ವಿವಿಧ ಸ್ವಾದಗಳಲ್ಲಿ ಚಹಾ ಪೂರೈಸಲಿದೆ. ಇಷ್ಟೇ ಅಲ್ಲ, ಈ 25 ಬಗೆಯ ಚಹಾಗಳನ್ನು ವಿವಿಧ ಸ್ವಾದಗಳೊಂದಿಗೆ ಇನ್ನಷ್ಟು ಪರಿಷ್ಕರಿಸಬಹುದಾಗಿದೆ. ಮಾಮೂಲು ಶುಂಠಿ ಮತ್ತು ಮಸಾಲಾ ಚಹಾದೊಂದಿಗೆ ಆಮ್ ಪನ್ನಾ ಮತ್ತು ಹರಿ ಮಿರ್ಚಿ ಚಾಯ್‌ನಂತಹ ವಿವಿಧ ಸ್ವಾದಗಳ ಚಹಾ ಹೀರುವ ಸುಖ ಪ್ರಯಾಣಿಕರದಾಗಲಿದೆ.


ಹಾಸಿಗೆಯೂ ಪ್ರಯಾಣಿಕರಿಗೇ

 ರೈಲುಗಳ ಎಸಿ ಬೋಗಿಗಳಲ್ಲಿ ಪ್ರಯಾಣಿಸುವಾಗ ತಮಗೆ ನೀಡಲಾಗುವ ಒಂದು ಜೊತೆ ಬಿಳಿಯ ಬಣ್ಣದ ಬೆಡ್‌ಶೀಟ್‌ಗಳು,ಒಂದು ತಲೆದಿಂಬು ಮತ್ತು ಒಂದು ಬ್ಲಾಂಕೆಟ್‌ನ್ನು ಇನ್ನು ಮುಂದೆ ಪ್ರಯಾಣಿಕರು ತಮ್ಮ ಲಗೇಜಿನೊಂದಿಗೆ ಮನೆಗೊಯ್ಯಬಹುದು. ಆದರೆ ಇದಕ್ಕಾಗಿ ಪ್ರತಿ ಸೆಟ್‌ಗೆ 250 ರೂ.ಗಳ ನಾಮಮಾತ್ರ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
 ಎರಡು ಬೆಡ್‌ಶೀಟ್‌ಗಳು ಮತ್ತು ಒಂದು ತಲೆದಿಂಬನ್ನು ರೈಲ್ವೆ ನಿಲ್ದಾಣದಲ್ಲಿ 140ರೂ.ಗಳನ್ನು ತೆತ್ತು ಖರೀದಿಸಬಹುದಾಗಿದೆ. ಹೆಚ್ಚುವರಿ 110 ರೂ.ನೀಡಿದರೆ ಒಂದು ಬ್ಲಾಂಕೆಟ್ ಕೂಡ ದೊರೆಯುತ್ತದೆ. ಸದ್ಯ ಈ ಯೋಜನೆಯನ್ನು ಚೆನ್ನೈನ ತಾಂಬರಮ್ ರೈಲು ನಿಲ್ದಾಣದಲ್ಲಿ ಆರಂಭಿಸಲಾಗಿದ್ದು, ಹೊಸದಿಲ್ಲಿ ಜಂಕ್ಷನ್ ಸೇರಿದಂತೆ ಇತರ ನಿಲ್ದಾಣಗಳಿಗೆ ಶೀಘ್ರವೇ ವಿಸ್ತರಣೆಗೊಳ್ಳಲಿದೆ.


ನಿಲ್ದಾಣ ಬದಲಾವಣೆ

ಹೊಸದಿಲ್ಲಿಯಲ್ಲಿ ಟಿಕೆಟ್ ಬುಕ್ ಮಾಡಿದ್ದೀರಿ,ಆದರೆ ಈಗ ಘಾಜಿಯಾಬಾದ್‌ನಲ್ಲಿ ರೈಲು ಹತ್ತಲು ಮನಸ್ಸು ಬದಲಿಸಿದ್ದೀರಿ...ಅದಕ್ಕೆ ತಲೆಬಿಸಿ ಮಾಡಿಕೊಳ್ಳಬೇಕಿಲ್ಲ. ಈಗ ಆರಾಮವಾಗಿ ಪ್ರಯಾಣಕ್ಕೆ ಒಂದು ದಿನ ಮೊದಲು ಐಆರ್‌ಸಿಟಿಸಿ ವೆಬ್‌ಸೈಟ್‌ಗೆ ಲಾಗ್ ಆನ್ ಆಗಿ ಹತ್ತುವ ನಿಲ್ದಾಣವನ್ನು ಪರಿಷ್ಕರಿಸಬಹುದು.
ಈ ಆಯ್ಕೆ ಇ-ಟಿಕೆಟ್‌ನಲ್ಲಿ ಪ್ರಯಾಣಿಸುವವರಿಗೆ ಲಭ್ಯ. ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಬುಕ್ಡ್ ಹಿಸ್ಟರಿಗೆ ಹೋಗಿ ರೈಲನ್ನು ಹತ್ತುವ ನಿಲ್ದಾಣವನ್ನು ಬದಲಿಸಿಕೊಳ್ಳಬಹುದು. ಆದರೆ ಈ ಸೌಲಭ್ಯ ಪ್ರತಿ ಪ್ರಯಾಣಕ್ಕೆ ಒಂದು ಬಾರಿ ಮಾತ್ರ ದೊರೆಯುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News