ಬೆಂಗಳೂರಿನ ಹೆಬ್ಬಾಳ, ಕೊಪ್ಪಳ ಜಿಲ್ಲೆಯ ದೇವದುರ್ಗ ಹಾಗೂ ಬೀದರ್ ವಿಧಾನಸಭಾ ಕ್ಷೇತ್ರಗಳಿಗೆ ನಾಡಿದ್ದು ಮತದಾನ
ಬೆಂಗಳೂರು,ಫೆ.11: ಬೆಂಗಳೂರಿನ ಹೆಬ್ಬಾಳ, ಕೊಪ್ಪಳ ಜಿಲ್ಲೆಯ ದೇವದುರ್ಗ ಹಾಗೂ ಬೀದರ್ ವಿಧಾನಸಭಾ ಕ್ಷೇತ್ರಗಳಿಗೆ ನಾಡಿದ್ದು ಮತದಾನ ನಡೆಯಲಿದ್ದು, ಉಪಚುನಾವಣೆಗೆ ಇಂದು ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಕೊನೆ ಕ್ಷಣಗಳಲ್ಲಿ ರಾಜಕೀಯ ಪಕ್ಷಗಳ ಮುಖಂಡರು ತಮ್ಮತಮ್ಮ ಅಭ್ಯರ್ಥಿಗಳ ಪರವಾಗಿ ಬಿರುಸಿನ ಪ್ರಚಾರ ನಡೆಸಿದರು. ಹೆಬ್ಬಾಳ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ ಕೇಂದ್ರ ಸಚಿವರಾದ ಎಂ. ವೆಂಕಯ್ಯ ನಾಯ್ಡು ಹಾಗೂ ಸದಾನಂದ ಗೌಡ ಬಿಜೆಪಿ ಅಭ್ಯರ್ಥಿಯ ಪರವಾಗಿ ರೋಡ್ ಷೋ ನಡೆಸಿ, ಮತ ಯಾಚಿಸಿದರು. ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ವೆಂಕಯ್ಯ ನಾಯ್ಡು, ಕರ್ನಾಟಕದಲ್ಲಿ ಸರ್ಕಾರ ಇದೆಯೋ ಇಲ್ಲವೋ ಎಂಬುವುದು ಅನುಮಾನವಾಗುತ್ತದೆ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಎಸ್.ಎಂ. ಕೃಷ್ಣ ಅವರೇ ರಾಜ್ಯ ಸರ್ಕಾರದ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ನಗರದಲ್ಲಿ ರಸ್ತೆಗಳು ಹದಗೆಟ್ಟಿವೆ, ಸಾರ್ವಜನಿಕರು ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ, ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ದೂರಿದರು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಪಕ್ಷದ ಮುಖಂಡರು ರೋಡ್ ಷೋ ನಡೆಸಿ, ಮತಯಾಚಿಸಿದರು. ದೇವದುರ್ಗ ಹಾಗೂ ಬೀದರ್‌ನಲ್ಲಿಯೂ ರಾಜಕೀಯ ಪಕ್ಷಗಳ ಮುಖಂಡರು ತಮ್ಮ ತಮ್ಮ ಅಭ್ಯರ್ಥಿಗಳ ಪರವಾಗಿ ಕೊನೆ ಕ್ಷಣದಲ್ಲಿ ಮತಯಾಚಿಸಿದರು. ಬೀದರ್ ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತದಾನಕ್ಕೆ ವ್ಯಾಪಕ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಕಮ್ ಪ್ರಕಾಶ್ ಅಮ್ರಿತ್ ಹೇಳಿದ್ದಾರೆ. ಚುನಾವಣೆ ನಡೆಯುವ ಇಡೀ ಕ್ಷೇತ್ರದಲ್ಲಿ ಅರೆಸೇನಾ ಪಡೆ ಮತ್ತು ಮೀಸಲು ಹಾಗೂ ಸ್ಥಳೀಯ ಪೊಲೀಸರನ್ನು ನಿಯೋಜಿಸಲಾಗಿದೆ. ಈ ಮೂರೂ ವಿಧಾನಸಭಾ ಕ್ಷೇತ್ರಗಳಲ್ಲಿ ರಾಜ್ಯದ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸಿರುವ ಮತದಾರರಲ್ಲದವರು ಸಂಜೆ ನಂತರ ಮತ ಕ್ಷೇತ್ರಗಳನ್ನು ಬಿಟ್ಟು ಹೊರಗೆ ಹೋಗಬೇಕು ಎಂದು ಚುನಾವಣಾ ಆಯೋಗ ಸೂಚಿಸಿದೆ.