**** ಬೀಡಿಯ ಚರ್ಚೆ *****

Update: 2016-02-12 11:39 GMT

ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚಿನ ಮಧ್ಯಮ, ಕೆಳ ಮಧ್ಯಮ ಹಾಗೂ ಬಡ ಜನರ ಹೊಟ್ಟೆಯನ್ನು ತುಂಬಿಸುತ್ತಿರುವ ಉದ್ಯಮ. ಇದು ಯಾವುದೇ ಜಾತಿ, ಮತ ಧರ್ಮಗಳ ಮೇರೆಯಿಲ್ಲದೇ ಎಲ್ಲರ ಮನೆಯ ಸಂಪಾದನೆಯ ಮೂಲ. ಅಸಹಾಯಕ ಹೆಣ್ಣೊಬ್ಬಳು ಅಂತಿಮವಾಗಿ ನುಡಿಯುವ ನುಡಿಯೂ ಕೂಡಾ "ಏನಿಲ್ಲದಿದ್ದರೆ ನಾಲ್ಕು ಬೀಡಿ ಕಟ್ಟಿ ಜೀವಿಸುವೆ" ಎಂದು. ಸಾವಿರಾರು ಜನರ ಬದುಕಿನ ಮಾರ್ಗವಾಗಿರುವ, ಹಲವರ ವಿಧ್ಯಾಭ್ಯಾಸ, ಮದುವೆ ಎಂದು ನೆಲೆ ಮುಟ್ಟಿಸಿರುವ ಈ ಉದ್ಯಮವು ಹಲಾಲೇ ಹರಾಮೇ (ಧರ್ಮಸಮ್ಮತವೇ ಅಲ್ಲವೇ) ಎಂಬುವುದು ಕೆಲ ಬುದ್ದಿಜೀವಿಗಳ ಜಿಜ್ಞಾಸೆ.

ಬೀಡಿ ಹಲಾಲ್ ಅಥವಾ ಹರಾಮೇ ಎಂಬುದರ ಬಗ್ಗೆ ಜಿಜ್ಞಾಸೆಯಿದೆ. ಅದು ಹಂದಿಮಾಂಸ ಮತ್ತು ಮದ್ಯದಂತೆ ಪೂರ್ಣವಾಗಿ ಹರಾಮ್ ಎಂದು ಘೋಷಣೆಯಾಗಿಲ್ಲ. ಆರೋಗ್ಯಕ್ಕೆ ಹಾನಿಕರ ಎಂಬುದನ್ನು ಒಪ್ಪಬಹುದು. ಹಾಗೆಂದು ಅದನ್ನು ನಿಶೇಧಿಸುವುದಂತೂ ಮೂರ್ಖತನ ಹಾಗೂ ಬಡವನ ಹೊಟ್ಟೆ ಮೇಲೆ ಹೊಡೆಯುವ ಹುನ್ನಾರ. ಅದರ ಬಗ್ಗೆ ಪರವಿರೋಧಗಳು ಹಲವಿವೆ. ಸೆಂಟಿಮೆಂಟಲಾಗಿ ಚಿಂತಿಸಬಾರದೆಂಬುದು ಇವರ ವಾದ. ನಮಗೆ ಸೆಂಟಿಮಂಟಾಲಾಗಲ್ಲದೆ ಬೇರೆ ರೀತಿ ಚಿಂತಿಸಲು ಸಾಧ್ಯವಿಲ್ಲ. ಕಾರಣ ಹಲವಾರು ಜನರ ಹೊಟ್ಟೆತುಂಬಿಸಿ ಸ್ಕಾಲರ್ಶಿಪ್, ಪೆನ್ಷನ್, ಬೋನಸ್ ಎಂದು ಒಬ್ಬ ಸಾಮಾನ್ಯನಿಗೂ ಸ್ವಾಭಿಮಾನಿಯಾಗಿ ಯಾರದೇ ಜೀತ ಮಾಡದೆ ದುಡಿದು ತಿನ್ನಲು ಅನುವು ಮಾಡಿಕೊಟ್ಟಿರುವುದೇ ಈ ಉದ್ಯಮ.

ವರದಕ್ಷಿಣೆಯ ಆಸೆಯಿಂದ ತವರಿಗಟ್ಟಲ್ಪಟ್ಟ ಹೆಣ್ಣಿಗೆ ತನ್ನ ಹಾಗೂ ತನ್ನ ಕಂದಮ್ಮಗಳ ಹೊಟ್ಟೆ ತುಂಬಿಸಲು ಯಾರ ಮುಂದೆಯೂ ಕೈಚಾಚದಂತೆ ಮಾಡಿದ ಉದ್ಯಮ ಬೀಡಿ ಉದ್ಯಮ. ಕೆಲಜನರು ಲವಲವಿಕೆಗಾಗಿ ಚಹಾ, ಕಾಫಿ ಯಂತಹ ಪೇಯಗಳನ್ನೂ ಸೇವಿಸುತ್ತಾರೆ ತಂಬಾಕುವಿನಲ್ಲಿರುವಂತಹ ನಿಕೋಟಿನ್ ಅಂಶ ಕಾಫಿಯಲ್ಲಿಯೂ ಇರುತ್ತದೆ ಹಾಗೆಂದು ದೈನಂದಿನ ಸೇವಿಸುವ ಚಹಾ ಕಾಫಿಯನ್ನೂ ಹರಾಮ್ ಮಾಡಿ, ಅದನ್ನು ಬೆಳೆಸುವವರ, ಅಲ್ಲಿ ದುಡಿಯುವವರ, ಅದನ್ನು ಮಾರುವವರ ಸಂಪಾದನೆ ಹರಾಮ್ ಎಂದರೆ ತಮಾಷೆಯಾಗಲಾರದೇ? ಬೀಡಿ ಸೇವನೆಯನ್ನು ಜನರು ಲವಲವಿಕೆಗಾಗಿ ಉಪಯೋಗಿಸುತ್ತಾರೆಯೇ ಹೊರತು ನಶೆಗಾಗಿ ಅಲ್ಲ.

ಆರೋಗ್ಯಕ್ಕೆ ಹಾನಿಕರ ಎಂಬ ಕಾರಣಕ್ಕೆ ಬೀಡಿ ಹರಾಮ್ ಆಗುವುದಾದರೆ ನಮ್ಮಲ್ಲಿ ಕ್ಯಾನ್ಸರ್ ನಿಂದ ಬಳಲುವವರಿಗಿಂತಲೂ ಹೆಚ್ಚಿನ ಜನ ರಕ್ತದೊತ್ತಡ, ಸಿಹಿಮೂತ್ರ ಹಾಗೂ ಕೊಬ್ಬಿನಂಶದಿಂದ ಬಳಲುತ್ತಿದ್ದಾರೆ. ಹಾಗೆಂದು ಮಾಂಸಾಹಾರ, ಎಣ್ಣೆಪದಾರ್ಥಗಳನ್ನು ತಿನ್ನುವುದನ್ನು ಹರಾಮ್ ಎನ್ನಲಾಗುತ್ತದೆಯೇ? ಮದ್ಯ, ಗಾಂಜಾದಂತಹ ವಸ್ತುಗಳ ಸೇವನೆಯಿಂದ ಮನುಷ್ಯನಿಗೆ ಪೂರ್ತಿಯಾಗಿ ನಶೆಯುಂಟಾಗುತ್ತದೆ. ಆ ಸಮಯದಲ್ಲಿ ಆತನಿಗೆ ಪ್ರಪಂಚದ ಪರಿವೆಯುರುವುದಿಲ್ಲ. ಹಾಗೂ ಆತನೇನು ಮಾಡುತ್ತಿದ್ದಾನೆ ಎಂಬುದರ ಅರಿವಿರುವುದಿಲ್ಲ. ಆದರೆ ಬೀಡಿ ಸೇವನೆಯಿಂದ ಅಂತಹ ಆಭಾಸಗಳಾದದ್ದು ನಾನಂತೂ ಕಂಡಿಲ್ಲ. ಒಂದು ಕಾಲದಲ್ಲಿ ಶ್ರೀಮಂತರ ತೋಟದಲ್ಲಿ, ಗದ್ದೆಯಲ್ಲಿ ದಿನವಿಡೀ ಗಂಡು ಹೆಣ್ಣೆನ್ನದೆ ಮೈಮುರಿದು ದುಡಿದು ಅವರು ನೀಡುವ ಸೇರಕ್ಕಿ ಪಾವಕ್ಕಿಗಳಲ್ಲಿ ಅರೆಹೊಟ್ಟೆ ಉಂಡು ಅವರು ನೀಡು ಹಳೆಯ ಬಟ್ಟೆಗಳಲ್ಲಿ ತಮ್ಮ, ತಮ್ಮ ಮಕ್ಕಳ ಮಾನಮುಚ್ಚಿಕೊಂಡು ಜೀತದಾಳಾಗಿ ದುಡಿಯುತ್ತಿದ್ದಾಗ ಜನರಿಗೆ ಸಿಕ್ಕಿದ ಸೌಭಾಗ್ಯ ಈ ಬೀಡಿ ಉದ್ಯಮ. ಮನೆಯಲ್ಲೇ ಕುಳಿತು, ಮಕ್ಕಳನ್ನೂ ನೋಡಿಕೊಳ್ಳುತ್ತಾ, ಆಹಾರವನ್ನೂ ತಯಾರಿಸಿ ಬಿಡುವಿನ ಸಮಯದಲ್ಲಿ ಬೀಡಿ ಕಟ್ಟಿ ಸಂಸಾರ ನೌಕೆಯನ್ನು ಸಾಗಿಸುವ ಕೆಲ ಮಧ್ಯಮ ವರ್ಗದ ಜನರು.

ವಾರದ ಮಜೂರಿಯ ದಿನ ಆಹಾರ ಸಾಮಾಗ್ರಿಗಳನ್ನು ಕೊಂಡು ತರುವ ಸಂಭ್ರಮ, ವರ್ಷಕ್ಕೊಮ್ಮೆ ಸಿಗುವ ಬೋನಸ್ ನಿಂದ ಮಕ್ಕಳು ಮರಿಗಳಿಗೆ ಹೊಸಬಟ್ಟೆ ಕೊಳ್ಳುವ ಸಂಭ್ರಮ, ವಿಧ್ಯಾಭ್ಯಾಸಕ್ಕೆಂದು ಸ್ಕಾಲರ್ಶಿಪ್ ಪಡೆಯುವಾಗಿನ ಧನ್ಯತೆ ಇವೆಲ್ಲಾ ನೀಡಿದೆ ಬೀಡಿ ಉದ್ಯಮ. ಸುಳ್ಳು ಹೇಳುವುದು ಹರಾಮ್, ಅನ್ಯಸ್ತ್ರೀಯರೊಂದಿಗೆ ಮಾತುಕತೆ ಹರಾಮ್, ಸ್ನೇಹ ಹರಾಮ್ ಅಂತಾದರೆ ನಾವ್ಯಾರೂ ನಮ್ಮ ದೈನಂದಿನ ಕಾರ್ಯಗಳಿಗೂ ಬೀದಿಗಿಳಿಯುವಂತಿಲ್ಲ. ಔಷಧಿಗಾಗಿ ಸ್ತ್ರೀ ತಜ್ಞೆಯರ ಬಳಿ ಹೋಗುವುದಿಲ್ಲವೇ? ಶಾಲಾಕಾಲೇಜುಗಳಲ್ಲಿ ಸ್ತ್ರೀ ಪುರುಷ ಅಧ್ಯಾಪಕರಿರುವುದಿಲ್ಲವೇ? ಆಸ್ಪತ್ರೆಯಲ್ಲಿ ಹೆಚ್ಚಾಗಿರುವ ದಾದಿಯರೂ ಸ್ತ್ರೀಯರಲ್ಲವೇ? ಹಲವಾರು ಅಂಶಗಳು ಹರಾಮೇ ಆಗಿದೆ. ಅದನ್ನೆಲ್ಲಾ ಸ್ವೀಕರಿಸಿರುವವರಿಗೆ ಬಡವರು ತಮ್ಮ ಹೊಟ್ಟೆಪಾಡಿಗಾಗಿ ಕಟ್ಟುವ ಬೀಡಿ ಮಾತ್ರ ಹರಾಮ್ ಎಂದು ಕಂಡಿರುವುದು ವಿಪರ್ಯಾಸ.

ಬೀಡಿ ಕಟ್ಟುವವರ ಬದುಕಿನ ಬವಣೆ ಬಲ್ಲವರು ಅದನ್ನೆಂದೂ ನಿಷೇಧಿಸಲು ಕರೆಕೊಡಲಾರರು. ಎಲೆ ತಂಬಾಕು ತಂದು ಅದನ್ನೊಂದು ಅಳತೆಯಲ್ಲಿ ಕತ್ತರಿಸಿ, ಸಮಪ್ರಮಾಣದಲ್ಲಿ ನೀರು ಸಿಂಪಡಿಸಿ, ನೆನೆದ ನಂತರ ಆ ಎಲೆಯನ್ನೊಂದು ಕಟ್ಟಾಗಿಸಿ ನಂತರ ತಂಬಾಕನ್ನು ಒಂದಳತೆಯಲ್ಲಿ ಸೇರಿಸಿ ಒಂದೊಂದಾಗಿ ಸುರುಟಿ ನೂಲು ಕಟ್ಟಿದರೆ ಮುಗಿಯದು. ಅದನ್ನು ಇಪ್ಪತ್ತೈದರ ಕಟ್ಟಾಗಿಸಿ, ನಂತರ ಐನೂರರ ಕಟ್ಟಾಗಿಸಿ ಬೀಡಿ ಬ್ರಾಂಚಿನಲ್ಲಿ ಎಲ್ಲಿ ಚೆನ್ನಾಗಿಲ್ಲವೆಂದು ಹೇಳಿ ಕಡಿಮೆ ಲೆಕ್ಕ ಹಾಕುತ್ತಾರೋ ಎಂಬ ಆತಂಕದಿಂದ ನಿಂತು, ಯಾವುದೇ ರೀತಿಯ fault ಸಂಭವಿಸದೇ ಕೊಂಡುಹೋದ ಬೀಡಿಯ ಲೆಕ್ಕವನ್ನು ಸರಿಯಾಗಿ ಬರೆದರೆ ಇಡೀ ರಾಜ್ಯ ಗೆದ್ದ ಖುಷಿಯಿಂದ ಮುಂದಿನ ಭಾಗಕ್ಕೆ ಹೋಗುವ ಸಂತಸ. ಒಂದು ಹಿಡಿ ತಂಬಾಕು ಜಾಸ್ತಿ ಕೊಡುವಂತೆ ಎಲೆ ತಂಬಾಕು ತೂಗಿಕೊಡುವವನಿಗೆ ದುಂಬಾಲು ಬೀಳುವುದು. ನಂತರ ಮನೆ ತಲುಪಿ ಮತ್ತದೇ ದಿನಚರಿ.

ಬೀಡಿ ಉದ್ಯಮಿಗಳು ಶ್ರೀಮಂತರಾಗಿದ್ದಾರೆ. ಕಟ್ಟುವವರು ಬಡವರಾಗಿಯೇ ಉಳಿದಿದ್ದಾರೆ. ಬೀಡಿ ಖರೀದಿಸುವವರು ಅನಾವಶ್ಯಕವಾಗಿ ಹಣ ಹಾಳುಮಾಡುತ್ತಾರೆ ಎಂಬ ಆರೋಪ ಮಾಡಬಹುದು. ಆದರೆ ಶ್ರೀಮಂತರು ತಮ್ಮ ಆಹಾರ, ಬಟ್ಟೆ ಬರೆ, ಮದುವೆ ಮುಂಜಿಗಳಲ್ಲಿ ಹಣ ಪೋಲು ಮಾಡುವುದು ನೋಡಿದರೆ ಇದು ಬರೇ ಗೌಣ. ಬೀಡಿ ಉದ್ಯಮವು ಹಲವರಿಗೆ ಬದುಕು ಕಟ್ಟಿಕೊಟ್ಟಿದೆ. ಅದು ಹಲಾಲೋ ಹರಾಮೋ ಎಂಬ ಚರ್ಚೆಗಿಂತಲೂ ಅಧಿಕ ಅವಶ್ಯಕತೆಯಿರುವುದು ವರದಕ್ಷಿಣೆಯೆಂಬ ಪಿಡುಗು ಹಲಾಲೇ ಹರಾಮೇ ಎಂಬ ಬಗೆಗೆ. ಅದರ ಬಗ್ಗೆ ಕೇವಲ ಮಾತನಾಡಿ, ಬರೆದು ಮಾಡಿ, ವರದಕ್ಷಿಣೆ ಪಡೆದು ನಡೆದ ಮದುವೆಗೆ ಹೋಗಿ ತಿಂದು ತೇಗಿ ನಂತರ ಸುಮ್ಮನಿರುವ ಹಲವರಿಗೆ ಬೀಡಿಯ ಬಗ್ಗೆ ಅತಿಯಾದ ಕಾಳಜಿ ಉಂಟಾಗಿದೆ ಈಗ.

ಇದರರ್ಥ ನಾನು ಬೀಡಿಯನ್ನು ಸಮರ್ಥಿಸುತ್ತಿದ್ದೇನೆಂದಲ್ಲ. ಸಿಕ್ಕಿ ಸಿಕ್ಕಿದ ಹಾಗೆ ಬರೆದು ಬಡಜನರನ್ನು ಉಭಯಸಂಕಟದಲ್ಲಿ ಸಿಕ್ಕಸುವ ಮೊದಲು ಒಮ್ಮೆ ಯೋಚಿಸಿ. ಬೇಡಿ ತಿನ್ನುವುದಕ್ಕಿಂತ ದುಡಿದು ತಿನ್ನಬೇಕೆನ್ನುವ ಸ್ವಾಭಿಮಾನಿಗಳೇ ಈ ಕೆಲಸದಲ್ಲಿರುವುದು. ಆ ಸ್ವಾಭಿಮಾನದಿಂದ ನಮ್ಮಲ್ಲಿ ಹಲವರ ಹಿರಿಯರು ಅದನ್ನೇ ಕಾಯಕವನ್ನಾಗಿಸಿ ನಮ್ಮನ್ನು ಬೆಳೆಸಿ ಒಂದು ನೆಲೆಗೆ ತಂದು ನಿಲ್ಲಿಸಿದ್ದಾರೆ. ಈಗ ಹೊಟ್ಟೆ ತುಂಬಿರುವಾಗ ಅದು ಹರಾಮ್ ಇದು ಹರಾಮ್ ಎಂದು ಫತ್ವಾ ಹೊರಡಿಸುವ ಮೊದಲು, ಈಗಲೂ ಅದನ್ನೇ ನಂಬಿ ಜೀವನ ಸಾಗಿಸುತ್ತಿರುವ ಸಾವಿರಾರು ಕುಟುಂಬಗಳಿಗೆ ಬೀಡಿಯ ಬದಲು ಬೇರೇನಾದರೂ ಪರ್ಯಾಯ ವ್ಯವಸ್ಥೆಯನ್ನು ಮಾಡಲು ನಮ್ಮಿಂದ ಸಾಧ್ಯವೇ ಎಂದು ಯೋಚಿಸಬೇಕಿದೆ. ಮನುಷ್ಯನ ಬದುಕುವ ಹಕ್ಕಿನ ಮೇಲೆ ಇಸ್ಲಾಂ ಕ್ರೂರವಾಗಿ ಎಂದೂ ವರ್ತಿಸಿಲ್ಲ. ವರ್ತಿಸುವುದೂ ಇಲ್ಲ ಎಂಬುದನ್ನು ಕೂಡ ನಾವು ಅರಿಯಬೇಕಾಗಿದೆ. ದುರಭ್ಯಾಸಗಳಿಂದ ದೂರವಿರಬೇಕು. ಸರಿ ಬೀಡಿ ಕಟ್ಟುವುದನ್ನು ಬಿಡಬೇಕು, ಎಂದಾದರೆ ಆ ಬಡ ಕುಟುಂಬಗಳಿಗೆ ಸಲ್ಲಬೇಕಾದ ಝಕಾತ್ ಅನ್ನು ಸರಿಯಾಗಿ ನೀಡೋಣ. ಅರಮನೆಯಂತಹ ಬಂಗಲೆಗಳನ್ನು ಕಟ್ಟುವ ಬದಲು ಒಂದು ಬಡವನಿಗೆ ಚಿಕ್ಕ ಮಟ್ಟಿನ ಮನೆ ನಿರ್ಮಾಣಕ್ಕೆ ಸಹಾಯ ಮಾಡೋಣ. ಆಹಾರ ಪದಾರ್ಥಗಳನ್ನು ತಯಾರಿಸಿ ಎಸೆಯುವ ಬದಲು ಹಸಿದವರಿಗೆ ಉಣಬಡಿಸೋಣ. ಮೊದಲಿಗೆ ನಮ್ಮ ಮನಸ್ಸನ್ನು ಸ್ವಚ್ಛಗೊಳಿಸಿ ನಂತರ ಇತರ ವಿಷಯಗಳ ಬಗ್ಗೆ ಗಮನ ಹರಿಸೋಣ ಎಂಬ ಆಶಯದೊಂದಿಗೆ

ನಿಮ್ಮ 
ಉಮ್ಮು ಸಾರಾ ಶಾಝಿಯ 
(ಉಮ್ಮು ಅರೂಶ್ ಮುಹಮ್ಮದ್

Writer - ಉಮ್ಮು ಸಾರಾ ಶಾಝಿಯ

contributor

Editor - ಉಮ್ಮು ಸಾರಾ ಶಾಝಿಯ

contributor

Similar News