Fact-Check| 2014ರ ಬಳಿಕ ಭಯೋತ್ಪಾದಕ ದಾಳಿಗಳಿಂದ ಯಾವುದೇ ನಾಗರಿಕ ಸಾವು ಸಂಭವಿಸಿಲ್ಲವೇ?: ವಾಸ್ತವ ಇಲ್ಲಿದೆ

Update: 2024-01-06 12:59 GMT

Photo source: Facebook

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವು ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ಭಯೋತ್ಪಾದಕ ದಾಳಿಗಳಿಂದಾಗಿ ಯಾವುದೇ ನಾಗರಿಕ ಸಾವುಗಳು ಸಂಭವಿಸಿಲ್ಲ ಎಂದು ಹೇಳಿಕೊಂಡಿರುವ ಗ್ರಾಫಿಕ್‌ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಹೇಳಿಕೆಯನ್ನು ಜಾಲಾಡಿದಾಗ ಇದು ಅಪ್ಪಟ ಸುಳ್ಳು ಎನ್ನುವುದು ಸಾಬೀತಾಗಿದೆ. ಮೋದಿ ಅಧಿಕಾರಕ್ಕೆ ಬಂದ ಬಳಿಕವೂ ನಾಗರಿಕ ಸಾವುಗಳು ಸಂಭವಿಸಿವೆ ಎಂದು ಸುದ್ದಿ ಜಾಲತಾಣ thequint.com ತನ್ನ ತನಿಖಾ ವರದಿಯಲ್ಲಿ ತಿಳಿಸಿದೆ.

ಈ ಗ್ರಾಫಿಕ್ 2019ರಿಂದಲೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದೇ ಹೇಳಿಕೆಯ ಹಳೆಯ ಪೋಸ್ಟ್‌ಗಳೂ ಅಲ್ಲಲ್ಲಿ ಕಾಣಸಿಗುತ್ತವೆ.


ಸತ್ಯವೇನು?

ಸಾರ್ವಜನಿಕ ವಲಯದಲ್ಲಿ ಲಭ್ಯವಿರುವ ದತ್ತಾಂಶಗಳ ಪ್ರಕಾರ ಈ ವೈರಲ್ ಗ್ರಾಫಿಕ್ ಸುಳ್ಳು, ಏಕೆಂದರೆ 2014ರ ನಂತರ ದೇಶದಲ್ಲಿ ಭಯೋತ್ಪಾದಕ ದಾಳಿಗಳಿಂದಾಗಿ ನಾಗರಿಕರ ಸಾವುಗಳು ಸಂಭವಿಸಿವೆ.

2023, ಆ.9ರಂದು ರಾಜ್ಯಸಭೆಯಲ್ಲಿ ಭಯೋತ್ಪಾದಕ ದಾಳಿಗಳಿಂದಾಗಿ ನಾಗರಿಕರ ಸಾವುಗಳ ಕುರಿತು ಪ್ರಶ್ನೆಗೆ ಉತ್ತರಿಸಿದ್ದ ಸಹಾಯಕ ಗೃಹಸಚಿವ ನಿತ್ಯಾನಂದ ರಾಯ್ ಅವರು,2018 ಮತ್ತು 2022ರ ನಡುವೆ ಸುಮಾರು 177 ಸಾವುಗಳು ಸಂಭವಿಸಿವೆ ಎಂದು ತಿಳಿಸಿದ್ದರು.

ಅಂಕಿಅಂಶಗಳ ಪ್ರಕಾರ, 2018ರಲ್ಲಿ ದೇಶದ ಒಳನಾಡಿನಲ್ಲಿ ಮೂವರು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಜಮ್ಮು-ಕಾಶ್ಮೀರದಲ್ಲಿ 2018ರಿಂದ 2022ರ ನಡುವೆ ಭಯೋತ್ಪಾದಕ ಘಟನೆಗಳಲ್ಲಿ ಸುಮಾರು 174 ನಾಗರಿಕರು ಸಾವನ್ನಪ್ಪಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ನಾಗರಿಕರ ಸಾವುಗಳು

ಕೇಂದ್ರಾಡಳಿತ ಪ್ರದೇಶದಲ್ಲಿ ಸರಕಾರದ ಕ್ರಮಗಳು ಭಯೋತ್ಪಾದಕ ಘಟನೆಗಳು ಕಡಿಮೆಯಾಗಲು ನೆರವಾಗಿವೆಯೇ ಎಂಬ ಹಲವು ಸದಸ್ಯರ ಪ್ರಶ್ನೆಗಳಿಗೆ ಲೋಕಸಭೆಯಲ್ಲಿ ರಾಯ್ ನೀಡಿದ ಉತ್ತರವೂ ಲಭ್ಯವಿದೆ.

ಭಯೋತ್ಪಾದನೆಯ ವಿರುದ್ಧ ಸರಕಾರವು ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ ಎಂದು ಉಲ್ಲೇಖಿಸುವಾಗ ರಾಯ್ ಹೋಲಿಕೆಗಾಗಿ 2018 ಮತ್ತು 2023ರ ನಡುವೆ ಸಾವನ್ನಪ್ಪಿದವರ ಸಂಖ್ಯೆಯನ್ನು ತೋರಿಸುವ ಕೋಷ್ಟಕವೊಂದನ್ನೂ ಒದಗಿಸಿದ್ದರು.

ಅಂಕಿಅಂಶಗಳ ಪ್ರಕಾರ ಜಮ್ಮು-ಕಾಶ್ಮೀರದಲ್ಲಿ 2018ರಲ್ಲಿ 55 ನಾಗರಿಕರು ಮತ್ತು 2023ರಲ್ಲಿ (ನ.30ರವರೆಗೆ) 13 ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ. ರಾಯ್ 2023,ಡಿ.19ರಂದು ಲೋಕಸಭೆಯಲ್ಲಿ ಈ ಉತ್ತರವನ್ನು ನೀಡಿದ್ದರು.

ಪಿಐಬಿ ದತ್ತಾಂಶಗಳು

ಪ್ರೆಸ್ ಇನ್ಫಾರ್ಮೇಷನ್ ಬ್ಯೂರೊ (ಪಿಐಬಿ) 2019, ಫೆ.5ರಂದು ಹೊರಡಿಸಿದ್ದ ಪತ್ರಿಕಾ ಪ್ರಕಟಣೆಯು 2014 ಮತ್ತು 2018ರ ನಡುವೆ ದೇಶದಲ್ಲಿ ನಡೆದಿದ್ದ ಭಯೋತ್ಪಾದಕ/ಬಂಡುಕೋರ/ಉಗ್ರಗಾಮಿ ಘಟನೆಗಳ ವಿವರಗಳನ್ನು ಒಳಗೊಂಡಿತ್ತು.

ದತ್ತಾಂಶಗಳ ಪ್ರಕಾರ ದೇಶದ ಒಳನಾಡಿನಲ್ಲಿ ಸುಮಾರು 11 ನಾಗರಿಕರು ಮತ್ತು ಜಮ್ಮು-ಕಾಶ್ಮೀರದಲ್ಲಿ ಸುಮಾರು 138 ನಾಗರಿಕರು ಕೊಲ್ಲಲ್ಪಟ್ಟಿದ್ದರು. ಈಶಾನ್ಯ ಭಾರತದಲ್ಲಿ ಬಂಡಾಯ ಸಂಬಂಧಿತ ಘಟನೆಗಳಲ್ಲಿ ಮೃತಪಟ್ಟವರ ಸಂಖ್ಯೆ 366.

ಎಡಪಂಥೀಯ ಉಗ್ರವಾದಕ್ಕೆ ಸಂಬಂಧಿಸಿದ ಘಟನೆಗಳಲ್ಲಿ ಸುಮಾರು 967 ನಾಗರಿಕರು ಕೊಲ್ಲಲ್ಪಟ್ಟಿದ್ದರು.

ತೀರ್ಮಾನ: ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ನಾಗರಿಕರ ಸಾವುಗಳು ಸಂಭವಿಸಿರುವುದರಿಂದ ವೈರಲ್ ಗ್ರಾಫಿಕ್ ಸುಳ್ಳು ಎನ್ನುವುದು ಸ್ಪಷ್ಟವಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News