ಗರ್ಭಪಾತದ ಗುಳಿಗೆಗಾಗಿ ಮೊರೆಯಿಡುತ್ತಿರುವ ಝಿಕಾ ಸೋಂಕಿತ ಗರ್ಭಿಣಿಯರು

Update: 2016-02-18 15:14 GMT

ವಾಶಿಂಗ್ಟನ್, ಫೆ. 18: ಲ್ಯಾಟಿನ್ ಅಮೆರಿಕದ ದೇಶಗಳಲ್ಲಿ ಝಿಕಾ ವೈರಸ್ ಸೋಂಕಿಗೆ ಒಳಗಾಗಿರುವ ಗರ್ಭೀಣಿಯರು, ವಿಕೃತ ತಲೆಗಳ ಶಿಶುಗಳಿಗೆ ಜನ್ಮ ನೀಡುವ ಭೀತಿಯಿಂದ ಗರ್ಭಪಾತ ಮಾಡಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

ಆದರೆ, ಅವರ ದೇಶಗಳಲ್ಲಿ ಗರ್ಭಪಾತವನ್ನು ನಿಷೇಧಿಸಲಾಗಿದೆ. ಹೀಗಾಗಿ ಬೇರೆ ದಾರಿ ಕಾಣದೆ, ತಮಗೆ ಗರ್ಭಪಾತದ ಗುಳಿಗೆಗಳನ್ನು ಕಳುಹಿಸಿಕೊಡುವಂತೆ ಕೋರಿ ಕೆನಡದ ‘ವಿಮೆನ್ ಆನ್ ವೆಬ್’ ಎಂಬ ಸಂಘಟನೆಗೆ ಭಾರೀ ಪ್ರಮಾಣದಲ್ಲಿ ಇಮೇಲ್‌ಗಳನ್ನು ಕಳುಹಿಸುತ್ತಿದ್ದಾರೆ.

ಎಲ್ಲವುಗಳ ಒಕ್ಕಣೆ ಒಂದೇ. ಹತಾಶೆಯಿಂದ ಸಹಾಯ ಕೋರಿ ಬರೆದ ಇಮೇಲ್‌ಗಳು. ಒಂದು ಇಮೇಲ್‌ನ ಒಕ್ಕಣೆ ಹೀಗಿದೆ: ‘‘ಸಹಾಯ ಮಾಡಿ. ವೆನೆಝುವೆಲದಲ್ಲಿ ಝಿಕಾ. ನಾನು ಗರ್ಭಪಾತ ಮಾಡಬೇಕು!’’.

 ಅವರೆಲ್ಲರ ಬೇಡಿಕೆಯೊಂದೇ. ತಮಗೆ ಗರ್ಭಪಾತದ ಗುಳಿಗೆಗಳನ್ನು ಕೊಡಿ ಎನ್ನುವುದು. ಆದರೆ, ಈ ಗುಳಿಗೆಗಳನ್ನು ಈ ಮಹಿಳೆಯರ ದೇಶಗಳಾದ ಬ್ರೆಝಿಲ್, ಕೊಲಂಬಿಯ, ವೆನೆಝುವೆಲ, ಪೆರು ಮತ್ತು ಎಲ್ ಸಾಲ್ವಡೋರ್‌ಗಳಲ್ಲಿ ಬಳಸುವುದು ಕಾನೂನುಬಾಹಿರವಾಗಿದೆ.

 ಝಿಕಾ ವೈರಸ್ ಮೂಲತಃ ಕ್ಯಾಥೊಲಿಕ್ ಹಾಗೂ ಸಂಪ್ರದಾಯವಾದಿ ದೇಶಗಳಲ್ಲಿ ಗರ್ಭಪಾತದ ವಿಷಯದಲ್ಲಿ ತೀವ್ರ ಚರ್ಚೆಯೊಂದನ್ನು ಹುಟ್ಟುಹಾಕಿದೆ. ಕೆಲವು ದೇಶಗಳಲ್ಲಿ ನ್ಯಾಯಾಂಗ ವ್ಯವಸ್ಥೆಯ ಅತ್ಯಂತ ಉನ್ನತ ವಲಯಗಳಲ್ಲಿ ಚರ್ಚೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News