ವಲಸಿಗರ ಹರಿವು ತಗ್ಗಿಸಲು ದ್ವೀಪಗಳಿಗೆ ಗ್ರೀಸ್ ಸೂಚನೆ

Update: 2016-02-26 16:46 GMT

ಅಥೆನ್ಸ್, ಫೆ. 26: ಗ್ರೀಸ್‌ನ ಪ್ರಧಾನ ಭೂಮಿಗೆ ತೆಪ್ಪಗಳ ಮೂಲಕ ಬಿಡುವ ವಲಸಿಗರ ಸಂಖ್ಯೆಯನ್ನು ಕಡಿಮೆ ಮಾಡುವಂತೆ ಗ್ರೀಸ್ ಸರಕಾರ ತನ್ನ ದ್ವೀಪಗಳ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಗ್ರೀಸ್‌ನಿಂದ ಉತ್ತರಕ್ಕಿರುವ ಐರೋಪ್ಯ ದೇಶಗಳು ತಮ್ಮ ಗಡಿಗಳಲ್ಲಿ ನಿರ್ಬಂಧಗಳನ್ನು ವಿಧಿಸಿದ ಬಳಿಕ ಗ್ರೀಸ್‌ನಲ್ಲಿ ವಲಸಿಗರ ಬಿಕ್ಕಟ್ಟು ಕಾಣಿಸಿಕೊಂಡಿದೆ. ಈ ಬಿಕ್ಕಟ್ಟನ್ನು ನಿಭಾಯಿಸಲು ಹೆಚ್ಚು ತಾತ್ಕಾಲಿಕ ಆಶ್ರಯ ಶಿಬಿರಗಳನ್ನು ನಿರ್ಮಿಸಲು ಸಮಯಾವಕಾಶ ಬೇಕಾಗಿದೆ ಎಂದು ಗ್ರೀಸ್ ಹೇಳಿದೆ.

ಟರ್ಕಿಗೆ ಅಭಿಮುಖವಾಗಿರುವ ಗ್ರೀಸ್ ದ್ವೀಪಗಳಿಗೆ ಸಿರಿಯ ನಿರಾಶ್ರಿತರು ಪ್ರವಾಹೋಪಾದಿಯಲ್ಲಿ ಏಜಿಯನ್ ಸಮುದ್ರ ದಾಟಿ ಬರುತ್ತಿದ್ದಾರೆ.

ಸಾವಿರಾರು ವಲಸಿಗರು ಸಾರ್ವಜನಿಕ ಉದ್ಯಾನಗಳಲ್ಲಿ ಹಾಗೂ ರಸ್ತೆ ಬದಿಗಳಲ್ಲಿ ಮಲಗುತ್ತಿದ್ದು, ಗ್ರೀಸ್‌ನಲ್ಲಿ ಸಿಕ್ಕಿಹಾಕಿಕೊಂಡಿರುವ ನಿರಾಶ್ರಿತರು ಮತ್ತು ವಲಸಿಗರ ಸಂಖ್ಯೆ ನಿರಂತರವಾಗಿ ಏರುತ್ತಿದೆ ಎಂದು ಗ್ರೀಸ್‌ನ ನೌಕಾಯಾನ ಸಚಿವಾಲಯ ಹೇಳಿದೆ.

ಹಾಗಾಗಿ, ಪ್ರಧಾನ ಭೂಮಿಗೆ ಬಿಡುವ ವಲಸಿಗರ ಸಂಖ್ಯೆಯನ್ನು ಕಡಿಮೆ ಮಾಡುವಂತೆ ತೆಪ್ಪಗಳನ್ನು ನಡೆಸುವ ಕಂಪೆನಿಗಳು ಮತ್ತು ಪ್ರಾದೇಶಿಕ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವಾಲಯ ತಿಳಿಸಿತು.

ರವಿವಾರದ ವೇಳೆಗೆ ನಿರಾಶ್ರಿತರಿಗೆ ಲೆಸ್ಬೋಸ್ ಮತ್ತು ಇತರ ದ್ವೀಪಗಳಲ್ಲಿ ತಾತ್ಕಾಲಿಕ ಆಶ್ರಯ ಕಲ್ಪಿಸಲಾಗುವುದು ಎಂದು ಅದು ಭರವಸೆ ನೀಡಿದೆ.

ಟರ್ಕಿಯಿಂದ ಪ್ರತಿ ದಿನ ಡಿಂಗಿ ಮತ್ತು ಸಣ್ಣ ದೋಣಿಗಳ ಮೂಲಕ ಸುಮಾರು 2,000ದಷ್ಟು ನಿರಾಶ್ರಿತರು ಗ್ರೀಸ್‌ಗೆ ಬರುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News