ಲೈಂಗಿಕ ದೌರ್ಜನ್ಯ ಆರೋಪಗಳ ಸುಳಿಯಲ್ಲಿ ಡೊನಾಲ್ಡ್ ಟ್ರಂಪ್

Update: 2016-02-26 16:51 GMT

ವಾಶಿಂಗ್ಟನ್, ಫೆ. 26: ಅಮೆರಿಕದ ರಿಪಬ್ಲಿಕನ್ ಪಕ್ಷದ ಮುಂಚೂಣಿಯ ಅಧ್ಯಕ್ಷೀಯ ಅಭ್ಯರ್ಥಿ ಆಕಾಂಕ್ಷಿ ಡೊನಾಲ್ಡ್ ಟ್ರಂಪ್ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪಗಳು ಮತ್ತೆ ಪ್ರಚಾರ ಪಡೆದುಕೊಳ್ಳುತ್ತಿವೆ.

 ಡೊನಾಲ್ಡ್ ಟ್ರಂಪ್ ವಿರುದ್ಧ ತಾನು ಮಾಡಿರುವ ಆರೋಪಗಳನ್ನು ಮಹಿಳೆಯೊಬ್ಬರು ಪುನರುಚ್ಚರಿಸಿದ್ದಾರೆ. ‘‘ನನ್ನ ಸ್ನೇಹಿತನೊಂದಿಗೆ ವ್ಯಾಪಾರ ಒಪ್ಪಂದವೊಂದನ್ನು ನಡೆಸಿದ ಬಳಿಕ, ಟ್ರಂಪ್ ನನ್ನನ್ನು ಹೊಟೇಲ್ ಕೋಣೆಯೊಂದಕ್ಕೆ ಬಲವಂತವಾಗಿ ಕರೆದುಕೊಂಡು ಹೋಗಿ ನನ್ನ ಒಪ್ಪಿಗೆಯಿಲ್ಲದೆ ನನ್ನ ದೇಹವನ್ನು ಅನುಚಿತವಾಗಿ ಸ್ಪರ್ಶಿಸಿದ್ದಾರೆ’’ ಎಂದು ಮಹಿಳೆ ಹೇಳಿದ್ದಾರೆ.

ಅದೂ ಅಲ್ಲದೆ, 1992ರಿಂದ 1997ರ ನಡುವಿನ ಅವಧಿಯಲ್ಲಿ ಹಲವಾರು ಸಂದರ್ಭಗಳಲ್ಲೂ ಟ್ರಂಪ್ ತನ್ನ ದೇಹದ ಮೇಲೆ ಕೈಯಾಡಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಗಿ ‘ಗಾರ್ಡಿಯನ್’ ವರದಿ ಮಾಡಿದೆ.

ಈ ಘಟನೆಯು ತನ್ನನ್ನು ಮಾನಸಿಕವಾಗಿ ಜರ್ಝರಿತಳನ್ನಾಗಿಸಿತ್ತು ಎಂದು ಮಹಿಳೆ ಹೇಳಿದ್ದಾರೆ. ಟ್ರಂಪ್ ವಿರುದ್ಧ 125 ಮಿಲಿಯ ಡಾಲರ್ (ಸುಮಾರು 859 ಕೋಟಿ ರೂಪಾಯಿ) ಮಾನನಷ್ಟ ಮೊಕದ್ದಮೆ ದಾಖಲಿಸಿದೆನಾದರೂ, ಒಂದೇ ತಿಂಗಳಲ್ಲಿ ಅದನ್ನು ವಾಪಸ್ ಪಡೆದೆ ಎಂದಿದ್ದಾರೆ.

ಆದಾಗ್ಯೂ, ವ್ಯವಹಾರ ವಿವಾದವೊಂದನ್ನು ಪರಿಹರಿಸುವುದಕ್ಕಾಗಿ ತನ್ನ ವಿರುದ್ಧ ಲೈಂಗಿಕ ದೌರ್ಜನ್ಯ ಮೊಕದ್ದಮೆ ದಾಖಲಿಸಲಾಗಿತ್ತು ಹಾಗೂ ವಿವಾದವನ್ನು ಬಳಿಕ ಇತ್ಯರ್ಥಪಡಿಸಿದೆ ಎಂದು ಅಂದು ಟ್ರಂಪ್ ಹೇಳಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News