×
Ad

ಕೆಪಿಸಿಸಿಗೆ ಪರಿಶಿಷ್ಟ ಅಧ್ಯಕ್ಷ , ಕರಾವಳಿಯ ವಿರೋಧ ಲೆಕ್ಕಿಸದೆ "ಎತ್ತಿನಹೊಳೆ" ಅನುಷ್ಠಾನಕ್ಕೆ ಚಿಂತನೆ

Update: 2016-03-01 21:08 IST

ಬೆಂಗಳೂರು.ಮಾ.1: ಬರುವ ದಿನಗಳಲ್ಲಿ ಪಕ್ಷ ಮತ್ತು ಸರ್ಕಾರದ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು ಕಾರ್ಯತಂತ್ರ ರೂಪಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ, ಇದೀಗ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಪಂಗಡಕ್ಕೆ ಸೇರಿದವರನ್ನು ನೇಮಿಸಲು ಗಂಭೀರ ಚಿಂತನೆ ನಡೆಸಿರುವ ಸಂಗತಿ ಬೆಳಕಿಗೆ ಬಂದಿದೆ.

ಅಹಿಂದ ಮತಬ್ಯಾಂಕ್‌ನ್ನು ಇನ್ನಷ್ಟು ಗಟ್ಟಿಗೊಳಿಸಲು ಕಾರ್ಯತಂತ್ರ ರೂಪಿಸುತ್ತಿರುವ ಸಿದ್ದರಾಮಯ್ಯ ಬಣ, ಲಿಂಗಾಯಿತ ಮತ್ತು ವಕ್ಕಲಿಗ ಸಮುದಾಯಕ್ಕೆ ಸೇರದವರನ್ನು ಈ ಹುದ್ದೆಗೆ ತಂದರೆ ಸೂಕ್ತ ಎನ್ನುವ ನಿಲುವಿಗೆ ಬಂದಿದೆ.

ದುಬಾರಿ ವಾಚ್ ಪ್ರಕರಣದಿಂದ ಹೊರ ಬಂದು ಪಕ್ಷವನ್ನು ಪರಿಣಾಮಕಾರಿಯಾಗಿ ಸಂಘಟಿಸಿ ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ತರುವ ಸಲುವಾಗಿ ಕಾರ್ಯತಂತ್ರ ರೂಪಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಪರಿಶಿಷ್ಟ ಸಮುದಾಯದ ಮೇಲ್ಮನೆ ಸದಸ್ಯ ವಿ.ಎಸ್. ಉಗ್ರಪ್ಪ, ಸಣ್ಣ ಕೈಗಾರಿಕಾ ಸಚಿವ ಸತೀಶ್ ಜಾರಕಿಹೊಳಿ, ಅವರ ಸಂಬಂಧಿ ರಮೇಶ್ ಜಾರಕಿಹೊಳಿ, ಎನ್.ವೈ. ಗೋಪಾಲಕೃಷ್ಣ ಅವರ ಪೈಕಿ ಒಬ್ಬರನ್ನು ಈ ಹದ್ದೆಗೆ ತರಲು ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.
ಉಗ್ರಪ್ಪ ಕೆಪಿಸಿಸಿ ಅಧ್ಯಕ್ಷರಾದರೆ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಹುಳುಕುಗಳನ್ನು ಯಶಸ್ವಿಯಾಗಿ ಹೊರ ತೆಗೆಯಲಿದ್ದಾರೆ. ಜತೆಗೆ ಸರ್ಕಾರದ ಸಾಧನೆಗಳನ್ನು ಸಹ ಜನ ಸಾಮಾನ್ಯರಿಗೆ ಮುಟ್ಟಿಸಲು ಸೂಕ್ತ ಕಾರ್ಯತಂತ್ರ ರೂಪಿಸಲಿದ್ದಾರೆ ಎನ್ನುವ ವಿಶ್ವಾಸ ಸಿದ್ದರಾಮಯ್ಯ ಅವರದ್ದಾಗಿದೆ.

ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆ ನಂತರ ಸಿದ್ದರಾಮಯ್ಯ ಅವರು ಹಿರಿಯ ಧುರೀಣ, ಮಾಜಿ ಕೇಂದ್ರ ಸಚಿವ ಆರ್.ಎಲ್. ಜಾಲಪ್ಪ ಅವರ ನಿವಾಸದಲ್ಲಿ ಮಹತ್ವದ ಸಭೆ ನಡೆಸಿದ್ದು, ಅಹಿಂದ ಮತಬ್ಯಾಂಕ್ ರಾಜಕಾರಣವನ್ನು ಇನ್ನಷ್ಟು ಗಟ್ಟಿಗೊಳಿಸುವ ಕಾರ್ಯತಂತ್ರಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ.

ಕಳೆದ ವಾರ ಸಿದ್ದರಾಮಯ್ಯ ನವದೆಹಲಿಗೆ ತೆರಳುವ ಮುನ್ನ ಈ ಕುರಿತು ಚರ್ಚೆ ನಡೆಸಿದ್ದು, ಈ ಬಣ ಮೂರು ಹಂತದ ಕಾರ್ಯತಂತ್ರ ರೂಪಿಸಿದೆ ಎನ್ನಲಾಗಿದೆ. ಪರಿಶಿಷ್ಟ ಪಂಗಡ ಮತ್ತು ಕುರುಬ ಸಮುದಾಯ ಒಟ್ಟು ಶೇ 15 ರಷ್ಟು ಜನಸಂಖ್ಯೆ ಹೊಂದಿದ್ದು, ಈ ಸಮುದಾಯಗಳು ಮಾದಿಗ ಸಮುದಾಯದ ಜತೆ ಉತ್ತಮ ಒಡನಾಟ ಹೊಂದಿವೆ. ಜತೆಗೆ ಅಲ್ಪ ಸಂಖ್ಯಾತರನ್ನು ಸೆಳೆದು ಪಕ್ಷವನ್ನು ಗಟ್ಟಿಗೊಳಿಸುವ ಕುರಿತಂತೆ ಸಮಾಲೋಚನೆ ನಡೆಸಲಾಗಿದೆ.

ಇದರ ಜತೆಗೆ ಎತ್ತಿನಹೊಳೆ ಯೋಜನೆಯನ್ನು ಜಾರಿಗೆ ತರಲು ಹೆಚ್ಚಿನ ಮುತುವರ್ಜಿ ವಹಿಸಲು ಈ ಬಣ ಮುಂದಾಗಿದೆ. ಜಲ ಸಮೃದ್ಧಿ ಹೊಂದಿರುವ ಕರಾವಳಿ ಜನ ವಿರೋಧಿಸಿದರೂ ಸರಿಯೇ ನೀರಿಲ್ಲದೇ ಕೆಂಗೆಟ್ಟಿರುವ ಬಯಲುಸೀಮೆಗೆ ಈ ಯೋಜನೆ ಜಾರಿಗೆ ತಂದೇ ತೀರಬೇಕೆಂಬ ಅಚಲ ನಿರ್ಧಾರಕ್ಕೆ ಬಂದಿದೆ. ಕರಾವಳಿ ಹೇಗಿದ್ದರೂ ಕಾಂಗ್ರೆಸ್ ಪಕ್ಷಕ್ಕೆ ಸಹಕಾರಿಯಾಗಿಲ್ಲ. ಕರಾವಳಿ ಹೋರಾಟಗಾರರಿಗೆ ಹೆದರಿ ನೀರಿಲ್ಲದೇ ತೊಂದರೆ ಎದುರಿಸುತ್ತಿರುವವರನ್ನು ನಿರ್ಲಕ್ಷಿಸಬಾರದು ಎನ್ನುವ ತೀರ್ಮಾನಕ್ಕೆ ಈ ಬಣ ಬಂದಿದೆ ಎನ್ನಲಾಗಿದೆ. ಇದರಿಂದ ಬಯಲು ಸೀಮೆಯಲ್ಲಿ ಪಕ್ಷದ ನೆಲೆಯನ್ನು ಇನ್ನಷ್ಟು ವಿಸ್ತರಿಸಲು ಸಹಕಾರಿಯಾಗಲಿದೆ ಎನ್ನುವುದು ಈ ಬಣದ ನಿಲುವಾಗಿದೆ. ಇದೇ ಉದ್ದೇಶದಿಂದ ಮಾರ್ಚ್ 6 ರಂದು ಸಿದ್ದರಾಮಯ್ಯ ಉನ್ನತ ಮಟ್ಟದ ಸಭೆ ಕರೆದಿದ್ದಾರೆ.

Writer - ನಂಜುಂಡಪ್ಪ , ಬೆಂಗಳೂರು

contributor

Editor - ನಂಜುಂಡಪ್ಪ , ಬೆಂಗಳೂರು

contributor

Similar News