ದೇಶದ ಪ್ರಧಾನಮಂತ್ರಿಗೊಂದು ಓಪೆನ್ ಡಿಬೇಟಿಗೆ ಕರೆ ಕೊಡು ಪುಟ್ಟಿ ..

Update: 2016-03-09 06:00 GMT

ಪುಟ್ಟಿ ಜಾಹ್ನವೀ, 

MH ಮುಗಿಸಿ PhD ಮಾಡ್ತಿರೋ ಕನ್ಹಯ್ಯನಿಗೆ ಒಂದು ಓಪೆನ್ ಡಿಬೇಟ್ ಗೆ ಬರಲು ಛಾಲೆಂಜ್ ಹಾಕಿದ್ದಿ. ಆದರೆ ಪ್ರಶ್ನೆ ಏನೂ ಅಂತಲೇ ಹೇಳುತ್ತಿಲ್ಲ. ಇರಲಿ, ಎ.ಎನ್.ಐಗೆ ಮಾತನಾಡುತ್ತ ನೀನು ಎಸೆದ ಚಾಲೆಂಜ್ ಸ್ವಾಗತಾರ್ಹವಾದದ್ದು. ಪ್ರಶ್ನೆಗಳಿದ್ದರೆ ಮೀಡಿಯಾ ಮೂಲಕವೇ ಕೇಳಬಹುದು, ಆ ಪ್ರಶ್ನೆಗಳು ಜಗತ್ತಿಗೂ ಗೊತ್ತಾಗಬೇಕು. ಕನ್ಹಯ್ಯ ಅದಕ್ಕೆ ಉತ್ತರ ಕೊಡಲೇ ಬೇಕು. ಆದ್ರೆ ಪ್ರಶ್ನೆಗಳೇನೆಂದು ನೀನು ಕೇಳುತ್ತಲೇ ಇಲ್ಲ. ಇದು ನಿನ್ನ ಮತ್ತು ಕನ್ಹಯ್ಯನಿಗೆ ಮಾತ್ರ ಸಂಬಂಧಿಸಿದ ವಿಚಾರವಾಗಿದ್ದರೆ ಇಬ್ಬರ ನಡುವೆ ಮಾತ್ರ ಸಂವಾದ ನಡೆಯುವುದು ಒಪ್ಪಬಹುದಿತ್ತು. ಇದೀಗ ಕನ್ಹಯ್ಯನದ್ದು ದೇಶದ ವಿಚಾರ.., ಪ್ರಶ್ನೋತ್ತರಗಳು ಜನರ ಮುಂದೆಯೇ ನಡೆಯಬೇಕು. ಪ್ರಶ್ನೆಯಿದ್ದಿದ್ದರೆ ಮೀಡಿಯಾ ಮುಂದೆಯೇ ಇಂಥಿಂಥ ಪ್ರಶ್ನೆಗಳಿವೆ ಅಂತ ಮುಂದಿಡಬಹುದಿತ್ತು. ನೀನು ಪ್ರಶ್ನೆಗಳನ್ನೇ ಮುಂದಿಡುತ್ತಿಲ್ಲ.. ಇಲ್ಲಿ ಏನೋ ಮಿಸ್ ಹೊಡೀತಿದೆ.

ನಿನ್ನದೇ ವಯಸ್ಸಿನ ದೇಶದ ಮಕ್ಕಳು ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳು ಶಾಲೆಗೆ ಹೋಗುವಾಗೆಲ್ಲ ಎಂತೆಲ್ಲ ಯಾತನೆಪಡುತ್ತ ಶಾಲೆ ತಲುಪುತ್ತಿವೆ ಅನ್ನುವುದು ನಿನಗೆ ತಿಳಿದಿಲ್ಲವೆನಿಸುತ್ತದೆ. ಬೊಂಬು ಸೇತುವೆ, ಮರದ ಸೇತುವೆ, ಮುರಿದ ಸೇತುವೆ ಇರುವ ಕಡೆ ಜೀವ ಕೈಯಲ್ಲಿ ಹಿಡಿದು ಕರೆಕೊಳ್ಳಗಳನ್ನು ದಾಟುತ್ತ, ಸೇತುವೆ ಇಲ್ಲದ ಕಡೆಯಲ್ಲಿ ಪ್ರತಿನಿತ್ಯ ನದಿಕೆರೆಗಳನ್ನು ಈಜಿಕೊಂಡು ದಾಟಿ ಶಾಲೆ ತಲುಪುವ, ಶಾಲೆ ಮುಗಿದ ನಂತರ ಇದೇ ಬಗೆಯಲ್ಲಿ ಮನೆ ತಲುಪುವ ಕೋಟಿ ಕಂದಮ್ಮಗಳಿರುವ ದೇಶವನ್ನು ಅಭಿವೃದ್ಧಿ ಪಥದಲ್ಲಿರುವ ನಾಡು ಅಂತ ಎಂದು ನೀನು ಕರೆಯುವುದಾದರೆ ನಾನು ಮುಲಾಜಿಲ್ಲದೆ ನರೇಂದ್ರಮೋದಿಗೆ ಜೈಕಾರ ಹಾಕುತ್ತೇನೆ.

ಪುಟ್ಟೀ.. ಇವೆಲ್ಲವನ್ನೂ ಸರಿ ಪಡಿಸಬೇಕಿರುವುದು ಕನ್ಹಯ್ಯನಲ್ಲ.. ಅವನಿಗೆ ಅಂಥ ಯಾವ ಅಧಿಕಾರವೂ ಇಲ್ಲ. ಅಧಿಕಾರವಿರುವುದು ನಿನ್ನ ಆರಾಧ್ಯದೈವ ನರೇಂದ್ರ ಮೋದಿಯ ಬಳಿಯಲ್ಲಿ. ಹಂಗಾಗಿ ನೀನು ಓಪೆನ್ ಡಿಬೇಟ್ ಚಾಲೆಂಜ್ ಗೆ ಕರೆಯಬೇಕಿರುವುದು ಕನ್ಹಯ್ಯನನ್ನಲ್ಲ.. ಈ ದೇಶದ ಪ್ರಧಾನ ಮಂತ್ರಿಯವರನ್ನ. ಬೇಟಿಯನ್ನ ಪಡಾವ್ ಮಾಡುವುದಕ್ಕೂ ಮೊದಲು ಬೇಟಿ ಬಚಾವ್ ಆಗಬೇಕು.. ಜೀವವುಳಿಸಿಕೊಂಡು ಬಚಾವಾದ ಮ್ಕಕಳನ್ನ ನಂತರ ಪಡಾವಾದ್ರೂ ಮಾಡಿಕೊಳ್ಳಲಿ, ವಡಾಪಾವ್ ಆದ್ರೂ ಮಾಡಿಕೊಳ್ಳಲಿ.. ಭವ್ಯ ಸಂಸ್ಕೃತಿ, ದಿವ್ಯ ಪರಂಪರೆ, ಕ್ಷಾತ್ರ ತೇಜಸ್ಸು, ಧರ್ಮ ಮಣ್ಣುಮಸಿ ಲೊಟ್ಟೆಲೊಸಕು ಯಾವುವೂ ಜೀವ ಕೈಲಿ ಹಿಡಿದು ನದಿಯಲ್ಲಿ ಈಜಿ ಶಾಲೆ ತಲುಪಿ ಒದ್ದೆಬಟ್ಟೆಯಲ್ಲೇ ಪಾಠ ಕೇಳುವ ಈ ದೇಶದ ಮುಕ್ಕಾಲುಪಾಲು ಬಡವರ ಮಕ್ಕಳ ಕಷ್ಟಕ್ಕೆ ಕಿವಿ ಕೊಟ್ಟಿಲ್ಲ.. ನೀನಾದರೂ ಕಿವಿ ಕೊಡು..

ಇವನ್ನು ಮುಂದಿಟ್ಟು ದೇಶದ ಪ್ರಧಾನಮಂತ್ರಿಗೊಂದು ಓಪೆನ್ ಡಿಬೇಟಿಗೆ ಕರೆ ಕೊಡು. ಅಂದ್ಹಾಗೆ ನೀನು ಧರಿಸಿದ ಬ್ರಾಂಡೆಡ್ ಟೀಶರ್ಟ್ ತುಂಬ ಚೆನ್ನಾಗಿದೆ.. ಯಾವ ಶಾಪಿಂಗ್ ಮಾಲ್ ನಲ್ಲಿ ತೆಗೆದದ್ದು?

ಹುಷಾರು ಪುಟ್ಟಿ. ಟೇಕ್ ಕೇರ್. 
ಆಶೀರ್ವಾದಗಳು.

ದಯಾನಂದ್ ಟಿ.ಕೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News