" ನೀವು ಶೀಘ್ರ ಗುಣಮುಖರಾಗಿ ಎಂದು ಹಾರೈಸುತ್ತೇನೆ "

Update: 2016-03-09 09:48 GMT

ಪ್ರಿಯ ಖೇರ್ ಅವರೇ , 

ನೀವು ಟೆಲಿಗ್ರಾಫ್ ನ್ಯಾಷನಲ್ ಡಿಬೇಟ್ ನಲ್ಲಿ ಮಾತನಾಡಿದ್ದನ್ನು ಕೇಳಿದೆ. ಅಲ್ಲಿ  ' ಸಹಿಷ್ಣುತೆಯೇ ಹೊಸ ಅಸಹಿಷ್ಣುತೆಯೇ ?' ಎಂಬುದು ಅಲ್ಲಿ ಚರ್ಚೆಯ ವಿಷಯವಾಗಿತ್ತು. ಶ್ರೀ ಮೋದಿ ಅವರು ಕಳೆದ ಎರಡು ವರ್ಷಗಳಲ್ಲಿ ಎಷ್ಟು ರಜೆ ತೆಗೆದುಕೊಂಡಿದ್ದಾರೆ ಹಾಗು ಅವರು ದೀಪಾವಳಿ ಎಲ್ಲಿ ಆಚರಿಸಿದರು ಎಂಬುದು ನನಗೆ ತಿಳಿದಂತೆ ಅಲ್ಲಿ ಚರ್ಚೆಯ ವಿಷಯವಾಗಿರಲಿಲ್ಲ. ಹಾಗಾಗಿ ನಿಮ್ಮ ಇಡೀ ಭಾಷಣ ಮೋದಿಯವರನ್ನು ಸಮರ್ಥಿಸಿಕೊಳ್ಳಲು ಹಾಗು ಅವರ ಶ್ರೇಷ್ಠತೆಯ ಕುರಿತು ಹೊಗಳಲು ಮೀಸಲಾಗಿದ್ದು ನೋಡಿ ನನಗೆ ಆಶ್ಚರ್ಯವಾಯಿತು. ಪ್ರಧಾನಿ ಕುರಿತ ನಿಮ್ಮ ಪ್ರೀತಿ ಹಾಗು ಅಭಿಮಾನ ನಿಜಕ್ಕೂ ಅಭಿನಂದನೀಯವಾಗಿದೆ. ಆದರೆ ಅವರನ್ನು ಟೀಕಿಸುವವರನ್ನು ದಯವಿಟ್ಟು ದ್ವೇಷಿಸಬೇಡಿ. ಮೋದಿಯವರು ಐದು ವರ್ಷಗಳ ಅವಧಿಗೆ ಭರ್ಜರಿ ಬಹುಮತದೊಂದಿಗೆ ಆಯ್ಕೆಯಾಗಿದ್ದಾರೆ. ಹಾಗಾಗಿ ಟೀಕೆಗಳಿಂದ ಅವರು ತಮ್ಮ ಪಟ್ಟ ಕಳೆದುಕೊಳ್ಳುವ ಯಾವುದೇ ಸಾಧ್ಯತೆಯಿಲ್ಲ. ಅವರದೇ ದೌರ್ಬಲ್ಯಗಳಿಂದ ಕುರ್ಚಿ ಕಳೆದುಕೊಂಡರೆ ಅದು ಬೇರೆ ವಿಷಯ. ಹಾಗಾಗಿ ಅವರ ಟೀಕಾಕಾರರ ಬಗ್ಗೆ ನೀವು ಇಷ್ಟು ಅಸಹಿಷ್ಣು ಆಗಬೇಕಾದ ಯಾವ ಅಗತ್ಯವೂ ನನಗೆ ಕಾಣುತ್ತಿಲ್ಲ. 

ನೀವು ನಿಮ್ಮನ್ನು ಸಹಿಷ್ಣುತೆಯ ಚಾಂಪಿಯನ್ ಎಂಬಂತೆ ಬಿಂಬಿಸಿಕೊಳ್ಳುತ್ತೀರಿ. ಆದರೆ ಮೊನ್ನೆಯ ಚರ್ಚೆಯಲ್ಲಿ ಇತರ ಪ್ಯಾನೆಲಿಸ್ಟ್ ಗಳ ಅಭಿಪ್ರಾಯಗಳ ಬಗ್ಗೆ ನಿಮಗೇ ಹ್ರುದಯಾಘಾತವಾಯಿತೋ ಎಂಬಷ್ಟು ಸಿಟ್ಟು ಮಾಡಿಕೊಂಡಿರಿ ಮತ್ತು ಅಷ್ಟು ಅಸಹಿಷ್ಣುತೆ ತೋರಿದಿರಿ ! ಇತರ ಪ್ಯಾನೆಲಿಸ್ಟ್ ಗಳ ಮೇಲೆ ಅಕ್ಷರಶ: ಗೂಂಡಾಗಳಂತೆ ಬೊಬ್ಬೆ ಹಾಕಿದಿರಿ. , ಹೌದು ಗೂಂಡಾಗಳಂತೆ. ನಿಮ್ಮ ನಾಟಕಕ್ಕೆ ಗೂಂಡಾಗಿಂತ ಉತ್ತಮ ಪದ ನನಗೆ ಸಿಗಲಿಲ್ಲ. ನಿಮ್ಮ ಆ ' ಹೀರೋಯಿಕ್ ' ಭಾಷಣಕ್ಕೆ ಕೆಲವರು ನಿಮ್ಮನ್ನು ಅಭಿನಂದಿಸಿರಬಹುದು. ಆದರೆ ಅದು ಅತ್ಯಂತ ಕೀಳು ಮಟ್ಟದ್ದು ಹಾಗು ಅಷ್ಟೇ ಹಾಸ್ಯಾಸ್ಪದವೂ ಆಗಿತ್ತು ಎಂಬುದು ನನ್ನ ಅನಿಸಿಕೆ. ಸುಪ್ರೀಂ ಕೋರ್ಟ್ ತೀರ್ಪೊಂದನ್ನು ಟೀಕಿಸಿದ್ದಕ್ಕೆ ನೀವು ನ್ಯಾ. ಗಂಗೂಲಿ ವಿರುದ್ಧ ಬೊಬ್ಬೆ ಹಾಕಿದಿರಿ ! ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಟೀಕಿಸಬಾರದು ಎಂದು ಯಾರು ನಿಮಗೆ ಹೇಳಿದ್ದು ? ಕ್ಷಮಿಸಿ ಖೇರ್ , ನೀವು ದೇಶದ ಕಾನೂನು ವ್ಯವಸ್ಥೆ ಹಾಗು ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಎಷ್ಟು ಕಡಿಮೆ ತಿಳಿದುಕೊಂಡಿದ್ದೀರಿ ಎಂಬುದನ್ನು ಮಾತ್ರ ಇದು ತೋರಿಸುತ್ತದೆ. ನಿಮ್ಮಂತಹ ಅರ್ಧಂಬರ್ಧ ಜ್ಞಾನ ಹಾಗು ತಪ್ಪುತಿಳುವಳಿಕೆಗಳುಳ್ಳ ಜನರು ರಾಷ್ಟ್ರೀಯತೆಗೆ ಹೊಸ ವ್ಯಾಖ್ಯಾನ ನೀಡಲು ಪ್ರಯತ್ನಿಸುತ್ತಿರುವುದೇ ಇಂದಿನ ನಿಜವಾದ ಸಮಸ್ಯೆಯಾಗಿದೆ . 

ನೀವು ಮೋದಿಯವರನ್ನು ಬೆಂಬಲಿಸಿದ್ದಕ್ಕಾಗಿ ನಿಮ್ಮನ್ನು ' ಚಮಚಾ ' ಎಂದು ಬ್ರ್ಯಾಂಡ್ ಮಾಡಲಾಗುತ್ತಿದೆ ಎಂದು ಅಲ್ಲಿ ದೂರಿದಿರಿ. ಆದರೆ ನೀವು ಮಾಡುತ್ತಿರುವುದು ಅದನ್ನೇ ಅಥವಾ ಅದಕ್ಕಿಂತಲೂ ಕೀಳು ಮಟ್ಟದ ಕೆಲಸವನ್ನೇ ಅಲ್ಲವೇ ?  ಮೋದಿ ವಿರುದ್ಧ ಮಾತನಾಡುವವರೆಲ್ಲರೂ ನಿಮ್ಮ ಪ್ರಕಾರ ದೇಶ ವಿರೋಧಿಗಳು ! ಆಡಳಿತ ಪಕ್ಷಕ್ಕೆ ಸೇರಿದ ಪ್ರಚೋದನಕಾರಿ ದ್ವೇಷ ಭಾಷಣ ಮಾಡುವವರನ್ನೆಲ್ಲಾ ಪಕ್ಷದಿಂದ ಕಿತ್ತೊಗೆಯಬೇಕು ಹಾಗು ಜೈಲಿಗೆ ಹಾಕಬೇಕು ಎಂದು ನೀವು ಹೇಳಿದಿರಿ. ಆದರೆ ಹಾಗೆ ಯಾವತ್ತಾದರೂ ಆಗಲಿದೆ ಎಂದು ನಿಮಗೆ ಅನಿಸುತ್ತದೆಯೇ ? ಅವರ ವಿರುದ್ಧ ಹೇಗೂ ಕ್ರಮ ಕೈಗೊಳ್ಳುವುದಿಲ್ಲ ಎಂದು ನಿಮಗೆ ಚೆನ್ನಾಗಿ ಗೊತ್ತು.  ಹಾಗಾಗಿ ಅವರ ವಿರುದ್ಧ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತಪಡಿಸಿ ಜನರಿಂದ ಪ್ರಶಂಸೆ ಗಿಟ್ಟಿಸಿಕೊಳ್ಳುವ ಅವಕಾಶವಾದಿ ಹಾಗು ಕಪಟ ಸ್ವಭಾವ ನಿಮ್ಮದು. ನೀವು ಪ್ರಧಾನಿ ಮೋದಿ ಅವರಿಗೆ ಭಾರೀ ಆಪ್ತರು ಎಂದು ಕೇಳಿದ್ದೇನೆ ಹಾಗು ಹಲವು ಸಂದರ್ಭಗಳಲ್ಲಿ ನೀವು ಅವರನ್ನು ಭೇಟಿಯಾಗಿದ್ದನ್ನು ನೋಡಿದ್ದೇನೆ. ಹೀಗೆ ಬಾಯಿಗೆ ಬಂದಂತೆ ಮಾತನಾಡುವ ರಾಜಕಾರಣಿಗಳ ವಿರುದ್ಧ ನೀವು ಭಾಷಣದಲ್ಲಿ ಹೇಳಿದಂತೆ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಎಂದಾದರೂ ಅವರನ್ನು ಕೇಳಿದ್ದೀರಾ ? ನಿಮ್ಮ ಪ್ರಕಾರ ಯಾರು ನಮ್ಮ ಸಮಾಜಕ್ಕೆ ಹೆಚ್ಚು ಅಪಾಯಕಾರಿಗಳು ? ಶಾಂತವಾಗಿ ತಮ್ಮ ಪ್ರಶಸ್ತಿಯನ್ನು ಹಿಂದಿರುಗಿಸುತ್ತಿರುವವರೇ ಅಥವಾ ಬಹಿರಂಗವಾಗಿ ಹಿಂಸೆಗೆ ಪ್ರಚೋದನೆ ನೀಡುವ ದ್ವೇಷ ಭಾಷಣ ಮಾಡುವವರೇ ? ನೀವು ' ಅವಾರ್ಡ್ ವಾಪ್ಸಿ' ಬ್ರಿಗೇಡ್ ಎಂದು ಜರೆಯುವವರ ವಿರುದ್ಧ ಅತ್ಯಂತ ಕಟು ನಿಲುವು ತೆಗೆದುಕೊಂಡ ನೀವು ಈ ಹಿಂಸೆ ಪ್ರಚೋದಿಸುವ ರಾಜಕಾರಣಿಗಳ ಬಗ್ಗೆ ಮಾತ್ರ ಕೇವಲ ಬೂಟಾಟಿಕೆಯ ಆಕ್ರೋಶ ವ್ಯಕ್ತಪಡಿ ಸುತ್ತೀರಿ. ನಿಮ್ಮ ಈ ದ್ವಂದ್ವ ನಿಮ್ಮ ಉದ್ದೇಶ ಹಾಗು ನಿಷ್ಠೆಯ ಕುರಿತು ಪ್ರಶ್ನಿಸುವಂತೆ ಮಾಡುತ್ತಿದೆ. ನಿಮ್ಮ ನಿಷ್ಠೆ ಈ ದೇಶಕ್ಕೇ ಅಥವಾ ಕೇವಲ ಒಂದು ರಾಜಕೀಯ ಪಕ್ಷ ಅಥವಾ ಕೇವಲ ಮೋದಿಗೇ ?

ಭಾರತ ಸಹಿಷ್ಣುವೇ ಅಲ್ಲವೇ ಎಂಬ ಬಗ್ಗೆ ಇತ್ತೀಚಿಗೆ ನಾವು ಸಾಕಷ್ಟು ಚರ್ಚೆ ನಡೆಸಿದ್ದೇವೆ. ಆದರೆ ಯಾರೂ ಯಾವತ್ತೂ ಭಾರತ ಒಂದು ದೇಶವಾಗಿ ಸಹಿಷ್ಣು ಅಥವಾ ಅಸಹಿಷ್ಣು ಎಂದು ಹೇಳಿರಲಿಕ್ಕಿಲ್ಲ. ಹಾಗೆ ಹೇಳಿದ್ದಾರೆಂಬ ಸುಳ್ಳು ಕಂತೆಯನ್ನು ತಮ್ಮ ತಮ್ಮ ದುರುದ್ದೆಶಗಳನ್ನು ಈಡೇರಿಸಿಕೊಳ್ಳಲು ಎರಡೂ ಕಡೆಯ ನಿಮ್ಮಂತವರು ಸೃಷ್ಟಿಸಿದ್ದಾರೆ ಅಷ್ಟೇ. ಇಲ್ಲಿ ಚರ್ಚೆಯಾಗುತ್ತಿರುವುದು , ಕಳವಳ ವ್ಯಕ್ತವಾಗುತ್ತಿರುವುದು ಕೆಲವು ಜನರಿಗೆ ಪರಸ್ಪರರ ಬಗ್ಗೆ ಹೆಚ್ಚುತ್ತಿರುವ ಅಸಹಿಷ್ಣುತೆಯ ಬಗ್ಗೆ. ನೀವು ಅದೆಷ್ಟೇ ನಿರ್ಲಕ್ಷಿಸಿದರೂ ಆ ಹೆಚ್ಚುತ್ತಿರುವ ಬೇಧ ಭಾವ ಹಾಗು ದ್ವೇಷ ಸ್ಪಷ್ಟವಾಗಿ ಕಾಣುತ್ತಿದೆ. ಇದನ್ನು ನಿರಾಕರಿಸಿ ಅಥವಾ ಈ ಬಗ್ಗೆ ಮಾತನಾಡುವವರ ಧ್ವನಿ ಅಡಗಿಸಿ ಇದನ್ನು ನಾವು ತಡೆಯಲು ಸಾಧ್ಯವಿಲ್ಲ. ಸಮಸ್ಯೆ ಇದೆ ಎಂದು ನಾವು ಒಪ್ಪಿಕೊಂಡರೆ ಮಾತ್ರ ಅದಕ್ಕೆ ಪರಿಹಾರ ಕಂಡುಹಿಡಿಯಬಹುದು. ಒಬ್ಬರ ಮೇಲೊಬ್ಬರು ಬೊಬ್ಬೆ ಹಾಕದೆ ಆರೋಗ್ಯಕರ ಚರ್ಚೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದೇ ನಾವು ಪರಸ್ಪರರ ಬಗ್ಗೆ ಎಷ್ಟು ಅಸಹಿಷ್ಣು ಗಳಾಗಿದ್ದೇವೆ ಎಂಬುದನ್ನು ತೋರಿಸುತ್ತದೆ. ಇಂತಹ ಪ್ರತಿ ಚರ್ಚೆಯ ಬಳಿಕ ' ದೇಶದ್ರೋಹಿಗಳಿಗೆ ಕಪಾಳಮೋಕ್ಷ ' , ದೇಶವಿರೋಧಿಗಳನ್ನು ಚಿಂದಿ ಮಾಡಿದರು' ಎಂಬಂತಹ ಶೀರ್ಷಿಕೆಗಳನ್ನು ನಾವು ಕೇಳುತ್ತಿದ್ದೇವೆ. ಇದೇ ನಿಮ್ಮ ಅಖಂಡ ಭಾರತದ ಕಲ್ಪನೆಯೇ ? ಸಭಿಕರನ್ನು ಪರಸ್ಪರರ ಅಭಿಪ್ರಾಯಗಳನ್ನು ಗೌರವಿಸಲು ಪ್ರೇರಣೆ ನೀಡುವ ಬದಲು ಪರಸ್ಪರರ ವಿರುದ್ಧ ಇನ್ನಷ್ಟು ಪ್ರಚೋದನಕಾರಿ ನಿಲುವು ತೆಗೆದುಕೊಳ್ಳುವಂತೆ ನಿಮ್ಮಂತಹ ಭಾಷಣಕಾರರು ಪ್ರಚೋದಿಸುವುದರಿಂದ ಈ ಚರ್ಚೆಗಳೇ ಈಗ ಕೆಟ್ಟ ಪರಿಣಾಮ ಬೀರುತ್ತಿವೆ.

ಇಲ್ಲಿ ಅತ್ಯಂತ ತೀವ್ರ ಉಗ್ರ ಅಭಿಪ್ರಾಯಗಳನ್ನು ಹೊಂದಿರುವ ಕೆಲವೇ ಕೆಲವರಿದ್ದಾರೆ. ಅವರಿಗೆ ಅವರ ಅಭಿಪ್ರಾಯ ಒಪ್ಪದವರು ಅವರ ಶತ್ರುಗಳು. ಇಂತಹವರು ಹಿಂದಿನಿಂದಲೇ ಇದ್ದಾರೆ. ಆದರೆ ಈಗ ಈ ಕೆಲವರೇ ಸಾರ್ವಜನಿಕರ ನಡುವೆ ಬಹಿರಂಗವಾಗಿ ದ್ವೇಷ ಹರಡುತ್ತಿದ್ದಾರೆ. ಇದಕ್ಕಾಗಿ ಅವರು ಅರ್ಧ ಸತ್ಯಗಳನ್ನೇ ಹೆಚ್ಚಾಗಿ ಹೇಳುತ್ತಿದ್ದಾರೆ. ಈ ಕೆಲವರಿಗೆ ಮಾತ್ರ ಸೀಮಿತವಾಗಿದ್ದ ದ್ವೇಷ ಈಗ ಕಾಳ್ಗಿಚ್ಚಿನಂತೆ ಹರಡಿ ಈ ಹುಚ್ಚಿಗೆ ಏನೇನೂ ಸಂಬಂಧವಿಲ್ಲದ ಸಾಮಾನ್ಯರ ಮೇಲೆ ಪರಿಣಾಮ ಬೀರುತ್ತಿದೆ. ಸರಕಾರ ಈ ದ್ವೇಷ ಕಾರುವವರನ್ನು ಉದ್ದೇಶಪೂರ್ವಕವಾಗಿ ಬೆಳೆಸುತ್ತಿದೆ ಎಂದು ನಾನು ಹೇಳುತ್ತಿಲ್ಲ. ಆದರೆ ಅವರನ್ನು ನಿಯಂತ್ರಿಸಲು ಅದು ಸಾಕಷ್ಟು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂಬುದೂ ಸತ್ಯ. ಹೀಗೆ ದ್ವೇಷ ಕಾರುವವರ  ವಿರುದ್ಧ ಎದ್ದು ಕಾಣುವಂತಹ ಸೂಕ್ತ ಕಾನೂನು ಕ್ರಮ ಸರಕಾರ ತೆಗೆದುಕೊಳ್ಳದೇ ಇರುವುದರಿಂದ , ಸರಕಾರ ಅವರನ್ನು ಬೆಂಬಲಿಸಿದಂತೆ ಕಾಣುತ್ತಿದೆ. 

ಖೇರ್ ಅವರೇ , ನನಗೆ ನಿಮ್ಮ ಹೆಚ್ಚಿನೆಲ್ಲ ಅಭಿಪ್ರಾಯಗಳ ಬಗ್ಗೆ ಸಹಮತವಿಲ್ಲ. ನಿಮ್ಮ ಉದ್ದೇಶಗಳು ಹಾಗು ಈ ಪೆದ್ದುತನದ ಅಭಿಯಾನದ ಬಗ್ಗೆ ನನಗೆ ಗಂಭೀರ ಸಂಶಯಗಳಿವೆ. ಆದರೆ ನಾನು ನಿಮ್ಮನ್ನು ನನ್ನ ಶತ್ರುವೆಂದು ಪರಿಗಣಿಸುವುದಿಲ್ಲ. ನಿಮ್ಮನ್ನು ನಾನು ದ್ವೇಷಿಸುವುದಿಲ್ಲ. ನನಗೆ ನಿಮ್ಮ ಬಗ್ಗೆ ಇರುವುದು ಕನಿಕರ ಮಾತ್ರ. 

ನೀವು ಶೀಘ್ರ ಗುಣಮುಖರಾಗಿ ಎಂದು ಹಾರೈಸುತ್ತೇನೆ. 
ಸ್ವತಂತ್ರವಾಗಿ ಯೋಚಿಸುವ ಸಹಿಷ್ಣು ಭಾರತೀಯ  
( ದಿ ಟೆಲಿಗ್ರಾಫ್ ಪತ್ರಿಕೆ ಇತ್ತೀಚಿಗೆ ಆಯೋಜಿಸಿದ್ದ ರಾಷ್ಟ್ರೀಯ ಚರ್ಚೆ ಕಾರ್ಯಕ್ರಮದಲ್ಲಿ ಆಕ್ರಮಣಕಾರಿಯಾಗಿ ಮಾತನಾಡಿದ ಅನುಪಮ್ ಖೇರ್ ಅವರಿಗೆ ಫೇಸ್ ಬುಕ್ ನಲ್ಲಿ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಬರೆದ ಪತ್ರ )

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News