ಫಲಾಪೇಕ್ಷೆಯಿಲ್ಲದೆ ವಿಶಿಷ್ಟ ಸೇವೆ ಮಾಡುತ್ತಿರುವ ಬಂಗಾರಡ್ಕ ಸೂಫಿ ಹಾಜಿ

Update: 2016-03-09 11:54 GMT

    ಪುತ್ತೂರು : ಜನ ಸೇವೆ ಮಾಡಲು ಆಸಕ್ತಿ ಇದ್ದವರಿಗೆ ಹಲವು ದಾರಿಗಳಿವೆ. ಅದಕ್ಕೆ ನಿರ್ದಿಷ್ಠ ಕ್ಷೇತ್ರ-ವೇದಿಕೆ ಬೇಕಾಗಿಲ್ಲ. ಮನಸ್ಸಿದ್ದರೆ ಒಂದಲ್ಲಾ ಒಂದು ರೀತಿಯಲ್ಲಿ ಸೇವೆ ಮಾಡಲು ಸಾಧ್ಯ. ಪುತ್ತೂರು ತಾಲ್ಲೂಕಿನ ಬಲ್ನಾಡು ಗ್ರಾಮದ ಬಂಗಾರಡ್ಕ ನಿವಾಸಿ ಸೂಫಿ ಹಾಜಿ ಅವರು ಇಂತಹ ಓರ್ವ ಅಪರೂಪದ ವ್ಯಕ್ತಿ. ಕಳೆದ ಹಲವಾರು ವರ್ಷಗಳಿಂದ ಇವರು ಮುಸ್ಲಿಂ ಸಮುದಾಯದ ಹಲವಾರು ಹಲವು ಮಂದಿ ವೈವಾಹಿಕ ಜೀವನಕ್ಕೆ ಕಾಲಿಡುವಲ್ಲಿ ಇವರದ್ದು ಮಹತ್ವಪೂರ್ಣ ಕೊಡುಗೆ ನೀಡುತ್ತಾ ಬಂದಿದ್ದಾರೆ. ಅವರದ್ದು ಮದುವೆ ದಲ್ಲಾಳಿ ಕೆಲಸವಲ್ಲ, ಪ್ರಚಾರ ಪಡೆದುಕೊಳ್ಳುವ ದೃಷ್ಟಿಯಿಂದಲೂ ಅವರು ಈ ಕೆಲಸ ಮಾಡುತ್ತಿಲ್ಲ. ಫಲಾಪೇಕ್ಷೆಯೂ ಇಲ್ಲ. ಇದರಿಂದಾಗಿಯೇ ಅವರದ್ದು ವಿಶಿಷ್ಠ ಸೇವೆ .
 
  ಮುಸ್ಲಿಂ ಸಮುದಾಯದ ಯುವಕ -ಯುವತಿಯರ ಕಡೆಯವರನ್ನು ಸಂಪರ್ಕಿಸಿ, ಅವರೊಂದಿಗೆ ಮಾತುಕತೆ ನಡೆಸಿ, ಯುವಕ-ಯುವತಿಯರನ್ನು ವಿವಾಹಕ್ಕೆ ಒಪ್ಪಿಸಿ ವಿವಾಹ ಭಾಗ್ಯ ಕರುಣಿಸುವ ಕೆಲಸದಲ್ಲಿ ಸೂಫಿ ಹಾಜಿ ಅವರು ಈಗಾಗಲೇ ಅವರು ಪುತ್ತೂರು ತಾಲೂಕಿನ ಸುಮಾರು ನೂರ ಐವತ್ತಕ್ಕೂ ಅಧಿಕ ಮಂದಿ ಮುಸ್ಲಿಂ ಸಮುದಾಯದ ಜೋಡಿಯ ವಿವಾಹಕ್ಕೆ ಕಾರಣಕರ್ತರಾಗಿದ್ದಾರೆ. ಪುತ್ತೂರು ಸುತ್ತಮುತ್ತಲಿನ ಸುಳ್ಯ, ಬೆಳ್ತಂಗಡಿ, ಬಂಟ್ವಾಳ ತಾಲೂಕಿನ ಹಾಗೂ ಕಾಸರಗೋಡು ಜಿಲ್ಲೆಯ ಹಲವು ಮಂದಿ ವಧು, ವರರನ್ನು ಸಂಪರ್ಕಿಸಿ, ವಿವಾಹ ಸಂಬಂಧ ಬೆಸೆದು ಅವರನ್ನು ನಿಖಾಹ್ ಮಾಡಿಸುವ ಪುಣ್ಯದ ಕೆಲಸ ಮಾಡುತ್ತಿದ್ದಾರೆ.  ಸುಮಾರು 150ಕ್ಕೂ ಅಧಿಕ ಮುಸ್ಲಿಂ ಜೋಡಿಯ ವಿವಾಹ ಬೆಸುಗೆಗೆ ಕಾರಣಕರ್ತರಾಗಿರುವ ಸೂಫಿ ಹಾಜಿ ಅವರು ಕಳೆದ 26 ವರ್ಷಗಳಿಂದ ಈ ಸೇವೆಯಲ್ಲಿ ತೊಡಗಿದ್ದಾರೆ. ವಿವಾಹ ಸಂಬಂಧ ಬೆಸೆಯುವ ಕೆಲಸದ ಜೊತೆಗೆ ವಿವಾಹ ವಿಚ್ಚೇದನದಂತಹ ಹಲವು ಪ್ರಕರಣವನ್ನು ಸರಿಪಡಿಸಿ ದಂಪತಿಯನ್ನು ಒಂದಾಗಿಸುವ ಕೆಲವನ್ನು ಕೂಡ ಅವರು ಮಾಡುತ್ತಿದ್ದಾರೆ. ವಿಚ್ಚೇದಿತರಾಗ ಬಯಸುವ ಹಲವು ದಂಪತಿಯನ್ನು ಒಂದಾಗಿಸಿ ಅವರ ಬದುಕಿಗೊಂದು ಅರ್ಥ ಕಲ್ಪಿಸಿಕೊಟ್ಟಿದ್ದಾರೆ. ಅನಾಥ (ಯತೀಂ) ಮಕ್ಕಳಿಗೆ ಸಹಾಯ ಮಾಡುವುದು, ಮುಸ್ಲಿಂ ಧರ್ಮದ ಮಾತ್ರವಲ್ಲದೆ ಇತರ ಧರ್ಮದ ರೋಗಿಗಳ ಚಿಕಿತ್ಸೆಗೆ ಕೈಲಾದ ಸಹಾಯ ಮಾಡುತ್ತಿರುವ ಇವರು ತಾನು ದಲ್ಲಾಳಿ ಕೆಲಸ ಮಾಡುತ್ತಿಲ್ಲ. ತಾನು ತನ್ನಿಂದ ಕೈಲಾದ ಸೇವೆ ಮಾಡುತ್ತಿದ್ದು, ಇದರಿಂದ ನನಗೆ ನೆಮ್ಮದಿ ಸಿಗುತ್ತಿದೆ. ತನ್ನ ಕೆಲಸವನ್ನು ಅಲ್ಲಾಹನು ಮೆಚ್ಚಿದರೆ ಸಾಕು ಎಂದು ತನ್ನೆಲ್ಲಾ ಸೇವೆಯನ್ನು ಸೃಷ್ಟಿಕರ್ತನಿಗೆ ಅರ್ಪಿಸುತ್ತಾರೆ. ಶ್ರೀಮಂತ ಕುಟುಂಬದವರಾಗಿದ್ದರೂ ಸೂಫಿ ಹಾಜಿ ಅವರು ಬಡವರ ಪರ ಕಾಳಜಿ ಹೊಂದಿದ್ದಾರೆ. ಪುತ್ತೂರಿನ ಪರ್ಲಡ್ಕ ಮಸೀದಿಯಲ್ಲಿ 2 ವರ್ಷಗಳ ಕಾಲ ಅಧ್ಯಕ್ಷರಾಗಿ ಮತ್ತು 15 ವರ್ಷಗಳ ಕಾಲ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಬಲ್ನಾಡು ಮಸೀದಿಯಲ್ಲಿ 2 ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

 ನಾನು ಕುಂಬೋಳ್ ಕುಂಞಿಕೋಯ ತಂಙಳ್ ಅವರ ಆಶೀರ್ವಾದದ ಮೇರೆಗೆ 1990ರಿಂದ ವಿವಾಹ ಬೆಸುಗೆಯ ಸೇವೆ ಮಾಡುತ್ತಿದ್ದೇನೆ . ವಧು, ವರರನ್ನು ಸಂಪರ್ಕಿಸಿ ಸೂಕ್ತ ಎನಿಸಿದಲ್ಲಿ ಎರಡೂ ಮನೆಯವರನ್ನು ಸಂಪರ್ಕಿಸಿ ಮಾತುಕತೆ ನಡೆಸಿ ಅವರನ್ನು ದಾಂಪತ್ಯ ಜಿವನಕ್ಕೆ ಕಾಲಿಡುವಂತೆ ಮಾಡುತ್ತೇನೆ.
 ಯಾವುದೇ ಪ್ರಚಾರಗಿಟ್ಟಿಸಿಕೊಳ್ಳುವ ಉದ್ದೇಶದಿಂದ ಈ ಕೆಲಸ ಮಾಡುತ್ತಿಲ್ಲ. ಅಲ್ಲಾಹನ ಸಂಪ್ರೀತಿಯೇ ನನ್ನ ಉದ್ದೇಶ. ವಿವಾಹ ಸಂಬಂಧದ ವಿಚಾರದಲ್ಲಿ ನಾನು ಯಾರಿಂದಲೂ ನಯಾ ಪೈಸೆಯನ್ನು ಈ ತನಕ ಪಡೆದಿಲ್ಲ ಎಲ್ಲ ಸಮುದಾಯದವರಿಗೂ ನನ್ನಿಂದಾದ ಸೇವೆ ಮಾಡಲು ಸದಾ ಸಿದ್ದನಿದ್ದೇನೆ.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News