ಪಾಕ್ ಕ್ರಿಕೆಟ್ ತಂಡ ಕೋಲ್ಕತಾಗೆ ಆಗಮನ

Update: 2016-03-12 18:33 GMT

   ಕರಾಚಿ, ಮಾ.12: ಮೆಗಾ ಸ್ಪರ್ಧೆ ವಿಶ್ವಕಪ್‌ನಲ್ಲಿ ಭಾಗವಹಿಸುವ ಬಗ್ಗೆ ಇದ್ದ ಗೊಂದಲಕ್ಕೆ ಕೊನೆಗೂ ತೆರೆ ಎಳೆದಿರುವ ಪಾಕಿಸ್ತಾನ ಕ್ರಿಕೆಟ್ ತಂಡ 27 ಸದಸ್ಯರೊಂದಿಗೆ ಶನಿವಾರ ಸಂಜೆ ಕೋಲ್ಕತಾಗೆ ಆಗಮಿಸಿದೆ.

ಪಾಕ್ ಕ್ರಿಕೆಟ್ ತಂಡ ಅಬುಧಾಬಿಯ ಮೂಲಕ ಕೋಲ್ಕತಾದ ನೇತಾಜಿ ಸುಭಾಶ್ಚಂದ್ರ ಬೋಸ್ ವಿಮಾನ ನಿಲ್ಧಾಣಕ್ಕೆ ಬಿಗಿ ಬಂದೋಬಸ್ತ್ ನಡುವೆ ತಲುಪಿತು. ಪಾಕ್ ತಂಡದಲ್ಲಿ 15 ಆಟಗಾರರು, 12 ಅಧಿಕಾರಿಗಳು ಹಾಗೂ ಸಪೋರ್ಟ್ ಸ್ಟಾಫ್‌ಗಳಿದ್ದರು.

ಐಸಿಸಿ ಟೂರ್ನಿಯಲ್ಲಿ ಭಾಗವಹಿಸಲು ಪಾಕಿಸ್ತಾನ ಸರಕಾರ ಪಿಸಿಬಿಗೆ ಗ್ರೀನ್‌ಸಿಗ್ನಲ್ ನೀಡಿದ ಕೆಲವೇ ಗಂಟೆಗಳ ಬಳಿಕ ಪಾಕ್ ತಂಡ ಬಿಗಿ ಭದ್ರತೆಯೊಂದಿಗೆ ಭಾರತದತ್ತ ಪ್ರಯಾಣ ಬೆಳೆಸಿತು.

ಪಾಕ್ ತಂಡ ಭಾರತಕ್ಕೆ ವಿಳಂಬವಾಗಿ ಆಗಮಿಸಿದ ಕಾರಣ ಶನಿವಾರ ಬಂಗಾಳ ವಿರುದ್ಧ ನಡೆಯಬೇಕಾಗಿದ್ದ ಮೊದಲ ಅಭ್ಯಾಸ ಪಂದ್ಯ ರದ್ದಾಗಿತ್ತು.

ಶ್ರೀಲಂಕಾ ವಿರುದ್ಧ ಎರಡನೆ ಅಭ್ಯಾಸ ಪಂದ್ಯವನ್ನು ಆಡುತ್ತದೆ. ಬಿ ಗುಂಪಿನಲ್ಲಿ ಪಾಕ್ ಮಾ.16 ರಂದು ವಿಶ್ವಕಪ್‌ನಲ್ಲಿ ಮೊದಲ ಪಂದ್ಯ ಆಡಲಿದೆ.

ಮಾ.19 ರಂದು ಭಾರತ, ಮಾ.22 ರಂದು ನ್ಯೂಝಿಲೆಂಡ್, ಮಾ.25 ರಂದು ಆಸ್ಟ್ರೇಲಿಯದ ವಿರುದ್ಧ್ದ ಆಡಲಿದೆ. ಪಾಕಿಸ್ತಾನ ತಂಡ 2009ರಲ್ಲಿ ಯೂನಿಸ್ ಖಾನ್ ನಾಯಕತ್ವದಲ್ಲಿ ಮೊದಲ ಬಾರಿ ಟ್ವೆಂಟಿ-20 ವಿಶ್ವಕಪ್‌ನ್ನು ಜಯಿಸಿತ್ತು. ದಕ್ಷಿಣ ಆಫ್ರಿಕದಲ್ಲಿ ನಡೆದಿದ್ದ ಮೊದಲ ಆವೃತ್ತಿಯ ವಿಶ್ವಕಪ್‌ನಲ್ಲಿ ಫೈನಲ್‌ಗೆ ತಲುಪಿತ್ತು. ಫೈನಲ್‌ನಲ್ಲಿ ಭಾರತದ ವಿರುದ್ಧ ಸೋತಿತ್ತು.

ಪಾಕ್ 2010 ಹಾಗೂ 2012ರ ಆವೃತ್ತಿಯ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ಗೆ ತಲುಪಿತ್ತು. ಆದರೆ, 2014ರ ಆವೃತ್ತಿಯ ಟೂರ್ನಿಯಲ್ಲಿ ಅರ್ಹತಾ ಸುತ್ತಿನಲ್ಲಿ ಸೋತು ನಿರ್ಗಮಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News