×
Ad

ಶಂಕಿತರ ಬಂಧನಕ್ಕೆ ತ.ನಾಡಿಗೆ ತೆರಳಿದ್ದ ಪೊಲೀಸ್ ಅಧಿಕಾರಿಗಳೇ ಪೊಲೀಸ್ ವಶಕ್ಕೆ!

Update: 2016-03-22 23:44 IST

ಬೆಂಗಳೂರು, ಮಾ. 22: ಮಲ್ಲೇಶ್ವರಂ ಸ್ಫೋಟ ಪ್ರಕರಣ ಸಂಬಂಧ ತಮಿಳುನಾಡು ಮೂಲದ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದುಕೊಳ್ಳಲು ತೆರಳಿದ್ದ ಸಿಸಿಬಿ ಅಧಿಕಾರಿ ಹಾಗೂ ಆವರ ತಂಡವನ್ನು ತಮಿಳುನಾಡಿನ ತಿರುವಳ್ಳೂರ್ ಎಂಬಲ್ಲಿನ ಪೊಲೀಸರು ವಶಕ್ಕೆ ತೆಗೆದುಕೊಂಡ ಪ್ರಕರಣ ಬೆಳಕಿಗೆ ಬಂದಿದೆ.

ಮಂಗಳವಾರ ತಮಿಳುನಾಡಿನ ಪೊನ್ನಂಪೇಟೆಯಲ್ಲಿ ಮಲ್ಲೇಶ್ವರಂ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಸ್ಫೋಟಕ ಪೂರೈಕೆ ಮಾಡಿದ ಆರೋಪದ ಮೇಲೆ ಆಶೀರ್ ಮತ್ತು ಸೈಯದ್ ಅಲಿ ಎಂಬವರನ್ನು ವಶಕ್ಕೆ ಪಡೆದುಕೊಳ್ಳಲು ಸಿಸಿಬಿಯ ಎಸಿಪಿ ವೆಂಕಟೇಶ್ ಪ್ರಸನ್ನ ಅವರ ನೇತೃತ್ವದ ಸಿಸಿಬಿ ತಂಡ ತೆರಳಿತ್ತು. ಆದರೆ, ಸ್ಥಳೀಯ ಪೊಲೀಸರಿಗೆ ಮಾಹಿತಿಯನ್ನು ನೀಡದ ಹಿನ್ನೆಲೆಯಲ್ಲಿ ಮಫ್ತಿಯಲ್ಲಿದ ಎಸಿಪಿ ವೆಂಕಟೇಶ್ ಪ್ರಸನ್ನ ಹಾಗೂ ಅವರ ತಂಡವನ್ನು ತಮಿಳುನಾಡು ಪೊಲೀಸರು ವಶಕ್ಕೆ ತೆಗೆದುಕೊಂಡು ಬೆಳಗ್ಗೆ 10:30ರಿಂದ ಮಧ್ಯಾಹ್ನ 3ಗಂಟೆಯ ವರೆಗೆ ಠಾಣೆಯಲ್ಲಿ ಕೂರಿಸಿಕೊಂಡಿದ್ದಾರೆಂದು ಗೊತ್ತಾಗಿದೆ. ಈ ಸಂದರ್ಭದಲ್ಲಿ ಅವರ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ತಮಿಳುನಾಡು ಪೊಲೀಸರು ವಶಕ್ಕೆ ಪಡೆದಿದ್ದರು ಎಂದು ತಿಳಿದುಬಂದಿದೆ. ವಿಷಯ ತಿಳಿದ ನಗರ ಪೊಲೀಸ್ ಆಯುಕ್ತ ಮೇಘರಿಕ್ ತಮಿಳುನಾಡು ಪೊಲೀಸ್ ಆಯುಕ್ತರೊಂದಿಗೆ ಸಮಾಲೋಚನೆ ನಡೆಸಿದರು. ಆ ಬಳಿಕ ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಶೇಖರನ್ ತಮಿಳುನಾಡು ಪೊಲೀಸರೊಂದಿಗೆ ಸಮಾಲೋಚನೆ ನಡೆಸಿ ಎಸಿಪಿ ವೆಂಕಟೇಶ್ ಪ್ರಸನ್ನರಿಗೆ ಶಂಕಿತರನ್ನು ರಾಜ್ಯಕ್ಕೆ ಕರೆದುಕೊಂಡು ಬರಲು ಅವಕಾಶ ನೀಡಿದ್ದಾರೆಂದು ಹೇಳಲಾಗಿದೆ. 2013ರ ಎಪ್ರಿಲ್‌ನಲ್ಲಿ ಇಲ್ಲಿನ ಮಲ್ಲೇಶ್ವರಂ 15ನೆ ಕ್ರಾಸ್ ಸಮೀಪದಲ್ಲಿನ ಬಿಜೆಪಿ ಕೇಂದ್ರ ಕಚೇರಿ ಮುಂದೆ ಲಘು ಸ್ಫೋಟ ಪ್ರಕರಣ ಸಂಭವಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News