‘ನಿಯಮ ಉಲ್ಲಂಘಿಸಿ ಮ್ಯೂಚುವಲ್ ಫಂಡ್‌ಗಳಲ್ಲಿ ಬಿಡಿಎ ಹೂಡಿಕೆ’
ಬೆಂಗಳೂರು, ಮಾ.23: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ವು ತನ್ನ ಹೆಚ್ಚುವರಿ ಹಣವನ್ನು ನಿರ್ವಹಿಸಲು ಯಾವುದೇ ಹೂಡಿಕೆ ನೀತಿಯನ್ನು ಹೊಂದಿರಲಿಲ್ಲ. ರಚಿತಗೊಂಡ ಹೂಡಿಕೆ ಸಮಿತಿಯ ಕಾರ್ಯನಿರ್ವಹಿಸಲು ಯಾವುದೇ ಮಾರ್ಗದರ್ಶಿ ಸೂತ್ರಗಳೂ ಇರಲಿಲ್ಲ. 1999-2014ರ ಅವಧಿಯಲ್ಲಿನ ಮೂವರು ಹಣಕಾಸು ಸದಸ್ಯರು ಹಣಕಾಸಿನ ಔಚಿತ್ಯತೆಯ ಎಲ್ಲ ಸಿದ್ಧಾಂತಗಳನ್ನು ಉಲ್ಲಂಘಿಸಿದ್ದರು ಎಂಬ ಅಂಶ ಬಯಲಿಗೆ ಬಂದಿದೆ.
ಬುಧವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 2016ನೆ ಸಾಲಿನ ಸಾಮಾನ್ಯ ಮತ್ತು ಸಾಮಾಜಿಕ ವಲಯದ ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರ ವರದಿಯಲ್ಲಿ ಇದನ್ನು ಉಲ್ಲೇಖಿಸಲಾಗಿದೆ.
ರಾಜ್ಯ ಹಣಕಾಸು ಸಂಹಿತೆಯ ಅನ್ವಯ ಹಣಕಾಸಿನ ದಾಖಲೆಗಳನ್ನು ನಿರ್ವಹಿಸಲು, ಆಂತರಿಕ ಲೆಕ್ಕಪರಿಶೋಧನೆಯನ್ನು ನಡೆಸಲು ಹಾಗೂ ಹಣಕಾಸು ವಿಭಾಗದಲ್ಲಿ ಸಿಬ್ಬಂದಿಯ ಕರ್ತವ್ಯಗಳನ್ನು ವಿಂಗಡಿಸುವ ಮೂಲಕ ಸೂಕ್ತ ಪರಿಶೀಲನೆ ಮತ್ತು ಸಮತೋಲನವನ್ನು ಖಚಿತಪಡಿಸಿಕೊಳ್ಳಲು ವಿಫಲರಾಗಿದ್ದರು.
ಎರಡನೆ ದರ್ಜೆ ಗುಮಾಸ್ತರು, ಬ್ಯಾಂಕುಗಳು ಮತ್ತು ದಲ್ಲಾಳಿ ಸಂಸ್ಥೆಗಳು ವಿವಿಧ ಹಣಕಾಸಿನ ಅಕ್ರಮಗಳನ್ನು ಮಾಡಲು ಒಬ್ಬರಿಗೊಬ್ಬರು ನೆರವು, ಪ್ರೋತ್ಸಾಹ ಮತ್ತು ಸಹಕಾರ ನೀಡಿ ಭಾಗವಹಿಸಿದವು. ಬಿಡಿಎ ಹಣವನ್ನು ಮ್ಯೂಚುವಲ್ ಫಂಡ್‌ಗಳಿಗೆ ಮಾರ್ಗಪಲ್ಲಟ ಮಾಡಲಾಯಿತು ಮತ್ತು ಅನಧಿಕೃತ ಬ್ಯಾಂಕ್ ಖಾತೆಗಳನ್ನು ತೆರೆದು, ನಿರ್ವಹಿಸಿ ಇತರೆ ಸಂಸ್ಥೆಗಳಿಗೆ ಹಣವನ್ನು ವರ್ಗಾಯಿಸಲಾಯಿತು.
ಕಾಲ್ಪನಿಕ ಅಲ್ಪಾವಧಿ ಠೇವಣಿಗಳನ್ನು ಸೃಷ್ಟಿಸಲಾಯಿತು, ಹಣಕಾಸಿನ ವಿವರಣೆಗಳನ್ನು ದಾರಿ ತಪ್ಪಿಸುವಂತೆ ತಯಾರಿಸಲಾಯಿತು ಮತ್ತು ಎಲ್ಲ ವಹಿವಾಟುಗಳ ಜಾಡನ್ನು ನಾಶಪಡಿಸಲಾಯಿತು. ಮ್ಯೂಚುವಲ್‌ಫಂಡ್‌ಗಳಲ್ಲಿ ಹೂಡಿಕೆಗಾಗಿ ಮತ್ತು ಇತರೆ ಸಂಸ್ಥೆಗಳಿಗೆ ಮಾಡಿದ ಅನಧಿಕೃತ ಹಣದ ವರ್ಗಾವಣೆಯು ಬಿಡಿಎಗೆ 205.85 ಕೋಟಿ ರೂ.ನಷ್ಟದಲ್ಲಿ ಪರಿಣಮಿಸಿತು. ಬಿಎಂಆರ್‌ಸಿಎಲ್, ಕಾಫಿ ಬೋರ್ಡ್ ಮತ್ತು ರಾಜ್ಯ ಹಿಂದುಳಿದ ವರ್ಗಗಳ ಇಲಾಖೆಯ ಕಟ್ಟಡ ನಿರ್ಮಾಣ ಸಂಘಕ್ಕೆ ಮಾಡಿದ 6.17 ಕೋಟಿ ರೂ.ಅನಧಿಕೃತ ವರ್ಗಾವಣೆಯು ಬಿಡಿಎ ಹಣದ ದುರುಪಯೋಗದ ಪ್ರಕರಣಗಳಾಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.