ಬೆಂಗಳೂರು : ಪಂಚ ರಾಜ್ಯ ಚುನಾವಣೆ ಬಳಿಕವೇ ಸಂಪುಟ ಪುನರ್ ರಚನೆ

Update: 2016-03-29 11:51 GMT

ಬೆಂಗಳೂರು, ಮಾ,29: ರಾಜ್ಯ ಸಚಿವ ಸಂಪುಟದ ಪುನರ್‌ರಚನೆಗೆ ಇದೀಗ ಪಂಚ ರಾಜ್ಯಗಳ ಚುನಾವಣೆ ಅಡ್ಡಿಯಾಗಿ ಪರಿಣಮಿಸಿದೆ.
ಹೈಕಮಾಂಡ್ ಚುನಾವಣೆಯಲ್ಲಿ ತಲ್ಲೀನವಾಗಿರುವ ಹಿನ್ನೆಲೆಯಲ್ಲಿ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಈ ಪ್ರಕ್ರಿಯೆಗೆ ಚಾಲನೆ ನೀಡಲು ಕಾಂಗ್ರೆಸ್ ವರಿಷ್ಠರು ಉದ್ದೇಶಿಸಿದ್ದಾರೆ.
ಮೇ ತಿಂಗಳ ಮಧ್ಯ ಭಾಗದಲ್ಲಿ ಸಚಿವ ಸಂಪುಟವನ್ನು ಪುನರ್ ರಚಿಸಲು ಹೈಕಮಾಂಡ್ ಉದ್ದೇಶಿಸಿತ್ತು. ಆದರೆ ಕೇಂದ್ರ ಸರ್ಕಾರ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮೇಲೆ ಗದಾ ಪ್ರಹಾರ ನಡೆಸಿ, ಸರಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನ ನಡೆಸುತ್ತಿರುವ ಹಿನ್ನೆಲೆಯಲ್ಲಿ ಪಂಚ ರಾಜ್ಯಗಳ ಚುನಾವಣೆಯ ಫಲಿತಾಂಶದ ನಂತರ ಮುಂದಿನ ಹೆಜ್ಜೆ ಇಡಲು ಉದ್ದೇಶಿಸಿದೆ.
ಸಿದ್ಧರಾಮಯ್ಯ ಅವರ ಸಚಿವ ಸಂಪುಟದಲ್ಲಿರುವ ಹತ್ತರಿಂದ ಹನ್ನೆರಡು ಮಂದಿಯನ್ನು ಕೈ ಬಿಟ್ಟು ಸಂಪುಟ ಪುನರ್ ರಚಿಸಲು ತೀರ್ಮಾನಿಸಲಾಗಿತ್ತು.
ಏಪ್ರಿಲ್ ಎರಡನೇ ವಾರ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ದೆಹಲಿಗೆ ಹೋಗುವ ಕಾರ್ಯಕ್ರಮವಿದೆ. ಆದರೆ ವರಿಷ್ಠರು ಚುನಾವಣೆ ನೆಪ ಮುಂದೊಡ್ಡಿದರೆ ಮೇ ತಿಂಗಳಿಗೆ ತಮ್ಮ ದೆಹಲಿ ಪ್ರವಾಸವನ್ನು ಮುಂದೂಡುವ ಸಾಧ್ಯತೆಗಳು ಸಹ ಇವೆ ಎನ್ನಲಾಗಿದೆ.
ಸಚಿವರ ಮೌಲ್ಯ ಮಾಪನದ ವರದಿಯನ್ನು ವರಿಷ್ಠರಿಗೆ ಈಗಾಗಲೇ ರವಾನಿಸಲಾಗಿದೆ. ಈ ವರದಿಯ ವಿವರಗಳನ್ನು ಕೂಲಂಕುಶವಾಗಿ ಪರಿಶೀಲಿಸಲಿರುವ ಕಾಂಗ್ರೆಸ್ ಹೈಕಮಾಂಡ್ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ನಂತರ ಮುಂದಿನ ಹೆಜ್ಜೆ ಇಡಲಿದ್ದಾರೆ.
ತಮಿಳ್ನಾಡು,ಪಶ್ಚಿಮ ಬಂಗಾಳ ಸೇರಿದಂತೆ ಐದು ರಾಜ್ಯಗಳ ಚುನಾವಣೆಯ ಸಂದರ್ಭದಲ್ಲಿ ಸಂಪುಟ ಪುನರ್ ರಚನೆ ಮಾಡಲು ಮುಂದಾದರೆ ಅತೃಪ್ತರು ಒಂದು ಮಟ್ಟದಲ್ಲಾದರೂ ಧ್ವನಿ ಹೊರಡಿಸಬಹುದು. ಹೀಗಾಗಿ ಚುನಾವಣೆಗಳಿಗೂ ಮುನ್ನ ಯಾವುದೇ ರೀತಿಯಲ್ಲೂ ಅಪಸ್ವರ ಹೊರಡದಂತೆ ನೋಡಿಕೊಳ್ಳಬೇಕು ಎಂದು ಹೈಕಮಾಂಡ್ ಮುಖ್ಯಮಂತ್ರಿಗಳಿಗೆ ಸ್ಪಷ್ಟ ಮಾತುಗಳಲ್ಲಿ ವಿವರಿಸಲಿದೆ.
ಪ್ರತ್ಯೇಕ ಸಭೆ ನಡೆಸಲು ಈಗಾಗಲೇ ನಿರ್ಧರಿಸಿದ್ದ ಆಕಾಂಕ್ಷಿಗಳ ಬಯಕೆಗೆ ತಣ್ಣೀರೆರಚಿದಂತಾಗಿದೆ. ಸರ್ಕಾರಕ್ಕೆ ಎರಡು ವರ್ಷ ಎರಡು ತಿಂಗಳು ಬಾಕಿ ಇರುವ ಸಂದರ್ಭದಲ್ಲಿ ತಾವು ಗಟ್ಟಿಯಾದ ಯತ್ನ ಮಾಡದಿದ್ದರೆ ಮಂತ್ರಿಯಾಗುವುದು ಕಷ್ಟ ಎಂಬ ಭಾವನೆ ಇದ್ದುದರಿಂದ ಹಲ ಮಂದಿ ಶಾಸಕರು ಪ್ರತ್ಯೇಕ ಸಭೆ ನಡೆಸಿ ವರಿಷ್ಠರ ಮೇಲೆ ಒತ್ತಡ ಹೇರಲು ತೀರ್ಮಾನಿಸಿದ್ದರು.
ಅದರೆ ಹೈಕಮಾಂಡ್ ವರಿಷ್ಠರು ಇಂತಹ ಯಾವ ಬೆಳವಣಿಗೆಯನ್ನೂ ಲೆಕ್ಕಿಸಲು ತಯಾರಿಲ್ಲದೆ ಇರುವುದರಿಂದ ಮತ್ತು ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ತನಕ ಇಂತಹ ಯಾವ ಬೆಳವಣಿಗೆಗೂ ಉಪ್ಪು,ಸೊಪ್ಪು ಹಾಕದಿರಲು ತೀರ್ಮಾನಿಸಿರುವುದರಿಂದ ಸಚಿವ ಪದವಿ ಆಕಾಂಕ್ಷಿಗಳಿಗೆ ನಿರಾಸೆ ಉಂಟಾಗಿದೆ.
ಹೀಗಾಗಿ ಮೇ ಹದಿನೈದರಿಂದ ಇಪ್ಪತ್ತರ ವೇಳೆಗೆ ಸಚಿವ ಸಂಪುಟ ಪುನರ್ ರಚನೆ ಕಾರ್ಯ ನಡೆದರೆ ಸರ್ಕಾರಕ್ಕೆ ಬಾಕಿ ಇರುವುದೇ ಎರಡು ವರ್ಷ.ಒಂದು ವರ್ಷ ಕಳೆಯುವಷ್ಟರಲ್ಲಿ ಚುನಾವಣಾ ವರ್ಷ ಶುರುವಾಗುವುದರಿಂದ ತಮ್ಮ ತಮ್ಮ ಕ್ಷೇತ್ರಗಳನ್ನು ಭದ್ರಪಡಿಸಿಕೊಳ್ಳುವತ್ತ ಗಮನ ಹರಿಸಬೇಕಾಗುತ್ತದೆ.
ಆದ್ದರಿಂದ ತಾವು ಸಚಿವರಾದರೂ ನಿರೀಕ್ಷಿತ ಪ್ರಮಾಣದ ಕೆಲಸ ಮಾಡಲು ಸಾಧ್ಯವಿಲ್ಲ ಎಂಬ ಬೇಗುದಿಗೆ ಒಳಗಾಗಿರುವ ಶಾಸಕರ ಗುಂಪಿಗೆ ಹೈಕಮಾಂಡ್ ವಿರುದ್ಧ ತಲೆ ಎತ್ತಿ ನಿಲ್ಲುವ ಧೈರ್ಯವೂ ಇಲ್ಲ.
ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿಯುವ ತನಕ ಯಾರಾದರೂ ಮಂತ್ರಿ ಪದವಿಗಾಗಿ ಲಾಬಿ ಮಾಡಿದರೆ ನಿಶ್ಚಿತವಾಗಿ ಬರೆದಿಟ್ಟುಕೊಳ್ಳಿ.ಅಂತವರು ಯಾವ ಕಾರಣಕ್ಕೂ ಮಂತ್ರಿಯಾಗದಂತೆ ನೋಡಿಕೊಳ್ಳುವುದಾಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡಿರುವ ದಿಗ್ವಿಜಯ್‌ಸಿಂಗ್ ವಿವರಿಸಿದ್ದಾರೆ ಎನ್ನಲಾಗಿದೆ.
ಹೀಗಾಗಿ ಪುನ: ಸನ್ನಿವೇಶ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ವರದಾನವಾಗಿ ಪರಿಣಮಿಸಿದ್ದು ಹೈಕಮಾಂಡ್ ವರಿಷ್ಟರೇ ಸಂಪುಟ ಪುನರ್ರಚನೆಯನ್ನು ಮುಂದೂಡಲು ಬಯಸಿರುವುದರಿಂದ ಅವರು ಮತ್ತಷ್ಟು ನೆಮ್ಮದಿಯಿಂದಿರಲು ಸಾಧ್ಯವಾಗಲಿದೆ.
ಈ ಮಧ್ಯೆ ರಾಷ್ಟ್ರೀಯ ಕಾಂಗ್ರೆಸ್‌ನ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರೂ ಸಿದ್ಧರಾಮಯ್ಯ ಅವರ ಜತೆ ಕೈಗೂಡಿಸಿದ್ದು ಫೈನಲಿ,ಈ ಅಂಶ ಸಿದ್ಧುಗೆ ಆನೆ ಬಲ ತಂದು ಕೊಟ್ಟಂತಾಗಿದೆ.


ಇಡೀ ದೇಶದಲ್ಲಿ ಕಾಂಗ್ರೆಸ್ ಆಡಳಿತವಿರುವ ಅತ್ಯಂತ ದೊಡ್ಡ ರಾಜ್ಯವಾಗಿರುವ ಕರ್ನಾಟಕದಿಂದ ಹೆಚ್ಚಿನ ನೆರವು ಪಡೆಯಲು ಹೈಕಮಾಂಡ್ ಬಯಸಿದೆ. ಈ ಮಧ್ಯೆ ಐದು ರಾಜ್ಯಗಳ ಚುನಾವಣೆಯಲ್ಲಿ ಸಿದ್ಧರಾಮಯ್ಯ ಅವರನ್ನು ಚುನಾವಣೆಗೆ ಬಳಸಿಕೊಳ್ಳಲು ವರಿಷ್ಠರು ಉದ್ದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News