×
Ad

ಬೆಂಗಳೂರು : ನನ್ನ ಕಚೇರಿ ಸಿಬ್ಬಂದಿ ತಪ್ಪು ಮಾಡಿದ್ದರೆ ತಾವೇನು ಮಾಡಲು ಸಾಧ್ಯವಿಲ್ಲ - ಡಾ: ಶರಣ ಪ್ರಕಾಶ್ ಪಾಟೀಲ್

Update: 2016-04-05 18:06 IST

ಬೆಂಗಳೂರು, ಏ.5: ದ್ವಿತೀಯ ಪಿಯುಸಿ ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ನನ್ನ ಕಚೇರಿ ಸಿಬ್ಬಂದಿ ತಪ್ಪು ಮಾಡಿದ್ದರೆ ತಾವೇನು ಮಾಡಲು ಸಾಧ್ಯವಿಲ್ಲ. ತಪ್ಪು ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕೆ ಹೊರತು ತಮ್ಮ ಮೇಲಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ: ಶರಣ ಪ್ರಕಾಶ್ ಪಾಟೀಲ್ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ. 
ಪ್ರಕರಣದಲ್ಲಿ ಭಾಗಿಯಾಗಿರುವ ಓಬಳರಾಜು ಅವರನ್ನು ನಿಮ್ಮ ಆಪ್ತ ಸಹಾಯಕನನ್ನಾಗಿ ಕೆಲಸಕ್ಕೆ ತೆಗೆದುಕೊಳ್ಳಿ ಎಂದು ನನ್ನ ಮೇಲೆ ಒತ್ತಡ ಹೇರಿದವರೇ ಬಿಜೆಪಿ ನಾಯಕ, ಮಾಜಿ ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ. ಅವರು ಹೇಳಿದ್ದರಿಂದ ನಾನು ತೆಗೆದುಕೊಂಡೆ. ಇದರಲ್ಲಿ ನನ್ನ ಹಿತಾಸಕ್ತಿ ಏನೇನು ಇಲ್ಲ ಎಂದರು.
ವೈಯಕ್ತಿಕವಾಗಿ ನನಗೆ ಆತನ ಪರಿಚಯವೇ ಇರಲಿಲ್ಲ. ಆಪ್ತ ಸಹಾಯಕನಾಗಿ ಆತ ನನ್ನ ಬಳಿ ಕೆಲಸ ಮಾಡುತ್ತಿದ್ದುದು ನಿಜವಾದರೂ ದ್ವಿತೀಯ ಪಿಯೂಸಿ ರಸಾಯನ ಶಾಸ್ತ್ರ ವಿಷಯದ ಪ್ರಶ್ನೆ ಪತ್ರಿಕೆ ಬಹಿರಂಗವಾಗಿರುವುದನ್ನು ಸಮರ್ಥನೆ ಮಾಡಿಕೊಳ್ಳುವುದಿಲ್ಲ. ಹೀಗಾಗಿ ಆತ ತಪ್ಪಿತಸ್ಥನಾದರೆ ಕಾನೂನಿನ ಪ್ರಕಾರ ಆತನ ಮೇಲೆ ಕ್ರಮ ಜರುಗಲಿ ಎಂದು ಒತ್ತಾಯಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು,ಓಬಳರಾಜು ನನಗೆ ಗೊತ್ತಿರಲೇ ಇಲ್ಲ.ಆತನನ್ನು ಪರಿಚಯಿಸಿದ್ದೇ ಬಿಜೆಪಿ ನಾಯಕ,ಮಾಜಿ ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ.ಅವರು ಹೇಳಿದರು ಎಂಬ ಕಾರಣಕ್ಕಾಗಿ ನಾನು ಆತನನ್ನು ಆಪ್ತ ಸಹಾಯಕನನ್ನಾಗಿ ತೆಗೆದುಕೊಂಡೆ.
ಅದರರ್ಥ,ಆತ ತಪ್ಪು ಮಾಡಿದರೆ ಕ್ಷಮಿಸಬೇಕು ಎಂದಲ್ಲ.ಇಂತಹ ಅಕ್ಷಮ್ಯ ಅಪರಾಧದಲ್ಲಿ ಆತ ಷಾಮೀಲಾಗಿದ್ದರೆ ಯಾವ ಮುಲಾಜೂ ನೋಡದೆ ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ನೇರವಾಗಿ ಹೇಳಿದರು.
ಮೊದಲನೆಯದಾಗಿ ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವಾಡುವ ಇಂತಹ ಕೆಲಸಗಳಲ್ಲಿ ಯಾರೇ ಭಾಗಿಯಾಗಿದ್ದರೂ ಅವರನ್ನು ಕ್ಷಮಿಸಕೂಡದು.ಯಾವ ಕಾರಣಕ್ಕೂ ಇಂತಹ ದುಷ್ಕೃತ್ಯ ಎಸಗಿದವರನ್ನು ಸುಮ್ಮನೆ ಬಿಡಬಾರದು ಎಂದು ವಿವರಿಸಿದರು.
ಈ ವಿಷಯದಲ್ಲಿ ನಾನು ನಿಷ್ಕಳಂಕವಾಗಿದ್ದೇನೆ ಎಂದ ಅವರು,ಇಂತಹ ಅಕ್ಷಮ್ಯ ಅಪರಾಧದಲ್ಲಿ ತೊಡಗಿದವರನ್ನು ಯಾವ ಕಾರಣಕ್ಕೂ ಸಮರ್ಥಿಸಿಕೊಳ್ಳುವ ಪ್ರಶ್ನೆಯೇ ಇಲ್ಲ.ಕಾನೂನು ತನಗೆ ಅಗತ್ಯವಾದ ಕ್ರಮ ತೆಗೆದುಕೊಳ್ಳಲಿ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News