ಸಮಾಜಪರವಾದ ಸಿನೆಮಾಗಳು ತಯಾರಾಗಲಿ: ಸಿದ್ದರಾಮಯ್ಯ
ಬೆಂಗಳೂರು, ಎ.19: ಜನತೆಯಲ್ಲಿ ಸಮಾಜ ಪರವಾದ ವಿಚಾರಗಳನ್ನು ಬೆಳೆಸುವಂತಹ ಸಿನಿಮಾಗಳು ತಯಾರಾಗಬೇಕು. ಅಂತಹ ಚಿತ್ರಗಳನ್ನು ವೀಕ್ಷಿಸುವುದರ ಮೂಲಕ ಒಳ್ಳೆಯ ಸಂಸ್ಕಾರವಂತರಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಿಸಿದ್ದಾರೆ.
ಮಂಗಳವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ ನಿರ್ದೇಶನದ ‘ಇಷ್ಟ ಕಾಮ್ಯ’ ಚಿತ್ರದ ಧ್ವನಿ ಸುರುಳಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಸಿನಿಮಾಗಳಿಗೆ ಸಮಾಜವನ್ನು ಪ್ರಭಾವಿಸುವ ಶಕ್ತಿವೊಂದಿದೆ. ಅದರಲ್ಲೂ ಯುವ ಜನತೆ ಸಿನಿಮಾಗಳನ್ನು ನೋಡಿಯೆ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವವರಿದ್ದಾರೆ. ಹೀಗಾಗಿ ಚಿತ್ರ ನಿರ್ದೇಶಕರು ವೌಲ್ಯಯುತವಾದ ಸಿನಿಮಾಗಳನ್ನು ತಯಾರಿಸಿ, ಜನತೆಯ ಅಭಿರುಚಿಯನ್ನು ಉತ್ತಮಗೊಳಿಸಬೇಕು ಎಂದು ಅವರು ಕಿವಿಮಾತು ಹೇಳಿದರು. ಚಿತ್ರನಟ ಹಾಗೂ ನಿರ್ದೇಶಕ ರವಿಚಂದ್ರನ್ ಮಾತನಾಡಿ, ರಾಜ್ಯದಲ್ಲಿ ಕನ್ನಡ ಭಾಷೆಯ ಬಳಕೆ ದಿನೇ ದಿನೇ ಕ್ಷೀಣಿಸುತ್ತಿದೆ. ಬಹುತೇಕ ಇಂಗ್ಲಿಷ್ ಪದಗಳನ್ನು ಕನ್ನಡ ಪದಗಳ ರೀತಿಯಲ್ಲಿ ಸಾಮಾನ್ಯವಾಗಿ ಬಳಸುತ್ತಿದ್ದೇವೆ. ಇದರಿಂದ ಭವಿಷ್ಯದಲ್ಲಿ ಕನ್ನಡ ಪದಗಳು ಕನ್ನಡಿಗರ ಬಾಯಿಯಿಂದ ಕಣ್ಮರೆಯಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.