ಬರಗಾಲ ಎದುರಿಸುವ ಬದಲು ರಾಜ್ಯ ಸರ್ಕಾರದ ಹೈ ಡ್ರಾಮಾ : ಪ್ರತಿ ಪಕ್ಷ ನಾಯಕ ಜಗದೀಶ್ ಶೆಟ್ಟರ್
ಬೆಂಗಳೂರು, ಎ. 25: ರಾಜ್ಯಾದ್ಯಂತ ಆವರಿಸಿರುವ ಭೀಕರ ಬರಗಾಲವನ್ನು ಎದುರಿಸುವ ಬದಲು ಹೈ ಡ್ರಾಮಾ ಮಾಡುತ್ತಿರುವ ರಾಜ್ಯ ಸರ್ಕಾರ, ಬರಪೀಡಿತ ಪ್ರದೇಶಗಳ ಜನರನ್ನು ರಿಯಾಯ್ತಿ ದರದಲ್ಲಿ ಗುಳೆ ಎದ್ದು ಹೋಗುವಂತೆ ಮಾಡುತ್ತಿದೆ ಎಂದು ವಿಧಾನಸಭೆಯ ಪ್ರತಿ ಪಕ್ಷ ನಾಯಕ ಜಗದೀಶ್ ಶೆಟ್ಟರ್ ಇಂದಿಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ಇದೇ ರೀತಿ ಬರಗಾಲದ ಈ ಕಾಲದಲ್ಲಿ ಕೆರೆಗಳ ಹೂಳು ಎತ್ತಿಸಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ ಹತ್ತು ಕೋಟಿ ರೂಪಾಯಿ ಕೊಡಬೇಕು. ಆ ಮೂಲಕ ಮುಂದಿನ ದಿನಗಳನ್ನು ಎದುರಿಸಲು ಸಜ್ಜಾಗಬೇಕು ಎಂದು ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದ ಬರಗಾಲ ಪೀಡಿತ ಪ್ರದೇಶಗಳ ರೈತರು, ಜನರಿಗೆ ನೆರವು ನೀಡಲು, ಬರಗಾಲ ಪರಿಹಾರಕ್ಕೆ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಇದುವರೆಗೆ 2263 ಕೋಟಿ ರೂ ನೀಡಿದ್ದರೂ ರಾಜ್ಯ ಸರ್ಕಾರ ಮಾತ್ರ ಬರ ಪರಿಹಾರಕ್ಕೆ ತನ್ನ ಬೊಕ್ಕಸದಿಂದ ಒಂದು ಪೈಸೆ ಖರ್ಚು ಮಾಡಿಲ್ಲ ಎಂದು ದೂರಿದರು.
ಬರಪೀಡಿತ ಪ್ರದೇಶಗಳಿಗೆ ಮುಖ್ಯಮಂತ್ರಿಗಳು ಹಾಗೂ ಮಂತ್ರಿಗಳ ತಂಡ ಅಧ್ಯಯನ ಪ್ರವಾಸ ಮಾಡುತ್ತಿದೆ.ಆದರೆ ಇವರು ಎಲ್ಲಿ ಹೋಗುತ್ತಾರೋ? ಅಲ್ಲಿ ನರೇಗಾ ಯೋಜನೆಯಡಿ ಕೆಲಸ ನೀಡುತ್ತಿರುವಂತೆ, ಗೋಶಾಲೆ ತೆರೆದಂತೆ ನಾಟಕ ಮಾಡಲಾಗುತ್ತಿದೆ. ಆದರೆ ಅಲ್ಲಿಂದ ಇವರು ಹಿಂತಿರುಗಿದ ಕೂಡಲೇ ಅವೆಲ್ಲವೂ ಮುಂಚಿನಂತೆ ನಾಪತ್ತೆಯಾಗುತ್ತವೆ ಎಂದು ದೂರಿದರು.
ಇಂಧನ ಸಚಿವ ಡಿ.ಕೆ.ಶಿವಕುಮಾರ್ ಬೆಂಗಳೂರಿನಲ್ಲಿ ಕುಳಿತು ಎಲ್ಲ ಕಡೆ ಸಮರ್ಪಕವಾಗಿ ವಿದ್ಯುತ್ ನೀಡಲಾಗುತ್ತಿದೆ ಎನ್ನುತ್ತಾರೆ. ಆದರೆ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ದಿನಕ್ಕೆ ಕನಿಷ್ಟ ಎರಡರಿಂದ ಮೂರು ಗಂಟೆಗಳ ಕಾಲದ ವಿದ್ಯುತ್‌ನ್ನೂ ನೀಡುತ್ತಿಲ್ಲ ಎಂದರು.
ಈ ಮಧ್ಯೆ ಬರಪೀಡಿತ ಪ್ರದೇಶಗಳಿಂದ ಗುಳೆ ಎದ್ದು ಹೋಗುತ್ತಿರುವವರನ್ನು ರಿಯಾಯ್ತಿ ದರದಲ್ಲಿ ಗುಳೆ ಹೋಗಲು ಅನುಕೂಲ ಮಾಡಿಕೊಡುವುದಾಗಿ ಸರ್ಕಾರವೇ ಪ್ರಚಾರ ನೀಡುವ ಮೂಲಕ ನರೇಗಾ ಯೋಜನೆಯ ಜಾರಿ ಎಷ್ಟರ ಮಟ್ಟಗೆ ನಡೆಯುತ್ತಿದೆ ಎಂಬುದನ್ನು ಸಾಬೀತು ಪಡಿಸಿದೆ ಎಂದು ಹೇಳಿದರು.
ಬಿಡಿಎಯಲ್ಲಿ ಸಾವಿರಾರು ಬದಲಿ ನಿವೇಶನಗಳನ್ನು ನೀಡುವ ವ್ಯವಸ್ಥಿತ ಜಾಲ ನಡೆದಿದ್ದರೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಅವರಿಗೆ ರಕ್ಷಣೆ ನೀಡುವ ಕೆಲಸ ನಡೆಯುತ್ತಿದೆ ಎಂದು ಅವರು ದೂರಿದರು.
ಖಾಸಗಿ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಬಿಡಿಎ ವತಿಯಿಂದ ಮೂವತ್ತು ಎಕರೆ ಜಮೀನು ನೀಡಲಾಗುತ್ತದೆ.ಇದು ಮೂಲತ: ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಒಡೆತನಕ್ಕೆ ಸೇರಿದ ಸಂಸ್ಥೆ.ಅವರಿಗೆ ಈಗಾಗಲೇ ಅರ್ಕಾವತಿ ಬಡಾವಣೆಯಲ್ಲಿ ಮೂವತ್ತು ಎಕರೆ ಭೂಮಿ ನೀಡಲಾಗಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಒಂದು ನಿವೇಶನ ಪಡೆಯಲು ಬಡ-ಮಧ್ಯಮ ವರ್ಗದ ಜನ ಪರದಾಡುತ್ತಿರುವಾಗ ಐಎಎಸ್,ಐಪಿಎಸ್ ಅಧಿಕಾರಿಗಳಿಗೆ ಹೀಗೆ ದಂಡಿಯಾಗಿ ಭೂಮಿ ನೀಡುವ ಅಗತ್ಯವೇನಿತ್ತು?ಎಂದು ಪ್ರಶ್ನಿಸಿದರು.
ಈ ಮಧ್ಯೆ ಸಮಾಜ ಕಲ್ಯಾಣ ಇಲಾಖೆಗೆ ಬೇರೆ ಇಲಾಖೆಗಳಿಂದ ನಿಯೋಜನೆ ಮೇರೆಗೆ ಇಪ್ಪತ್ನಾಲ್ಕು ಮಂದಿಯನ್ನು ಕರೆಸಿಕೊಂಡಿರುವ ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ಭಾರೀ ಆಕ್ರಮಕ್ಕೆ ದಾರಿ ಮಾಡಿಕೊಟ್ಟಿದ್ದಾರೆ. ಶಿಕ್ಷಕರನ್ನು ಬೇರೆ ಇಲಾಖೆಗೆ ನಿಯೋಜಿಸಬಾರದು ಎಂದು ನ್ಯಾಯಾಲಯದ ಆದೇಶವಿದ್ದರೂ ಅದನ್ನು ಉಲ್ಲಂಘಿಸಿ ತಮ್ಮ ಇಲಾಖೆಗೆ ನೇಮಕ ಮಾಡಿಕೊಳ್ಳುತ್ತಿದ್ದಾರೆ ಎಂದು ದಾಖಲೆ ಬಿಡುಗಡೆ ಮಾಡಿದರು.
ಶಿಕ್ಷಕರು, ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳಿಂದ ಸಮಾಜ ಕಲ್ಯಾಣ ಇಲಾಖೆಗೆ ಅಧಿಕಾರಿಗಳು ನಿಯೋಜನೆ ಮೇಲೆ ಬರುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.
ಇದು ಭ್ರಷ್ಟಾಚಾರ ನಡೆಸಲು ಕೊಡುತ್ತಿರುವ ಕುಮ್ಮಕ್ಕು ಎಂದ ಅವರು,ಈಗಾಗಲೇ ಇಲಾಖೆಯಲ್ಲಿ ಹದಿನಾರು ಸಾವಿರ ಕೋಟಿ ರೂಗಳನ್ನು ಮೀಸಲಿಡಲಾಗಿದೆ.ಈ ಹಣವನ್ನು ದೋಚಲು ವ್ಯವಸ್ಥಿತ ಸನ್ನಾಹ ನಡೆದಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದರು.
ರಾಜ್ಯದಲ್ಲಿ ಲೋಕಾಯುಕ್ತವನ್ನು ವ್ಯವಸ್ಥಿತವಾಗಿ ಮುಗಿಸುವ ಸಂಚು ನಡೆಯುತ್ತಿದೆ.ಎಲ್ಲ ಪ್ರಕರಣಗಳನ್ನು ಎಸಿಬಿಯ ಮೂಲಕ ನಿರ್ಮೂಲನೆಗೊಳಿಸುವ ಕೆಲಸ ನಡೆಯುತ್ತಿದೆ.ಹಲವಾರು ಹಗರಣಗಳ ಆರೋಪಿ ನಿವೃತ್ತ ಲೋಕಾಯುಕ್ತ ಭಾಸ್ಕರರಾವ್ ವಿರುದ್ದ ಕ್ರಮ ಕೈಗೊಳ್ಳಲು ಎಸ್.ಐ.ಟಿ. ಅವಕಾಶ ಕೇಳಿದರೂ ಸರ್ಕಾರ ಅವಕಾಶ ಕೊಡುತ್ತಿಲ್ಲ ಎಂದು ದೂರಿದರು.
ಈ ಮಧ್ಯೆ ಜವಳಿ ಸಚಿವ ಚಿಂಚನಸೂರ್ ವಿರುದ್ಧ ಲೋಕಾಯುಕ್ತ ನ್ಯಾಯಾಲಯ ಆಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮಾಡಲು ಆದೇಶ ನೀಡಿದೆ.ಅದರನುಸಾರ ತಕ್ಷಣವೇ ಚಿಂಚನಸೂರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಿತ್ತು ಎಂದು ಹೇಳಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು ಪರಿಸ್ಥಿತಿಯನ್ನು ನಿಯಂತ್ರಿಸಲು ಸರ್ಕಾರ ವಿಫಲವಾಗುತ್ತಿದೆ. ಮುಖ್ಯಮಂತ್ರಿ ಕಾಲ ಕಾಲಕ್ಕೆ ಗುಪ್ತದಳ ನೀಡುವ ಮಾಹಿತಿಯನ್ನು ಪಡೆದು ಸಂಬಂಧಪಟ್ಟವರಿಗೆ ಸೂಚನೆ ನೀಡಬೇಕು. ಆದರೆ ಆ ಕೆಲಸವನ್ನು ಸಿದ್ಧರಾಮಯ್ಯ ಮಾಡುತ್ತಿಲ್ಲ ಎಂದರು