ಪ್ರಸಕ್ತ ವಿದ್ಯಮಾನಗಳಿಗೆ ಕಾರ್ಮಿಕರು ಪ್ರತಿಕ್ರಿಯಿಸಬೇಕು: ಡಾ.ಎಲ್. ಹನುಮಂತಯ್ಯ

Update: 2016-05-01 13:03 GMT

ಬೆಂಗಳೂರು, ಮೇ 1: ಕಾರ್ಮಿಕರು ತಮ್ಮ ಹಕ್ಕುಗಳಿಗೆ ಹೋರಾಡುವುದರ ಜೊತೆಗೆ ದೇಶದ ವಿದ್ಯಮಾನಗಳಿಗೆ ಪ್ರತಿಕ್ರಿಯಿಸುವುದನ್ನು ರೂಢಿಸಿಕೊಳ್ಳಬೇಕು. ದೇಶಪ್ರೇಮದ ಹೆಸರಿನಲ್ಲಿ ದ್ವೇಷ ಬಿತ್ತುವವರ ಬಗ್ಗೆ ಎಚ್ಚರವಾಗಿರಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಲ್.ಹನುಮಂತಯ್ಯ ಹೇಳಿದ್ದಾರೆ.

ರವಿವಾರ ಸರಕಾರಿ ಕಲಾ ಕಾಲೇಜು ಮೈದಾನದಲ್ಲಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್(ಎಐಟಿಯುಸಿ) ಮೇ ದಿನಾಚರಣೆ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ‘ಗಾರ್ಮೆಂಟ್ಸ್ ಕಾರ್ಮಿಕರೊಂದಿಗೆ ಸೌಹಾರ್ದತಾ ದಿನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಾರ್ಮಿಕರು ಕನಿಷ್ಠ ವೇತನ ಕೇಳಬಾರದು, ವಿದ್ಯಾರ್ಥಿಗಳು ನಿರುದ್ಯೋಗದ ಸಮಸ್ಯೆ ಬಗ್ಗೆ ಮಾತನಾಡಬಾರದು ಎಂಬ ಉದ್ದೇಶದಿಂದಲೇ ದೇಶಪ್ರೇಮದ ಪ್ರಶ್ನೆಯ ಚರ್ಚೆ ಹುಟ್ಟು ಹಾಕಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ದೇಶಪ್ರೇಮದ ಕೂಗು ಯಾವ ಹಂತಕ್ಕೆ ತಲುಪಿದೆ ಎಂದರೆ, ವಿರೋಧಿಗಳ ಮೇಲೆ ಸೇಡು ತೀರಿಸಿಕೊಳ್ಳಲು ದೇಶಪ್ರೇಮದ ಹೆಸರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಟೀಕಿಸಿದರು.

ಸಾರ್ವಜನಿಕ ವಲಯದ ಕೈಗಾರಿಕೆಗಳನ್ನು ಮುಚ್ಚುವ ಕೆಲಸ ನಡೆಯುತ್ತಿದೆ. ದೇಶದಲ್ಲಿ ಕಾರ್ಮಿಕ ವಿರೋಧಿ ವಾತಾವರಣ ನಿರ್ಮಾಣವಾಗುತ್ತಿದೆ. ಎಲ್ಲ ವಿವಿಗಳಲ್ಲಿ ಎಬಿವಿಪಿ ಕಾರ್ಯಕರ್ತರಿಂದ ಹಲ್ಲೆ ಆರಂಭವಾಗಿದೆ. ಇಂತಹ ಸಂದರ್ಭದಲ್ಲಿ ಕಾರ್ಮಿಕರು ಅತಿ ಹೆಚ್ಚು ರಾಜಕೀಯ ಪ್ರಜ್ಞೆ ಬೆಳೆಸಿಕೊಂಡು ಅವುಗಳಿಗೆ ಪ್ರತಿಕ್ರಿಯಿಸಬೇಕು ಎಂದು ಕರೆ ನೀಡಿದರು.

ಹಿಂದೂ-ಮುಸ್ಲಿಮರ ನಡುವೆ ಕಂದಕ ಸೃಷ್ಟಿಸಲು ಪ್ರಯತ್ನಿಸುತ್ತಿರುವ ಹುನ್ನಾರವನ್ನು ಕಾರ್ಮಿಕರು ವಿಫಲಗೊಳಿಸಬೇಕು. ಮುಸ್ಲಿಮರು ದೇಶದ ಅವಿಭಾಜ್ಯ ಅಂಗ. ಅವರನ್ನು ದೇಶದಿಂದ ಹೊರಗೆ ಹಾಕಲು ಸಾಧ್ಯವಿಲ್ಲ. ಅವರು ಈ ದೇಶದ ಜೊತೆ ಗುರುತಿಸಿಕೊಂಡಿದ್ದು, ಹಿಂದೂ-ಮುಸ್ಲಿಮರು ಸಾವಿರಾರು ವರ್ಷಗಳಿಂದ ಸಹಬಾಳ್ವೆಯಿಂದ ಬದುಕಿದ್ದಾರೆ ಎಂದರು.

ಈ ಸಹಬಾಳ್ವೆಗೆ ಹುಳಿ ಹಿಂಡುವ ಹುನ್ನಾರವನ್ನು ಕಾರ್ಮಿಕರು, ವಿದ್ಯಾರ್ಥಿಗಳು, ದುಡಿಯುವ ವರ್ಗ ವಿಫಲಗೊಳಿಸಬೇಕು ಎಂದ ಅವರು, ರಾಜ್ಯ ಸರಕಾರ ಕೂಡಲೇ ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿ ಮಾಡಬೇಕು. ಆ ಮೂಲಕ ದೇಶದ ಬಹುಸಂಸ್ಕೃತಿಯ ಮೂಲ ಆಶಯವನ್ನು ಎತ್ತಿ ಹಿಡಿಯಬೇಕು ಎಂದು ಆಗ್ರಹಿಸಿದರು.

ಸಮಾರಂಭದಲ್ಲಿ ಹಿರಿಯ ನ್ಯಾಯವಾದಿ ಮುರುಳೀಧರ, ಎಐಟಿಯುಸಿ ರಾಜ್ಯಾಧ್ಯಕ್ಷ ಎಚ್.ವಿ.ಅನಂತಸುಬ್ಬರಾವ್, ಪ್ರಧಾನ ಕಾರ್ಯದರ್ಶಿ ಹರಿಗೋವಿಂದ್ ಸೇರಿದಂತೆ ಕಾರ್ಮಿಕ ಸಂಘಟನೆಗಳ ಹಲವು ಮುಖಂಡರು ಪಾಲ್ಗೊಂಡಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News