ಕಬ್ಬು ಬೆಳೆ ಇಳಿಕೆ- ಸಕ್ಕರೆ ಬೆಲೆ ಹೆಚ್ಚಳವಾಗುವ ನಿರೀಕ್ಷೆ

Update: 2016-05-03 13:15 GMT

ಬೆಂಗಳೂರು.ಮೇ.3: ರಾಜ್ಯದಲ್ಲಿ ಕಬ್ಬು ಬೆಳೆ ಗಣನೀಯವಾಗಿ ಇಳಿಕೆಯಾಗಿದ್ದು, ಬರುವ ವರ್ಷ ಸಕ್ಕರೆ ಬೆಲೆ ಗಣನೀಯವಾಗಿ ಹೆಚ್ಚಳವಾಗುವ ನಿರೀಕ್ಷೆಯಿದೆ.
ಜಲಾಶಯಗಳಲ್ಲಿ ನೀರಿಲ್ಲದೇ ಬೆಳೆಗಳು ಒಣಗುತ್ತಿರುವ ಹಿನ್ನೆಲೆಯಲ್ಲಿ ಕಬ್ಬು ಇಳುವರಿ ಸುಮಾರು 70 ಲಕ್ಷ ಟನ್‌ನಷ್ಟು ಕಡಿಮೆಯಾಗಲಿದೆ. ಇದರಿಂದಾಗಿ ಸಕ್ಕರೆ ಬೆಲೆ 40ರೂ ದಾಟುವ ಸಾಧ್ಯತೆಯಿದೆ.

ಈ ಬಾರಿ 450 ಲಕ್ಷ ಮೆಟ್ರಿಕ್ ಟನ್ ಕಬ್ಬು ದೊರೆಯುವ ನಿರೀಕ್ಷೆಯಿತ್ತು. ಆದರೆ ಹಿಂದಿನ ಅಂದಾಜಿಗೆ ವ್ಯತಿರಿಕ್ತವಾಗಿ ಈ ಪ್ರಮಾಣ 380 ಲಕ್ಷ ಟನ್‌ಗಳಷ್ಟು ಕಡಿಮೆಯಾಗಬಹುದು ಎಂದು ಅಂದಾಜಿಸಲಾಗಿದೆ.

ಕಳೆದ ವರ್ಷ ಹೆಚ್ಚಿನ ಕಬ್ಬು ಇಳುವರಿ ಬಂದ ಹಿನ್ನೆಲೆಯಲ್ಲಿ ಕಬ್ಬಿಗೆ ಬೇಡಿಕೆ ಕಡಿಮೆಯಾಗಿದೆ. ಇದರಿಂದಾಗಿ ಸಕ್ಕರೆ ಬೆಲೆ 20 ರೂ ಆಸುಪಾಸಿನಲ್ಲಿತ್ತು. ಇದೀಗ ಸಕ್ಕರೆ ದರ 27 ರಿಂದ 30 ರೂ ನಷ್ಟಿದೆ. ಶೀಘ್ರದಲ್ಲೇ ದರ ದುಪ್ಪಟ್ಟ್ಟಾಗಲಿದೆ.

ಅಂದ ಹಾಗೆ ಕಬ್ಬಿನ ಉತ್ಪಾದನೆ ಪ್ರಮಾಣ ಹೆಚ್ಚಿದ್ದುದರಿಂದ ಕಳೆದ ಮೂರು ವರ್ಷಗಳಲ್ಲಿ ಬೆಳೆದ ಕಬ್ಬನ್ನು ನಿಗದಿತ ಪ್ರಮಾಣದಲ್ಲಿ ಅರೆಯಲು ಸಕ್ಕರೆ ಕಾರ್ಖಾನೆಗಳು ವಿಫಲವಾಗಿದಲ್ಲದೆ ತಾವು ಅರೆದ ಕಬ್ಬಿಗೆ ಪ್ರತಿಯಾಗಿ ಕಬ್ಬಿಗೆ ನಿಗದಿಯಾದ ಬೆಲೆಯನ್ನು ಕೊಡಲು ಹಿಂದೇಟು ಹಾಕಿದ್ದವು.
ಇದೇ ಕಾರಣಕ್ಕಾಗಿ 2013-14 ರ ಸಾಲಿಗೆ ಸಂಬಂಧಿಸಿದಂತೆ ಪ್ರತಿ ಕೆಜಿ ಸಕ್ಕರೆಗೆ ನೂರು ರೂ.ಗಳಂತೆ ರೈತರಿಗೆ ಬಾಕಿ ಪಾವತಿ ಮಾಡಬೇಕಿದ್ದು ಕಳೆದ ಎರಡು ವರ್ಷಗಳ ಅವಧಿಯ ಸಾವಿರಾರು ಕೋಟಿ ರೂಪಾಯಿ ಹಣವನ್ನು ಕೊಡಬೇಕಿದೆ.

ಲಭ್ಯವಾಗುತ್ತಿರುವ ಕಬ್ಬಿಗೂ, ಸಕ್ಕರೆಯ ಮೌಲ್ಯಕ್ಕೂ ಪರಸ್ಪರ ಹೊಂದಾಣಿಕೆಯಾಗದೆ ಇರುವುದರಿಂದ ರೈತರಿಗೆ ನಿಗದಿ ಮಾಡಿದ ಬೆಲೆ ಕೊಡಲಾಗುತ್ತಿಲ್ಲ ಎಂದು ಕಾರ್ಖಾನೆಗಳು ತಕರಾರು ಎತ್ತಿದ್ದವು. ಇದೇ ಕಾರಣಕ್ಕಾಗಿ ಸರ್ಕಾರ ಕೂಡಾ ಹಲವು ರೀತಿಯ ರಿಯಾಯ್ತಿಗಳನ್ನು ನೀಡಿತ್ತಾದರೂ 2013-14 ನೇ ಸಾಲಿನ ಕಬ್ಬು ಬಾಕಿಯೇ ಪಾವತಿಯಾಗಿಲ್ಲ.

ಇದೀಗ ಬರಗಾಲದ ಕಾರಣಕ್ಕಾಗಿ ಕಬ್ಬು ಬೆಳೆಯ ಉತ್ಪಾದನೆಯೇ ಕುಸಿದು ಹೋಗಿರುವ ಕಾರಣದಿಂದ ಕಾರ್ಖಾನೆಗಳು ಕಬ್ಬಿಗಾಗಿ ಹಪಹಪಿಸುವ ಪರಿಸ್ಥಿತಿ ಬಂದಿದ್ದು ಕಬ್ಬು ಉತ್ಪಾದನೆ ಕಡಿಮೆಯಾಗಿರುವುದರಿಂದ ಸಕ್ಕರೆಯ ಮೌಲ್ಯ ಹೆಚ್ಚಲಿದೆ. ಹೀಗೆ ಸಕ್ಕರೆಯ ಮೌಲ್ಯ ಹೆಚ್ಚಾದರೆ ರಾಜ್ಯದ ಸಕ್ಕರೆ ಕಾರ್ಖಾನೆಗಳು ರೈತರ ಕಬ್ಬಿಗೆ ನಿಗದಿ ಮಾಡಿದ ಪ್ರಮಾಣದಷ್ಟು ಬೆಲೆ ನೀಡಲು ಸಾಧ್ಯವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News