ವಿಫಲ ನಾಯಕನ ಕೈಯಲ್ಲಿ ಬಿಜೆಪಿ

Update: 2016-05-03 17:55 GMT

ಬಿಜೆಪಿ ಅಧಿಕಾರದಲ್ಲಿದ್ದಾಗ ಎರಡು ತಿಂಗಳಿಗೊಮ್ಮೆ ಮುಖ್ಯಮಂತ್ರಿ ಬದಲಾವಣೆಗಳ ಕುರಿತಂತೆ ಚರ್ಚೆ ನಡೆಯುತ್ತಿತ್ತು. ಈ ಚರ್ಚೆಯನ್ನು ಸ್ವತಃ ಬಿಜೆಪಿಯೊಳಗಿದ್ದವರೇ ಹುಟ್ಟು ಹಾಕುತ್ತಿದ್ದರು. ಜನಾರ್ದನ ರೆಡ್ಡಿ ಬಳಗ ದಿಲ್ಲಿಗೆ ದೌಡಾಯಿಸಿದರೆ, ಸರಕಾರ ಬಿತ್ತೋ ಎಂಬಂತಹ ವಾತಾವರಣ ನಿರ್ಮಾಣವಾಗಿ ಬಿಡುತ್ತಿತ್ತು. ಯಡಿಯೂರಪ್ಪ ಅವರನ್ನು ಪರೋಕ್ಷವಾಗಿ ನಿಯಂತ್ರಿಸುತ್ತಿದ್ದುದೇ ರೆಡ್ಡಿ ಸಹೋದರರು. ಬಿಜೆಪಿ ವರಿಷ್ಠರು ಯಡಿಯೂರಪ್ಪ ಅವರಿಗಿಂತ, ರೆಡ್ಡಿ ಸಹೋದರರ ಮಾತುಗಳನ್ನೇ ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದರು. ರೆಡ್ಡಿ ಸಹೋದರರು ‘ಕಿಂಗ್ ಮೇಕರ್’ ಪಾತ್ರವಹಿಸಿದ್ದುದರಿಂದ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ತೀರಾ ಅಸಹಾಯಕರಾಗಿದ್ದರು. ಇದೇ ಸಂದರ್ಭದಲ್ಲಿ ರೇಣುಕಾಚಾರ್ಯರ ಗುಂಪು ಎರಡು ತಿಂಗಳಿಗೊಮ್ಮೆ ರೆಸಾರ್ಟ್‌ನಲ್ಲಿ ಸಭೆ ನಡೆಸಿ ಮುಖ್ಯಮಂತ್ರಿಯನ್ನು ಬ್ಲಾಕ್‌ಮೇಲ್ ಮಾಡುತ್ತಿತ್ತು. ಮಾಧ್ಯಮಗಳಲ್ಲಿ ಸದಾ ಯಡಿಯೂರಪ್ಪ ಎಲ್ಲಿಯವರೆಗೆ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎನ್ನುವುದೇ ಮುಖಪುಟ ಸುದ್ದಿಯಾಗಿ ಪ್ರಕಟವಾಗುತ್ತಿತ್ತು. ಕೊನೆಗೂ ಬಿಜೆಪಿಯೊಳಗಿನ ಗುಂಪುಗಾರಿಕೆಗೆ ಯಡಿಯೂರಪ್ಪ ಬಲಿಯಾದರು. ಅಂದಿನ ಬಿಜೆಪಿ ಸರಕಾರಕ್ಕೆ ಹೋಲಿಸಿದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಇನ್ನೂ ಆ ಥರದ ಗುಂಪುಗಾರಿಕೆ ಮತ್ತು ಜಾತಿ ರಾಜಕಾರಣಕ್ಕೆ ಬಲಿಯಾಗಿಲ್ಲ. ಸಿದ್ದರಾಮಯ್ಯ ತನ್ನ ಸ್ವಂತ ವರ್ಚಸ್ಸಿನಿಂದ ಮುಖ್ಯಮಂತ್ರಿ ಸ್ಥಾನವನ್ನು ತನ್ನದಾಗಿಸಿಕೊಂಡಿರುವುದರಿಂದಲೇ ಅವರ ವಿರುದ್ಧದ ಹೊರ, ಒಳಗಿನ ಸಂಚುಗಳೆಲ್ಲ ಆರಂಭದಲ್ಲೇ ವಿಫಲವಾಗುತ್ತಾ ಬಂದಿವೆ. ಆದರೆ ಇತ್ತೀಚೆಗೆ ಯಡಿಯೂರಪ್ಪ ಅವರು ಮತ್ತೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರ ಪಾಲಿಗೆ ಇತಿಹಾಸ ಮರುಕಳಿಸಿದೆ. ಇದನ್ನೇ ಬಿಜೆಪಿಯ ಹೆಗ್ಗಳಿಕೆಯಾಗಿ ಬಿಂಬಿಸಲು ನೋಡುತ್ತಿರುವ ಕೆಲ ಮಾಧ್ಯಮಗಳು, ‘ದಲಿತ ಮುಖ್ಯಮಂತ್ರಿ’ಯ ಹೆಸರಿನಲ್ಲಿ ಸಿದ್ದರಾಮಯ್ಯ ಅವರ ಕುರ್ಚಿ ಅಲುಗಾಡುತ್ತಿದೆ ಎಂಬ ವದಂತಿಗಳನ್ನು ಹಬ್ಬಿಸುತ್ತಿವೆ. ಬಹುಶಃ ಸಿದ್ದರಾಮಯ್ಯ ಸ್ಥಾನದಲ್ಲಿ ಕೃಷ್ಣ ಅಥವಾ ಇನ್ಯಾವುದೇ ಮೇಲ್ವರ್ಗದ ನಾಯಕರಿದ್ದಿದ್ದರೆ ‘ದಲಿತ ಮುಖ್ಯಮಂತ್ರಿ’ ಬೇಡಿಕೆ ಬಲಪಡೆಯುತ್ತಿತ್ತೋ ಏನೋ? ಆದರೆ ಸಿದ್ದರಾಮಯ್ಯ ಅವರು ದಲಿತ, ಹಿಂದುಳಿದವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯದ ಮೂಲಕ ನಾಯಕನಾಗಿ ರೂಪುಗೊಂಡವರು. ಈ ಮೂರು ವರ್ಗಗಳಿಗೂ ಯಾವುದೋ ಒಂದು ಕಾರಣಕ್ಕೆ ಸಿದ್ದರಾಮಯ್ಯ ಮೇಲೆ ಒಲವಿದೆ. ಆದುದರಿಂದ ಇವರ ಪಾಲಿಗೆ ಸಿದ್ದರಾಮಯ್ಯ ತೀರಾ ಅನ್ಯರಾಗಿ ಯಾವತ್ತೂ ಬಿಂಬಿತವಾಗಿಲ್ಲ. ಪಕ್ಷದೊಳಗಿನ ತನ್ನದೇ ವರ್ಚಸ್ಸಿನ ಬೇರನ್ನು ಇಳಿಸಿಕೊಂಡಿರುವ ಸಿದ್ದರಾಮಯ್ಯ ಯಾವುದೇ ಕಿಂಗ್ ಮೇಕರ್‌ಗಳ ಸಹಾಯದಿಂದ ಸರಕಾರವನ್ನು ರಚಿಸಿಲ್ಲ. ಹೈಕಮಾಂಡ್ ಸಿದ್ದರಾಮಯ್ಯ ಅವರ ವರ್ಚಸ್ಸನ್ನು, ಜನಪ್ರಿಯತೆಯನ್ನು,ಸಾಮರ್ಥ್ಯವನ್ನು ಸ್ಪಷ್ಟವಾಗಿ ಗುರುತಿಸಿರುವ ಕಾರಣದಿಂದ ಸಣ್ಣ ಪುಟ್ಟ ಸಂಚುಗಳು ಸಿದ್ದರಾಮಯ್ಯ ಅವರು ನಿಂತ ನೆಲವನ್ನು ಅಲುಗಾಡಿಸುವಲ್ಲಿ ವಿಫಲವಾಗಿವೆ. ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬೆನ್ನಿಗೇ ಮತ್ತೆ ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿಯ ಬೇಡಿಕೆ ಕೇಳಿ ಬರುತ್ತಿದೆ. ವಿಶೇಷವೆಂದರೆ ಈ ಬೇಡಿಕೆಯ ಹಿಂದಿರುವವರು ದಲಿತರು ಅಲ್ಲ ಎನ್ನುವುದು ಅಷ್ಟೇ ಗಮನಾರ್ಹವಾಗಿದೆ. ಮಲ್ಲಿಕಾರ್ಜುನ ಖರ್ಗೆಯಾಗಲಿ, ಪರಮೇಶ್ವರ್ ಆಗಲಿ ಮುಖ್ಯಮಂತ್ರಿಯಾಗಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟು ಯಾವತ್ತೂ ವರಿಷ್ಠರ ಮುಂದೆ ನಿಯೋಗವನ್ನು ಒಯ್ದಿಲ್ಲ. ಯಾರೂ ಯಾವುದೇ ರೆಸಾರ್ಟ್ ರಾಜಕಾರಣವನ್ನು ಮಾಡಿಲ್ಲ. ಸಿದ್ದರಾಮಯ್ಯ ಆಳ್ವಿಕೆ ಯಾವತ್ತೂ ದಲಿತ ವಿರೋಧಿ ಎಂಬ ಹಣೆಪಟ್ಟಿಯನ್ನು ಧರಿಸಿಕೊಂಡಿಲ್ಲ ಮತ್ತು ಸದಾ ಬಡವರ ಪರವಾಗಿರುವ ಘೋಷಣೆಗಳ ಮೂಲಕವೇ ಅವರು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಹೀಗಿರುವಾಗ, ಸರಕಾರವನ್ನು ಅಲುಗಾಡಿಸುವುದಕ್ಕಾಗಿ ಕೃತಕ ಗುಂಪುಗಾರಿಕೆಯ ವಾತಾವರಣವನ್ನು ಕೆಲವು ಮಾಧ್ಯಮಗಳೇ ಉದ್ದೇಶಪೂರ್ವಕವಾಗಿ ಸೃಷ್ಟಿಸುತ್ತಿವೆ. ಯಡಿಯೂರಪ್ಪ ಬಿಜೆಪಿ ಅಧ್ಯಕ್ಷರಾದ ಬೆನ್ನಿಗೇ ಕಾಂಗ್ರೆಸ್ ದಲಿತ ಮುಖ್ಯಮಂತ್ರಿಯನ್ನು ಯಾಕೆ ಆಯ್ಕೆ ಮಾಡಬೇಕು? ಎಂಬ ಪ್ರಶ್ನೆಗೆ ಈವರೆಗೆ ಉತ್ತರ ದೊರಕಿಲ್ಲ. ಒಂದು ವೇಳೆ, ಬಿಜೆಪಿ ತನ್ನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ದಲಿತ ನಾಯಕನೊಬ್ಬನನ್ನು ಆಯ್ಕೆ ಮಾಡಿರುತ್ತಿದ್ದರೆ, ಕಾಂಗ್ರೆಸ್ ಕೂಡ ದಲಿತ ನಾಯಕನನ್ನು ಹೊಂದುವ ಅನಿವಾರ್ಯತೆಗೆ ಸಿಲುಕಿಕೊಳ್ಳುತ್ತಿತ್ತೋ ಏನೋ? ಅಥವಾ ತಮ್ಮ ನಾಯಕನನ್ನು ತೋರಿಸಿ ಕಾಂಗ್ರೆಸನ್ನು ಟೀಕಿಸುವ ನೈತಿಕತೆಯಾದರೂ ಬಿಜೆಪಿಗೆ ಇರುತ್ತಿತ್ತು. ಸದಾ ದಲಿತ ವಿರೋಧಿ ನೀತಿಯನ್ನು ಅನುಸರಿಸುವ, ಬ್ರಾಹ್ಮಣ ಮತ್ತು ಲಿಂಗಾಯತ ನಾಯಕರ ಹಿಡಿತದಲ್ಲಿರುವ ಬಿಜೆಪಿಯ ನಾಯಕರು, ಕಾಂಗ್ರೆಸ್ ಪಕ್ಷ ದಲಿತ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಬೇಕು ಎಂದು ಆಶಿಸುವುದನ್ನು ನಾವು ರಾಜಕೀಯ ವಿಡಂಬನೆಯಾಗಿಯಷ್ಟೇ ಸ್ವೀಕರಿಸಬೇಕಾಗುತ್ತದೆ. ಯಡಿಯೂರಪ್ಪ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬೆನ್ನಿಗೇ ಕೆಲವು ಮಾಧ್ಯಮಗಳು ಬಿಜೆಪಿ ಅಧಿಕಾರಕ್ಕೇರಿಯೇ ಬಿಟ್ಟಿತು ಎಂಬಂತೆ ಸಂಭ್ರಮಿಸಿವೆ. ಕಾಂಗ್ರೆಸ್ ಸರಕಾರದಲ್ಲಿರುವ ಗುಂಪುಗಾರಿಕೆಗಳನ್ನು ಭೂತಗನ್ನಡಿಯಿಟ್ಟು ಹುಡುಕಿ ಚರ್ಚಿಸಲು ಯತ್ನಿಸುತ್ತಿವೆ. ಆದರೆ, ಯಡಿಯೂರಪ್ಪ ಅವರನ್ನು ಬಿಜೆಪಿ ತನ್ನ ರಾಜ್ಯಾಧ್ಯಕ್ಷನನ್ನಾಗಿ ಆಯ್ಕೆ ಮಾಡಿರುವುದು ಎಷ್ಟರಮಟ್ಟಿಗೆ ಸರಿ ಎನ್ನುವುದನ್ನು ಚರ್ಚೆಯಿಂದ ಬದಿಗಿಟ್ಟಿದೆ. ಯಡಿಯೂರಪ್ಪ ಅವರನ್ನು ಭ್ರಷ್ಟಾಚಾರದ ಕಾರಣಕ್ಕಾಗಿಯೇ ಬಿಜೆಪಿ ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿಸಿತು. ಅವರು ತನ್ನ ಸ್ಥಾನವನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ ಎಂಬ ಕಾರಣಕ್ಕಾಗಿಯೇ ಅವರನ್ನು ಇಳಿಸಿ ಇನ್ನೊಬ್ಬರನ್ನು ಮುಖ್ಯಮಂತ್ರಿಯನ್ನಾಗಿಸಿತು. ಅಂತಿಮವಾಗಿ ತನ್ನ ಪಕ್ಷದಿಂದಲೇ ಅವರನ್ನು ಹೊರದಬ್ಬಿತು. ಇಂದಿಗೂ ಭ್ರಷ್ಟಾಚಾರ ಕಳಂಕದಿಂದ ಯಡಿಯೂರಪ್ಪ ಸಂಪೂರ್ಣವಾಗಿ ಹೊರ ಬಂದಿಲ್ಲ. ನ್ಯಾಯಾಲಯದಲ್ಲಿ ವಿಚಾರಣೆಯ ಸಂದರ್ಭದಲ್ಲಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯಂತೆ ಕಣ್ಣೀರು ಸುರಿಸುವ ಯಡಿಯೂರಪ್ಪ, ಬಿಜೆಪಿಯನ್ನು ಮತ್ತೆ ಮೇಲೆತ್ತುವುದಕ್ಕೆ ಎಷ್ಟರ ಮಟ್ಟಿಗೆ ಶಕ್ತರು? ಎನ್ನುವುದು ಸದ್ಯಕ್ಕೆ ಚರ್ಚೆಗೆ ಅರ್ಹವಾದ ವಿಷಯವಾಗಬೇಕಾಗಿದೆ. ಅಂತೆಯೇ ರಾಜ್ಯದಲ್ಲಿ ದಲಿತ ನಾಯಕನೊಬ್ಬ ಮುಖ್ಯಮಂತ್ರಿಯಾಗುವ ಒಂದಿಷ್ಟು ಅವಕಾಶಗಳಿದ್ದರೆ ಸದ್ಯಕ್ಕೆ ಅದು ಕಾಂಗ್ರೆಸ್‌ನೊಳಗೆ ಮಾತ್ರ ಎನ್ನುವುದನ್ನು ನಾವು ಒಪ್ಪಿಕೊಳ್ಳಲೇಬೇಕಾಗಿದೆ. ಖರ್ಗೆ, ಪರಮೇಶ್ವರ್ ಮೊದಲಾದ ಹೆಸರುಗಳನ್ನು ಮುಖ್ಯಮಂತ್ರಿಸ್ಥಾನಕ್ಕಾಗಿ ಶಿಫಾರಸು ಮಾಡುವಂತಹ ವಾತಾವರಣ ಕಾಂಗ್ರೆಸ್‌ನೊಳಗಿದೆ. ಇದೇ ಸಂದರ್ಭದಲ್ಲಿ ಬಿಜೆಪಿಯೊಳಗೆ ಈ ಪ್ರಮಾಣ ಎಷ್ಟರಮಟ್ಟಿಗಿದೆ ಎನ್ನುವುದನ್ನು ಅದರ ನಾಯಕರು ಜನರಿಗೆ ಸ್ಪಷ್ಟಪಡಿಸಬೇಕಾಗಿದೆ. ಮಾಧ್ಯಮಗಳು ಈ ನೆಲೆಯಲ್ಲಿ ತಮ್ಮ ಚರ್ಚೆಯನ್ನು ಮುಂದುವರಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News