25 ಗುಂಟೆಯಲ್ಲಿ 5 ಲಕ್ಷ ರೂ. ಗಳಿಸುತ್ತಿರುವ ರೈತ ಚೆನ್ನವೀರಯ್ಯ

Update: 2024-04-29 06:05 GMT

ಮಂಡ್ಯ: ಕಬ್ಬು, ಭತ್ತ, ರಾಗಿಯಂತಹ ಸಾಂಪ್ರದಾಯಿಕ ಕೃಷಿ ಪದ್ಧತಿಗೆ ಜೋತುಬಿದ್ದು ಮಂಡ್ಯ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ ಎಂಬುದು ಸಾಮಾನ್ಯವಾಗಿ ಕೇಳಿಬರುತ್ತಿರುವ ಮಾತು. ಕೃಷಿ ತಜ್ಞರು, ಕೃಷಿ ಇಲಾಖೆ ಅಧಿಕಾರಿಗಳೂ ಇದನ್ನೇ ಹೇಳುತ್ತಾರೆ. ಹಾಗಾಗಿ ಮಂಡ್ಯದ ರೈತರು ಬೆಳೆ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೆಲವು ರೈತರು ಪ್ರಯತ್ನ ನಡೆಸಿ ಯಶಸ್ವಿಯಾಗಿದ್ದಾರೆ. ಅಂತಹವರ ಸಾಲಿನಲ್ಲಿ ಚೆನ್ನವೀರಯ್ಯ ಒಬ್ಬರು.

ಮಂಡ್ಯ ತಾಲೂಕು ಆಲಕೆರೆ ಗ್ರಾಮದ ಚೆನ್ನವೀರಯ್ಯ ಸಾಂಪ್ರದಾಯಿಕ ಬೆಳೆಗಳ ಬದಲಿಗೆ ಸೊಪ್ಪು, ತರಕಾರಿ, ಹೂವು, ಇತರ ತೋಟಗಾರಿಕೆ ಬೆಳೆಗಳನ್ನು ಬೆಳೆದು ಕೈತುಂಬಾ ಹಣ ಗಳಿಸುತ್ತಿದ್ದಾರೆ. ಕೇವಲ 25 ಗುಂಟೆ ಭೂಮಿಯಲ್ಲಿ ವಾರ್ಷಿಕ ಸರಾಸರಿ 5 ಲಕ್ಷ ರೂ. ಆದಾಯ ಮಾಡುತ್ತಿದ್ದಾರೆ. ಇವರಿಂದ ಪ್ರೇರಣೆಗೊಂಡು ಗ್ರಾಮದ ಇತರ ಕೆಲವು ರೈತರೂ ಬೆಳೆ ಪದ್ದತಿ ಬದಲಾವಣೆಯತ್ತ ಪ್ರಯತ್ನ ನಡೆಸಿದ್ದಾರೆ.

ಚೆನ್ನವೀರಯ್ಯ ಅವರಿಗೆ ಎರಡೂವರೆ ಎಕರೆ ಜಮೀನಿದ್ದು, ಪೂರ್ವಿಕರಂತೆ ಕಬ್ಬು, ಭತ್ತ, ರಾಗಿಯನ್ನು ಪ್ರಮುಖವಾಗಿ ಬೆಳೆಯುತ್ತಿದ್ದಾರೆ. ಕೆಆರ್‌ಎಸ್ ಜಲಾಶಯದ ನೀರು ಇದೆ. ಆದರೆ, ಇತ್ತೀಚೆಗೆ ಜಲಾಶಯದಲ್ಲಿ ನೀರು ಕಡಿಮೆಯಾಗುತ್ತಿರುವುದರಿಂದ ಹೆಚ್ಚು ನೀರು ಬೇಡುವ ಮತ್ತು ದೀರ್ಘಾವಧಿಯ ಕಬ್ಬು, ಭತ್ತ, ರಾಗಿ ಫಸಲು ಸಂಪೂರ್ಣವಾಗಿ ಕೈಸೇರುತ್ತಿಲ್ಲ. ಜತೆಗೆ ಸರಿಯಾದ ದರವೂ ಸಿಗುತ್ತಿಲ್ಲ. ಹಾಗಾಗಿ ಕಡಿಮೆ ನೀರು, ಕಡಿಮೆ ವೆಚ್ಚದ ಅಲ್ಪಾವಧಿಯ ಸೊಪ್ಪು, ತರಕಾರಿ ಬೆಳೆಯಲು ಸಣ್ಣವೀರಯ್ಯ ತೀರ್ಮಾನಿಸಿದರು.

ಕಳೆದ ವರ್ಷ ತಮ್ಮ ಜಮೀನಿನ 25 ಗುಂಟೆಯನ್ನು ತರಕಾರಿ ಬೆಳೆಗೆ ಆಯ್ಕೆಮಾಡಿಕೊಂಡರು. ಈ ಬೆಳೆಗಳೆಲ್ಲಾ ಮೂರು ತಿಂಗಳ ಬೆಳೆಗಳು. ವರ್ಷಕ್ಕೆ ನಾಲ್ಕು ಬೆಳೆ ತೆಗೆಯಬಹುದು. ಮೊದಲ ವರ್ಷ ಸೌತೆಕಾಯಿ ಹಾಕಿದರು. ಚೆನ್ನಾಗಿ ಫಸಲು ಬಂತು, ಬೆಲೆಯೂ ಸಿಕ್ಕಿತು. ಮೂರೇ ತಿಂಗಳಿಗೆ ಒಂದು ಲಕ್ಷ ರೂ. ಆದಾಯ ವೀರಯ್ಯ ಅವರ ಕೈಸೇರಿತು. ನಂತರ, ಟೊಮೆಟೊ ಬೆಳೆಯಿಂದ 1.25 ಲಕ್ಷ ರೂ. ಹಾಗೂ ಚೆಂಡುಹೂವಿನಿಂದ 50 ಸಾವಿರ ರೂ. ಸಿಕ್ಕಿತು. ಇದೀಗ ಬೀನ್ಸ್ ಬೆಳೆದಿದ್ದು, ಈಗಾಗಲೇ ಅರ್ಧ ಫಸಲು ಕಟಾವಾಗಿದೆ, ಇನ್ನೂ ಅರ್ಧ ಕಟಾವು ಸಿಗಲಿದೆ. ಪ್ರಸ್ತುತ ಬೀನ್ಸ್‌ಗೆ ಮಾರುಕಟ್ಟೆಯಲ್ಲಿ ಕನಿಷ್ಠ 150 ರೂ.ಗಳಿದ್ದು, ಅದರಿಂದ 1.25 ಲಕ್ಷ ರೂ. ಸಿಗುವುದು ಖಚಿತವಾಗಿದೆ.

ಕಡಿಮೆ ನೀರು, ವೆಚ್ಚದ ಸೊಪ್ಪು, ತರಕಾರಿ, ಹೂವು ಬೆಳೆಯ ಮೂಲಕ ಲಾಭ ಬರುವುದು ಖಚಿತವಾಗಿದೆ ಎಂದು ದೃಢವಾಗಿ ಹೇಳುತ್ತಾರೆ ಚೆನ್ನವೀರಯ್ಯ.

ಇದಲ್ಲದೆ, ಸದರಿ ಭೂಮಿಯಲ್ಲಿ 40 ತೆಂಗಿನ ಮರಗಳು ಫಲ ಕೊಡುವ ಹಂತಕ್ಕೆ ಬಂದಿವೆ. ಜತೆಗೆ, ಅಲ್ಲಿ ಬೆಳೆಯುವ ಹುಲ್ಲಿನಿಂದ ಎರಡು ಹಸುಗಳನ್ನು ಸಾಕುತ್ತಿದ್ದಾರೆ. ಸಾಂಪ್ರದಾಯಿಕ ಕೃಷಿಗೆ ಅಂಟಿಕೊಂಡಿರುವ ರೈತರು ಚೆನ್ನವೀರಯ್ಯ ಅವರ ಯಶಸ್ಸಿನ ಹಾದಿಯನ್ನು ಅನುಸರಿಸಿದರೆ ಯಶಸ್ಸು ಪಡೆಯಬಹುದು.

ನಾನು ನಮ್ಮ ಪೂರ್ವಿಕರಂತೆ ಸಾಂಪ್ರದಾಯಿಕವಾಗಿ ಕಬ್ಬು, ಭತ್ತ, ರಾಗಿಯನ್ನು ಬೆಳೆಯುತ್ತಿದ್ದೆ. ಇತ್ತೀಚೆಗೆ ಮಳೆ ಕಡಿಮೆಯಾಗಿ ನೀರಿನ ಕೊರತೆ ಒಂದೆಡೆಯಾದರೆ, ಬೆಳೆದ ಬೆಳೆಗೆ ಉತ್ತಮ ದರವೂ ಸಿಗುತ್ತಿರಲಿಲ್ಲ. ಹಾಗಾಗಿ 25 ಗುಂಟೆಯನ್ನು ಆಯ್ಕೆಮಾಡಿಕೊಂಡು ತರಕಾರಿ ಸೊಪ್ಪು, ತರಕಾರಿ ಬೆಳೆಯಲು ಯತ್ನಿಸಿದೆ. ಅದರಲ್ಲಿ ಯಶಸ್ಸು ಕಂಡಿದ್ದೇನೆ. ಇರುವ ಕೊಳವೆ ಬಾವಿ ನೀರು ಸಾಕಾಗುತ್ತಿದೆ. ದಿನನಿತ್ಯ ಬೇಡಿಕೆ ಇರುವ ಸೊಪ್ಪು, ತರಕಾರಿ ಬೆಳೆಗಳಿಂದ ಲಾಭ ಪಡೆಯಬಹುದು.

-ಚೆನ್ನವೀರಯ್ಯ, ಯಶಸ್ವಿ ಕೃಷಿಕ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಕುಂಟನಹಳ್ಳಿ ಮಲ್ಲೇಶ

contributor

Similar News