ರಸೆಲ್ ಮಾರಕ ದಾಳಿ, ಕೋಲ್ಕತಾಗೆ ರೋಚಕ ಜಯ

Update: 2016-05-04 18:32 GMT

ಕೋಲ್ಕತಾ, ಮೇ 4: ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಡೇವಿಡ್ ಮಿಲ್ಲರ್ 5ನೆ ವಿಕೆಟ್‌ಗೆ ನಡೆಸಿದ ಅರ್ಧಶತಕದ ಜೊತೆಯಾಟದ ಹೊರತಾಗಿಯೂ ಆಂಡ್ರೆ ರಸೆಲ್(4-20) ಶಿಸ್ತುಬದ್ಧ ದಾಳಿಗೆ ಕಂಗಾಲಾದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಐಪಿಎಲ್ ಪಂದ್ಯವನ್ನು 7 ರನ್‌ಗಳ ಅಂತರದಿಂದ ಸೋತಿದೆ.

ಬುಧವಾರ ಇಲ್ಲಿನ ಈಡನ್‌ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್‌ನ 32ನೆ ಪಂದ್ಯದಲ್ಲಿ ಟಾಸ್ ಜಯಿಸಿದ ಪಂಜಾಬ್ ತಂಡದ ನಾಯಕ ಮುರಳಿ ವಿಜಯ್ ಕೋಲ್ಕತಾವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಕೋಲ್ಕತಾ 3 ವಿಕೆಟ್‌ಗಳ ನಷ್ಟಕ್ಕೆ 164 ರನ್ ಗಳಿಸಿತು.

ಗೆಲ್ಲಲು ಕಠಿಣ ಸವಾಲು ಪಡೆದ ಪಂಜಾಬ್ 3.1 ಓವರ್‌ಗಳಲ್ಲಿ 13 ರನ್ ಗಳಿಸುವಷ್ಟರಲ್ಲಿ ಅಗ್ರ ಕ್ರಮಾಂಕದ 3 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆಗ ಜೊತೆಯಾದ ಮ್ಯಾಕ್ಸ್‌ವೆಲ್ ಹಾಗೂ ವೃದ್ದಿಮಾನ್ ಸಹಾ 4ನೆ ವಿಕೆಟ್‌ಗೆ 40 ರನ್ ಸೇರಿಸಿ ತಂಡವನ್ನು ಆಧರಿಸಿದರು. ಸಹಾ 24 ರನ್‌ಗೆ ಪಿಯೂಷ್ ಚಾವ್ಲಾಗೆ ಕ್ಲೀನ್ ಬೌಲ್ಡಾದರು. ಡೇವಿಡ್ ಮಿಲ್ಲರ್(13)ರೊಂದಿಗೆ 5ನೆ ವಿಕೆಟ್‌ಗೆ 67 ರನ್ ಜೊತೆಯಾಟ ನಡೆಸಿದ ಮ್ಯಾಕ್ಸ್‌ವೆಲ್ ಪಂಜಾಬ್‌ಗೆ ಗೆಲುವಿನ ವಿಶ್ವಾಸ ಮೂಡಿಸಿದ್ದರು. ಮ್ಯಾಕ್ಸ್‌ವೆಲ್(68 ರನ್, 42 ಎಸೆತ, 6 ಬೌಂಡರಿ, 4 ಸಿಕ್ಸರ್) ವಿಕೆಟ್ ಉರುಳಿಸಿದ ಚಾವ್ಲಾ ಪಂಜಾಬ್‌ನ ಗೆಲುವಿನ ಆಸೆಗೆ ತಣ್ಣೀರೆರಚಿದರು.

  ಇನಿಂಗ್ಸ್ ಅಂತ್ಯದಲ್ಲಿ ಅಬ್ಬರಿಸಿದ ಅಕ್ಷರ್ ಪಟೇಲ್(21ರನ್, 7 ಎಸೆತ, 1 ಬೌಂಡರಿ, 2ಸಿಕ್ಸರ್) ತಂಡಕ್ಕೆ ಅಂತಿಮ ಓವರ್‌ನಲ್ಲಿ 12 ರನ್ ಗುರಿ ನಿಗದಿಪಡಿಸಿದರು. ಆದರೆ, ಅಂತಿಮ ಓವರ್‌ನ 2ಹಾಗೂ 3ನೆ ಎಸೆತದಲ್ಲಿ ಪಟೇಲ್ ಹಾಗೂ ಸಿಂಗ್ ರನೌಟಾಗುವುದರೊಂದಿಗೆ ಕೆಕೆಆರ್ ಗೆಲುವಿನ ನಗೆ ಬೀರಿತು.

ಉತ್ತಪ್ಪ, ಗಂಭೀರ್ ಜುಗಲ್‌ಬಂದಿ: ಕೋಲ್ಕತಾ 164/3

 ಇದಕ್ಕೆ ಮೊದಲು ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ರಾಬಿನ್ ಉತ್ತಪ್ಪ ಹಾಗೂ ಗೌತಮ್ ಗಂಭೀರ್ ಮೊದಲ ವಿಕೆಟ್‌ಗೆ ಶತಕದ ಜೊತೆಯಾಟ ನಡೆಸಿದ ಹೊರತಾಗಿಯೂ ಆತಿಥೇಯ ಕೋಲ್ಕತಾ ನೈಟ್ ರೈಡರ್ಸ್ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಗೆಲುವಿಗೆ 165 ರನ್ ಗುರಿ ನೀಡಿತು.

ಇನಿಂಗ್ಸ್ ಆರಂಭಿಸಿದ ಉತ್ತಪ್ಪ(70 ರನ್, 49 ಎಸೆತ, 6 ಬೌಂಡರಿ, 2 ಸಿಕ್ಸರ್) ಹಾಗೂ ಗಂಭೀರ್(54 ರನ್, 45 ಎಸೆತ, 6 ಬೌಂಡರಿ, 1 ಸಿಕ್ಸರ್) 13.3 ಓವರ್‌ಗಳಲ್ಲಿ 101 ರನ್ ಸೇರಿಸುವ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಕರ್ನಾಟಕದ ದಾಂಡಿಗ ಉತ್ತಪ್ಪ ಈ ವರ್ಷದ ಐಪಿಎಲ್‌ನಲ್ಲಿ ಮೊದಲ ವಿಕೆಟ್‌ಗೆ ನಾಲ್ಕನೆ ಬಾರಿ 50 ಕ್ಕೂ ಅಧಿಕ ರನ್ ಜೊತೆಯಾಟ ನಡೆಸಿದರು.

 ಮ್ಯಾಕ್ಸ್‌ವೆಲ್ ಬೌಲಿಂಗ್‌ನಲ್ಲಿ ಬೌಂಡರಿ ಬಾರಿಸಿದ ಗಂಭೀರ್ ಐಪಿಎಲ್‌ನಲ್ಲಿ 30ನೆ ಅರ್ಧಶತಕ ಬಾರಿಸಿದರು. ಆದರೆ, ಅವರು ಮುಂದಿನ ಓವರ್‌ನಲ್ಲಿ ಮ್ಯಾಕ್ಸ್‌ವೆಲ್‌ರ ನೇರ ಎಸೆತಕ್ಕೆ ರನೌಟಾದರು. 38 ಎಸೆತಗಳಲ್ಲಿ 50 ರನ್ ಪೂರೈಸಿದ ಉತ್ತಪ್ಪ ಸ್ಪಿನ್ನರ್ ಸ್ವಪ್ನಿಲ್ ಸಿಂಗ್ ಬೌಲಿಂಗ್‌ನಲ್ಲಿ ಬೌಂಡರಿ, ಸಿಕ್ಸರ್ ಬಾರಿಸಿದರು. ಆದರೆ, ಉತ್ತಪ್ಪ ಕೂಡಾ ರನೌಟಾದರು.

ಈ ಇಬ್ಬರು ಔಟಾದ ನಂತರ ಕೆಕೆಆರ್ ನಿರೀಕ್ಷಿತ ಮೊತ್ತ ಗಳಿಸಲಿಲ್ಲ. ಕಳೆದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಆರ್ಭಟಿಸಿದ್ದ ಯೂಸುಫ್ ಪಠಾಣ್ 16 ಎಸೆತಗಳನ್ನು ಎದುರಿಸಿದ್ದರೂ ಕೇವಲ 1 ಸಿಕ್ಸರ್ ಸಹಿತ ಔಟಾಗದೆ 19 ರನ್ ಗಳಿಸಲಷ್ಟೇ ಶಕ್ತರಾದರು. ರಸೆಲ್ 10 ಎಸೆತಗಳಲ್ಲಿ 1 ಬೌಂಡರಿ, 1 ಸಿಕ್ಸರ್ ಸಿಡಿಸಿ ವಿಕೆಟ್‌ಕೀಪರ್ ವೃದ್ದಿಮಾನ್ ಸಹಾರಿಂದ ರನೌಟ್ ಆದರು.

ಅಂತಿಮ 2 ಓವರ್‌ಗಳಲ್ಲಿ ಕೇವಲ 14 ರನ್ ನೀಡಿದ ಸಂದೀಪ್ ಶರ್ಮ ಹಾಗೂ ಮೋಹಿತ್ ಶರ್ಮ ಕೆಕೆಆರ್‌ನ್ನು 3 ವಿಕೆಟ್ ನಷ್ಟಕ್ಕೆ 164 ರನ್‌ಗೆ ನಿಯಂತ್ರಿಸಿದರು.

 ಪಂಜಾಬ್ ತಂಡ ಏಳು ಬೌಲರ್‌ಗಳನ್ನು ದಾಳಿಗಿಳಿಸಿದ್ದರೂ ಯಾರೂ ಕೂಡ ಒಂದೂ ವಿಕೆಟ್ ಪಡೆಯದೇ ನಿರಾಸೆಗೊಳಿಸಿದರು. ಅಕ್ಷರ್ ಪಟೇಲ್(0/24) ಹಾಗೂ ಮಾರ್ಕಸ್ ಸ್ಟೊನಿಸ್(0/26) ರನ್‌ಗೆ ಕಡಿವಾಣ ಹಾಕಿದರು. ಕೋಲ್ಕತಾದ ಮೂವರು ದಾಂಡಿಗರು ರನೌಟ್ ಮೂಲಕವೇ ಔಟಾದರು.

ಸ್ಕೋರ್ ವಿವರ

ಕೋಲ್ಕತಾ ನೈಟ್ ರೈಡರ್ಸ್

20 ಓವರ್‌ಗಳಲ್ಲಿ 164/3

ರಾಬಿನ್ ಉತ್ತಪ್ಪ ರನೌಟ್ 70

ಗೌತಮ್ ಗಂಭೀರ್ ರನೌಟ್ 54

ಯೂಸುಫ್ ಪಠಾಣ್ ಔಟಾಗದೆ 19

ಆ್ಯಂಡ್ರೆ ರಸ್ಸಲ್ ರನೌಟ್ 16

ಇತರ 05

ವಿಕೆಟ್‌ಪತನ: 1-101, 2-137, 3-164

ಬೌಲಿಂಗ್ ವಿವರ:

ಸಂದೀಪ್ ಶರ್ಮ 4-0-25-0

ಮೋಹಿತ್ ಶರ್ಮ 4-0-39-0

ಸ್ಟಾನಿಸ್ 3-0-26-0

ಅಕ್ಷರ್‌ಪಟೇಲ್ 4-0-24-0

ಸ್ವಪ್ನಿಲ್ ಸಿಂಗ್ 3-0-29-0

ಗುರುಕೀರತ್ ಸಿಂಗ್ 1-0-8-0

 ಮ್ಯಾಕ್ಸ್‌ವೆಲ್ 1-0-11-0

ಕಿಂಗ್ಸ್ ಇಲೆವೆನ್ ಪಂಜಾಬ್

20 ಓವರ್‌ಗಳಲ್ಲಿ 157/9

ವಿಜಯ್ ಸಿ ಶಾಕಿಬ್ ಬಿ ಮೊರ್ಕೆಲ್ 06

ಸ್ಟಾನಿಸ್ ಸಿ ಚಾವ್ಲಾ ಬಿ ರಸೆಲ್ 00

ವೋರಾ ಸಿ ಶಾಕಿಬ್ ಬಿ ರಸೆಲ್ 00

ಸಹಾ ಬಿ ಚಾವ್ಲಾ 24

ಮ್ಯಾಕ್ಸ್‌ವೆಲ್ ಎಲ್‌ಬಿಡಬ್ಲು ಚಾವ್ಲಾ 68

ಮಿಲ್ಲರ್ ಸಿ ಸಬ್ ಬಿ ರಸೆಲ್ 13

ಗುರುಕೀರತ್ ಸಿಂಗ್ ರನೌಟ್ 11

ಅಕ್ಷರ್ ಪಟೇಲ್ ರನೌಟ್ 21

ಸ್ವಪ್ನಿಲ್ ಸಿಂಗ್ ಎಲ್‌ಬಿಡಬ್ಲು ರಸೆಲ್ 0

ಮೋಹಿತ್ ಶರ್ಮ ಔಟಾಗದೆ 01

ಸಂದೀಪ್ ಶರ್ಮ ಔಟಾಗದೆ 01

ಇತರ 12

ವಿಕೆಟ್ ಪತನ: 1-1, 2-13, 3-13, 4-53, 5-120, 6-130, 7-154, 8-155, 9-156

ಬೌಲಿಂಗ್ ವಿವರ:

ರಸೆಲ್ 4-0-20-4

ಮೊರ್ಕೆಲ್ 4-0-27-1

ಉಮೇಶ್ ಯಾದವ್ 3-0-26-0

ಶಾಕಿಬ್ ಅಲ್ ಹಸನ್ 3-0-21-0

ಪಿಯೂಷ್ ಚಾವ್ಲಾ 4-0-27-2

ಬ್ರಾಡ್ ಹಾಗ್ 2-0-28-0

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News