ಅಂಡರ್-19 ಕ್ರಿಕೆಟ್: ಕಣ್ಣೂರಿನ ಯುವಕ ನಝಿಲ್‌ಗೆ 10 ವಿಕೆಟ್

Update: 2016-05-05 04:54 GMT

ಕೊಚ್ಚಿ, ಮೇ 5: ಕ್ರಿಕೆಟ್‌ನಲ್ಲಿ ಇನಿಂಗ್ಸ್‌ವೊಂದರಲ್ಲಿ ಎಲ್ಲ 10 ವಿಕೆಟ್‌ಗಳನ್ನು ಉಡಾಯಿಸುವುದು ಅತ್ಯಂತ ಅಪರೂಪ. ಅದರಲ್ಲೂ ಜೂನಿಯರ್ ಮಟ್ಟದ ಕ್ರಿಕೆಟ್‌ನಲ್ಲಿ ಇದು ಅತ್ಯಂತ ವಿರಳ.

ಕಣ್ಣೂರಿನ 18ರ ಹರೆಯದ ಯುವಕ ನಝಿಲ್ ಸಿ.ಟಿ. ಕೇರಳ ಜೂನಿಯರ್ ಅಂತರ್-ಜಿಲ್ಲಾ ಟೂರ್ನಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿ ಎಲ್ಲ 10 ವಿಕೆಟ್‌ಗಳನ್ನು ಉರುಳಿಸಿದ ಮೊದಲ ಬೌಲರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಇಲ್ಲಿನ ಕೆಸಿಎ ಸ್ಟೇಡಿಯಂನಲ್ಲಿ ಬುಧವಾರ ನಡೆದ ದ್ವಿದಿನ ಅಂಡರ್-19 ಅಂತರ್-ಜಿಲ್ಲಾ ಕ್ರಿಕೆಟ್ ಪಂದ್ಯದಲ್ಲಿ ನಝಿಲ್ ಮೊದಲ ದಿನದಾಟದಲ್ಲೇ ಎದುರಾಳಿ ಮಲಪ್ಪುರಂ ತಂಡದ ಎಲ್ಲ 10 ವಿಕೆಟ್‌ಗಳನ್ನು ಕಬಳಿಸಿ ಎಲ್ಲರ ಗಮನ ತನ್ನತ್ತ ಸೆಳೆದಿದ್ದಾರೆ. ನಝಿಲ್ ಈ ಸಾಹಸದಿಂದಾಗಿ ಕಣ್ಣೂರು ತಂಡ ಮಲಪ್ಪುರಂ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ ಕೇವಲ 26 ರನ್‌ಗೆ ಆಲೌಟ್ ಮಾಡಿತ್ತು. ಪಂದ್ಯದ ಹೀರೋ ನಝಿಲ್ 9.4 ಓವರ್‌ಗಳಲ್ಲಿ 2 ಮೇಡನ್ ಸಹಿತ 12 ರನ್ ವೆಚ್ಚದಲ್ಲಿ 10 ವಿಕೆಟ್ ಉಡಾಯಿಸಿದ್ದರು.

ನಝಿಲ್ ಪಡೆದ 10 ವಿಕೆಟ್‌ಗಳ ಪೈಕಿ ನಾಲ್ವರು ದಾಂಡಿಗರು ಬೌಲ್ಡ್ ಆಗಿದ್ದರೆ, ಮೂವರು ಲೆಗ್-ಬಿಫೋರ್‌ಗೆ ಬಲಿಯಾದರು. ನಝಿಲ್ ಕ್ರಿಕೆಟ್ ಹಿನ್ನೆಲೆಯಿರುವ ಕುಟುಂಬದಿಂದ ಬಂದಿದ್ದಾರೆ. ನಝಿಲ್ ಚಿಕ್ಕಪ್ಪನ ಮಗ ಫಾಬಿದ್ ಫಾರೂಕ್ ಕಳೆದ ವರ್ಷ ಕೇರಳದ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆಗೈದಿದ್ದಾರೆ. ಆಫ್ ಸ್ಪಿನ್ನರ್ ಫಾರೂಕ್ ಹೆಜ್ಜೆಯನ್ನು ಅನುಸರಿಸಲು ಬಯಸಿರುವ ನಝಿಲ್ ರಣಜಿ ಟ್ರೋಫಿಯಲ್ಲಿ ಆಡುವ ಕನಸು ಕಾಣುತ್ತಿದ್ದಾರೆ.

‘‘ನಾನು ಒಂದು ದಿನ ಕೇರಳ ಪರ ಆಡುವ ಆಸೆಯಿದೆ. ಇದೀಗ ನಾನು ಜಿಲ್ಲಾ ಮಟ್ಟದ ತಂಡದಲ್ಲಿ ಉತ್ತಮ ಪ್ರದರ್ಶನ ನೀಡಲು ಯತ್ನಿಸುತ್ತಿದ್ದೇನೆ’’ ಎಂದು ಸ್ವಿಂಗ್ ಬೌಲರ್ ಆಗಿರುವ ನಝಿಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News