ಕಾರನ್ನು ಓವರ್‌ಟೇಕ್ ಮಾಡಿದ್ದಕ್ಕೆ ಜೆಡಿಯು ಶಾಸಕಿಯ ಪುತ್ರನಿಂದ ಯುವಕನ ಗುಂಡಿಕ್ಕಿ ಹತ್ಯೆ

Update: 2016-05-08 18:40 GMT

ಗಯಾ, ಮೇ 8: ಬಿಹಾರದ ಗಯಾ ಜಿಲ್ಲೆಯ ಪೊಲೀಸ್ ಲೈನ್‌ನ ಬಳಿ ತನ್ನ ವಾಹನವನ್ನು ಹಿಂದೆ ಹಾಕಿದ 20ರ ಹರೆಯದ ಯುವಕನೊಬ್ಬನನ್ನು ಜೆಡಿಯು ವಿಧಾನಪರಿಷತ್ ಸದಸ್ಯೆ ಮನೋರಮಾ ದೇವಿಯವರ ಪುತ್ರ ರಾಕಿ ಎಂಬಾತನು ಗುಂಡು ಹಾರಿಸಿ ಕೊಂದಿದ್ದಾನೆಂದು ಆರೋಪಿಸಲಾಗಿದೆ. ಈ ಘಟನೆ ಪ್ರದೇಶದಲ್ಲಿ ಪ್ರತಿಭಟನೆಯ ಕಿಚ್ಚು ಹಚ್ಚಿದೆ. ಘಟನೆಗೆ ಸಂಬಂಧಿಸಿದಂತೆ ಮನೋರಮಾರ ಪತಿ ಬಿಂದೇಶ್ವರ್ ಪ್ರಸಾದ್ ಯಾದವ್ ಅಲಿಯಾಸ್ ಬಿಂದಿ ಯಾದವ್ ಹಾಗೂ ಅವರ ಅಂಗರಕ್ಷಕ ರಾಜೇಶ್ ಕುಮಾರ್ ಎಂಬವರನ್ನು ಇಂದು ಬಂಧಿಸಲಾಗಿದೆ.

ಘಟನೆಯು ನಿನ್ನೆ ರಾತ್ರಿ ನಡೆದಿದೆ. ಜೆಡಿಯು ಎಂಎಲ್‌ಸಿಯ ಪುತ್ರ ರಾಖಿಕುಮಾರ್ ಯಾದವ್ ಹಾಗೂ ಆತನ ಕಡೆಯವರು ಎಸ್‌ಯುವಿ ವಾಹನವೊಂದರಲ್ಲಿ ಪ್ರಯಾಣಿಸುತ್ತಿದ್ದಾಗ, ಗಯಾ ಪಟ್ಟಣದಿಂದ ಬೋಧ ಗಯಾಕ್ಕೆ ತನ್ನ ನಾಲ್ವರು ಮಿತ್ರರೊಂದಿಗೆ ಪ್ರಯಾಣಿಸುತ್ತಿದ್ದ ಆದಿತ್ಯ ಕುಮಾರ್ ಸಚದೇವ್ (20), ಯಾದವ್ ಕಾರನ್ನು ಓವರ್‌ಟೇಕ್ ಮಾಡಿದ್ದನೆಂದು ಮಗಧ ವಲಯದ ಡಿಐಜಿ ಸೌರಭ್ ಕುಮಾರ್ ತಿಳಿಸಿದ್ದಾರೆ.

ತನ್ನ ಕಾರನ್ನು ಹಿಂದಿಕ್ಕಿದ ಸಚದೇವ್‌ಗೆ ಪಾಠ ಕಲಿಸುವುದಕ್ಕಾಗಿ ರಾಕಿ ಆತನ ಮೇಲೆ ಗುಂಡು ಹಾರಿಸಿದನೆಂದು ದೂರಿನಲ್ಲಿ ಹೇಳಲಾಗಿದೆ. ಸಚ ದೇವ್‌ನನ್ನು ಅನುಗ್ರಹ ನಾರಾಯಾಣ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ತರಲಾಯಿತಾದರೂ, ಅವನಾಗಲೇ ಮೃತಪಟ್ಟಿರುವನೆಂದು ವೈದ್ಯರು ಘೋಷಿಸಿದರೆಂದು ಡಿಐಜಿ ತಿಳಿಸಿದ್ದಾರೆ. ಘಟನೆಯ ಬಳಿಕ ಎಂಎಲ್‌ಸಿಯ ಪತಿ ಹಾಗೂ ಅಂಗರಕ್ಷಕನನ್ನು ಬಂಧಿಸಲಾಗಿದೆ. ಸಚದೇವ್‌ನ ಹತ್ಯೆಗೆ ಸಂಬಂಧಿಸಿ ಶಾಸಕಿಯ ನಿವಾಸದಿಂದ 70 ಸುತ್ತು ಗುಂಡುಗಳು ಹಾಗೂ ಒಂದು ಕಾರ್ಬೈನನ್ನು ವಶಪಡಿಸಿಕೊಳ್ಳಲಾಗಿದೆ. ರಾಕಿ ಕುಮಾರ್ ಯಾದವ್ ಬಂಧನಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆಯೆಂದು ಅವರು ವಿವರಿಸಿದ್ದಾರೆ.

ಯುವಕರ ಹತ್ಯೆಯು ರಾಜಕೀಯ ರಂಗನ್ನು ಪಡೆದಿದೆ. ವಿಪಕ್ಷ ನಾಯಕ ಪ್ರೇಮ್ ಕುಮಾರ್ ಸಂತಾಪ ಸೂಚಿಸುವುದಕ್ಕಾಗಿ ಮೃತನ ಕುಟುಂಬವನ್ನು ಇಂದು ಭೇಟಿಯಾಗಿದ್ದಾರೆ. ಬಳಿಕ, ಅವರು ಹತ್ಯೆಯನ್ನು ಪ್ರತಿಭಟಿಸಲು ಮಹಾವೀರ ಸೇತುವೆಯ ಬಳಿ ರಸ್ತೆ ತಡೆ ನಿರ್ಮಿಸಿದ್ದ ಭಾರೀ ಜನ ಸಮೂಹವನ್ನುದ್ದೇಶಿಸಿ ಮಾತನಾಡಿದ್ದಾರೆ.

ಗಯಾ ಜಿಲ್ಲೆಯ ಬಿಜೆಪಿ ಅಧ್ಯಕ್ಷ ಅನಿಲ್ ಸ್ವಾಮಿ ನೇತೃತ್ವದ ಪ್ರತಿಭಟನಾಕಾರರು ಹತ್ಯಾ ಪ್ರಕರಣದ ಪ್ರಧಾನ ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿ, ಜಿಲ್ಲಾ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.

ಆದರೆ, ಮನೋರಮಾ ದೇವಿ, ಯುವಕನ ಹತ್ಯೆಯಲ್ಲಿ ಮಗನ ಪಾತ್ರವನ್ನು ತಳ್ಳಿ ಹಾಕಿದ್ದು ರಾಕಿಕುಮಾರ್ ಅಮಾಯಕ ಎಂದಿದ್ದಾರೆ.

ಬಿಂದೇಶ್ವರಿ ಪ್ರಸಾದ್ ಯಾದವ್‌ರನ್ನು ಈ ಹಿಂದೆಯೂ ಒಮ್ಮೆ ಬಂಧಿಸಲಾಗಿತ್ತು. ಅವರಿಂದ 2011ರಲ್ಲಿ ಸಾರ್ವಜನಿಕ ಉಪಯೋಗಕ್ಕೆ ನಿಷೇಧಿಸಲಾಗಿದ್ದ ಬಂದೂಕೊಂದರ 6 ಸಾವಿರ ಸುತ್ತು ಮದ್ದು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅವರು ದೇಶದ್ರೋಹದ ಆರೋಪದಲ್ಲೂ ಒವ್ಮೆು ಜೈಲು ಸೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News