×
Ad

ಪಶ್ಚಿಮಬಂಗಾಳ | ಶಿಕ್ಷಕರ ನೇಮಕಾತಿ ಹಗರಣ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ಸುಪ್ರೀಂ ನಿರಾಕರಣೆ

Update: 2024-04-29 20:54 IST

 ಸುಪ್ರೀಂ ಕೋರ್ಟ್ |  PC: PTI 

ಹೊಸದಿಲ್ಲಿ : ಪಶ್ಚಿಮಬಂಗಾಳದಲ್ಲಿ ಕಾನೂನುಬಾಹಿರವಾಗಿ ನೇಮಕರಾದ 25 ಸಾವಿರ ಶಿಕ್ಷಕರನ್ನು ತೆಗೆದು ಹಾಕುವ ಕೋಲ್ಕತ್ತಾ ಉಚ್ಚ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.

ಆದರೆ, ಹೆಚ್ಚುವರಿ ಶಿಕ್ಷಕರ ಹುದ್ದೆಯನ್ನು ಸೃಷ್ಟಿಸುವಲ್ಲಿ ಭಾಗಿಯಾದ ಎಲ್ಲರ ಕುರಿತು ತನಿಖೆ ನಡೆಸುವಂತೆ ಸಿಬಿಐಗೆ ನಿರ್ದೇಶಿಸಿದ ಕೋಲ್ಕತ್ತಾ ಉಚ್ಚ ನ್ಯಾಯಾಲಯದ ಆದೇಶದ ಒಂದು ಭಾಗಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.

ನೇಮಕಾತಿ ಪರೀಕ್ಷೆಯನ್ನು ನಡೆಸಿದ ಏಜೆನ್ಸಿ, ಒಎಂಆರ್ ಉತ್ತರಪತ್ರಿಕೆಯ ನಾಶ, ಫಲಿತಾಂಶದ ಕುರಿತ ಸಾಫ್ಟವೇರ್ ಅನ್ನು ಅಳಿಸಿರುವುದು ಹಾಗೂ ಆಯ್ಕೆ ಸಮಿತಿಯ ಭಾಗವಾಗಿರದವರನ್ನು ಸೇರಿಸಿರುವುದರ ಕುರಿತು ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ.

ಉಚ್ಚ ನ್ಯಾಯಾಲಯ ಹೇಗೆ ತಪ್ಪು ತೀರ್ಪು ನೀಡಿದೆ ಎಂಬುದನ್ನು ನೀವು ತಿಳಿಸಿ ಎಂದು ಮುಖ್ಯ ನ್ಯಾಯ ಮೂರ್ತಿ ಅವರು ಹೇಳಿದರು. ಅಲ್ಲದೆ, ವಿಚಾರಣೆಯನ್ನು ಮೇ 6ಕ್ಕೆ ಮುಂದೂಡಿದರು.

ಕಳೆದ ವಾರ ನೀಡಿದ ಆದೇಶದಲ್ಲಿ ಕೋಲ್ಕತ್ತಾ ಉಚ್ಚ ನ್ಯಾಯಾಲಯ ರಾಜ್ಯದ ಸೆಕೆಂಡರಿ ಹಾಗೂ ಹೈಯರ್ ಸೆಕಂಡರಿ ಶಾಲೆಗಳ ವಿವಿಧ ವರ್ಗಗಳ ಉದ್ಯೋಗಗಳಿಗೆ 2016ರಲ್ಲಿ ಎಲ್ಲ 25,753 ಶಿಕ್ಷಕರಿಗೆ ನೀಡಲಾಗಿದ್ದ ನೇಮಕಾತಿಯನ್ನು ಅಸಿಂಧುಗೊಳಿಸಿತ್ತು.

ಆಯ್ಕೆಯಾದ ಅಭ್ಯರ್ಥಿಗಳು ತಾವು ತೆಗೆದುಕೊಂಡ ಸಂಪೂರ್ಣ ವೇತನವನ್ನು ವಾರ್ಷಿಕ ಶೇ. 12 ಬಡ್ಡಿಯೊಂದಿಗೆ ಮುಂದಿನ ನಾಲ್ಕು ವಾರಗಳ ಒಳಗೆ ಹಿಂದಿರುಗಿಸುವಂತೆ ನ್ಯಾಯಮೂರ್ತಿಗಳಾದ ದೇಬಾಂಗ್ಸು ಬಸಕ್ ಹಾಗೂ ಶಬ್ಬಾರ್ ರಶಿದಿ ಅವರನ್ನು ಒಳಗೊಂಡ ವಿಭಾಗೀಯ ಪೀಠ ಹೇಳಿತ್ತು.

ಇದಲ್ಲದೆ, ಹೊಸತಾಗಿ ನೇಮಕಾತಿ ಪ್ರಕ್ರಿಯೆ ಆರಂಭಿಸುವಂತೆ ಪಶ್ಚಿಮಬಂಗಾಳ ಶಾಲಾ ಸೇವಾ ಆಯೋಗ (ಡಬ್ಲ್ಯುಬಿಎಸ್‌ಎಸ್‌ಸಿ)ಕ್ಕೆ ನಿರ್ದೇಶಿಸಿತ್ತು. ಅಲ್ಲದೆ, ಈ ವಿಷಯದ ಕುರಿತು ತನಿಖೆ ನಡೆಸುವಂತೆ ಸಿಬಿಐಗೆ ಆದೇಶಿಸಿತ್ತು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News