ಈಜಿಪ್ಟ್: ಮೂವರು ಪತ್ರಕರ್ತರಿಗೆ ಗಲ್ಲು

Update: 2016-05-08 18:46 GMT

ಕೈರೋ, ಮೇ 8: ಮೂವರು ಪತ್ರಕರ್ತರು ಮತ್ತು ಇತರ ಮೂವರಿಗೆ ಮರಣ ದಂಡನೆ ನೀಡುವಂತೆ ಈಜಿಪ್ಟ್‌ನ ನ್ಯಾಯಾಲಯವೊಂದು ಶನಿವಾರ ಶಿಫಾರಸು ಮಾಡಿದೆ. ದೇಶದ ರಹಸ್ಯಗಳು ಮತ್ತು ದಾಖಲೆಗಳನ್ನು ಕತರ್‌ಗೆ ಸೋರಿಕೆ ಮಾಡುವ ಮೂಲಕ ರಾಷ್ಟ್ರೀಯ ಭದ್ರತೆಯನ್ನು ಅಪಾಯಕ್ಕೆ ಗುರಿ ಮಾಡಿದ ಆರೋಪವನ್ನು ಅವರ ವಿರುದ್ಧ ಹೊರಿಸಲಾಗಿದೆ.
ಕತರ್‌ನ ಸುದ್ದಿವಾಹಿನಿ ಅಲ್-ಜಝೀರದಲ್ಲಿ ಕೆಲಸ ಮಾಡುತ್ತಿರುವ ಜೋರ್ಡಾನ್ ರಾಷ್ಟ್ರೀಯ ಆಲಾ ಉಮರ್ ಸಬ್ಲನ್ ಮತ್ತು ಇಬ್ರಾಹೀಂ ಮುಹಮ್ಮದ್ ಹಿಲಾಲ್ ಹಾಗೂ ಮುಸ್ಲಿಂ ಬ್ರದರ್‌ಹುಡ್ ಪರವಾಗಿರುವ ಸುದ್ದಿ ಜಾಲ ರಸ್ದ್‌ನ ವರದಿಗಾರ್ತಿ ಅಸ್ಮಾ ಅಲ್ ಖತೀಬ್ ಮರಣ ದಂಡನೆಗೆ ಗುರಿಯಾಗಿರುವ ಪತ್ರಕರ್ತರು. ಅವರ ಅನುಪಸ್ಥಿತಿಯಲ್ಲಿ ಅವರಿಗೆ ಶಿಕ್ಷೆ ನೀಡಲಾಗಿದೆ. ಆದಾಗ್ಯೂ, ಅವರು ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಬಹುದಾಗಿದೆ.
2013ರಲ್ಲಿ ದೇಶದ ಅಧ್ಯಕ್ಷ ಮುಸ್ಲಿಂ ಬ್ರದರ್‌ಹುಡ್‌ನ ಮುಹಮ್ಮದ್ ಮುರ್ಸಿಯನ್ನು ಹುದ್ದೆಯಿಂದ ಪದಚ್ಯುತಗೊಳಿಸಿ ಈಜಿಪ್ಟ್ ನ ನಿಯಂತ್ರಣವನ್ನು ಸೇನೆ ತನ್ನ ಕೈಗೆ ತೆಗೆದು ಕೊಂಡ ಬಳಿಕ ನಡೆದ ಮಹತ್ವದ ವಿದ್ಯಮಾನ ಇದಾಗಿದೆ. ಮುರ್ಸಿ ಹಾಗೂ ಮುಸ್ಲಿಂ ಬ್ರದರ್‌ಹುಡ್‌ನ ಇತರ ನಾಯಕರು ಹಾಗೂ ಹುಸ್ನಿ ಮುಬಾರಕ್ ಆಡಳಿತದ ಪತನಕ್ಕೆ ಕಾರಣವಾದ 2011ರ ಬಂಡಾಯದ ಹಿಂದಿನ ಪ್ರಮುಖ ನಾಯಕರು ಈಗ ಜೈಲಿನಲ್ಲಿದ್ದಾರೆ.
ಶನಿವಾರದ ತೀರ್ಪನ್ನು ಪರಿಶೀಲನೆಗಾಗಿ ಅತ್ಯುನ್ನತ ಧಾರ್ಮಿಕ ಪ್ರಾಧಿಕಾರ ಗ್ರಾಂಡ್ ಮುಫ್ತಿಗೆ ಸಲ್ಲಿಸಲಾಗಿದೆ. ಆದಾಗ್ಯೂ ಅವರ ಅಭಿಪ್ರಾಯ ಪಾಲನೆ ಕಡ್ಡಾಯವಾಗಿರುವುದಿಲ್ಲ. ಬಳಿಕ ನ್ಯಾಯಾಲಯವು ತನ್ನ ತೀರ್ಪನ್ನು ಜೂನ್ 18ರಂದು ನೀಡುವ ನಿರೀಕ್ಷೆಯಿದೆ.
ಇದೇ ಪ್ರಕರಣದಲ್ಲಿ ಮುರ್ಸಿ ಹಾಗೂ ಇತರ ಹಲವರಿಗೆ ಸಂಬಂಧಿಸಿದ ತೀರ್ಪಿನ ಘೋಷಣೆಯನ್ನು ಅದೇ ದಿನಕ್ಕೆ ಮೂಂದೂಡಲಾಗುವುದು ಎಂದು ನ್ಯಾಯಾಧೀಶ ಮುಹಮ್ಮದ್ ಶಿರೀನ್ ಫಾಹ್ಮಿ ತಿಳಿಸಿದರು.
ಕತರ್ ಗುಪ್ತಚರ ಸಂಸ್ಥೆಗೆ ರಹಸ್ಯ ದಾಖಲೆಗಳನ್ನು ಸೋರಿಕೆ ಮಾಡುವಲ್ಲಿ ಮುರ್ಸಿಯ ಅನುಯಾಯಿಗಳು ಪ್ರಮುಖ ಪಾತ್ರ ವಹಿಸಿದ್ದಾರೆ ಹಾಗೂ ಈಜಿಪ್ಟ್ ಸಶಸ್ತ್ರ ಪಡೆಗಳ ಶಸ್ತ್ರಾಸ್ತ್ರಗಳನ್ನು ಎಲ್ಲಿ ಇಡಲಾಗುತ್ತದೆ ಎಂಬ ಮಾಹಿತಿಯನ್ನು ಹೊರಗೆಡವಲಾಗಿದೆ ಎಂದು ಈ ಪ್ರಕರಣದ ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದಾರೆ.
ಆದರೆ, ಮುರ್ಸಿ ಆಡಳಿತದ ವಿರುದ್ಧ ಪ್ರತಿಭಟನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದ ಅವಧಿಯಲ್ಲಿ, ದಾಖಲೆಗಳನ್ನು ರಕ್ಷಿಸುವುದಕ್ಕಾಗಿ ಅವುಗಳನ್ನು ಅಧ್ಯಕ್ಷೀಯ ಅರಮನೆಯಿಂದ ಹೊರಗೊಯ್ಯಲಾಗಿತ್ತು ಎಂದು ಆರೋಪಿ ಪರ ವಕೀಲರು ವಾದಿಸಿದರು. ಆದರೆ, ಇದಕ್ಕೂ ಅಧ್ಯಕ್ಷರಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿರುವ ವಕೀಲರು, ಪ್ರಕರಣದಲ್ಲಿ ಹಾಜರುಪಡಿಸಲಾಗಿರುವ ದಾಖಲೆಗಳು ಬೇಹುಗಾರಿಕೆಯ ಆರೋಪವನ್ನು ದೃಢೀಕರಿಸುವುದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News