×
Ad

ರಾಜ್ಯ ಸಚಿವ ಸಂಪುಟ ಪುನರ್ರಚನೆಗೆ ಮುಹೂರ್ತ ಹತ್ತಿರ: ಕಾಗೋಡು, ರಮೇಶ್ ಕುಮಾರ್ ಸೇರ್ಪಡೆ ಸಾಧ್ಯತೆ

Update: 2016-05-10 21:42 IST

ಬೆಂಗಳೂರು,ಮೇ 10: ರಾಜ್ಯ ಸಚಿವ ಸಂಪುಟವನ್ನು ಪುನರ್ರಚನೆಗೆ ಮುಹೂರ್ತ ಹತ್ತಿರವಾಗಿದ್ದು ತೋಟಗಾರಿಕಾ ಸಚಿವ ಶಾಮನೂರು ಶಿವಶಂಕರಪ್ಪ ಸೇರಿದಂತೆ ಎಂಟು ಮಂದಿಯನ್ನು ಕೈ ಬಿಟ್ಟು, ಕಾಗೋಡು ತಿಮ್ಮಪ್ಪ,ರಮೇಶ್ ಕುಮಾರ್ ಸೇರಿದಂತೆ ಎಂಟು ಮಂದಿಯನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ಮುಖ್ಯಮಂತ್ರಿ ಸಿದ್ಧರಾಮಯ್ಯ ನಿರ್ಧರಿಸಿದ್ದಾರೆ.

ಉನ್ನತ ಮೂಲಗಳ ಪ್ರಕಾರ ಮೇ 11ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ವರಿಷ್ಠರನ್ನು ಭೇಟಿ ಮಾಡಿ ಮಂತ್ರಿ ಮಂಡಲದಿಂದ ಹೊರಹೋಗುವವರು ಹಾಗೂ ಸೇರ್ಪಡೆಯಾಗುವವರ ಪಟ್ಟಿಯನ್ನು ಕೊಟ್ಟು ಬರಲಿದ್ದಾರೆ.

ರಾಜ್ಯ ಸಚಿವ ಸಂಪುಟವನ್ನು ತ್ವರಿತವಾಗಿ ಪುನರ್ರಚಿಸಿ ಈಗ ಎದ್ದಿರುವ ನಾಯಕತ್ವದ ಕುರಿತಾದ ಗೊಂದಲಗಳನ್ನು ಪರಿಹರಿಸಿಕೊಳ್ಳಲು ಮುಖ್ಯಮಂತ್ರಿಗಳು ನಿರ್ಧರಿಸಿದ್ದು ಹೈಕಮಾಂಡ್ ಕೂಡಾ ತಕ್ಷಣವೇ ಸಂಪುಟ ಪುನರ್ರಚಿಸುವ ಪ್ರಸ್ತಾಪಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.

ತೋಟಗಾರಿಕಾ ಸಚಿವ ಶಾಮನೂರು ಶಿವಶಂಕರಪ್ಪರನ್ನು ಸಚಿವ ಸಂಪುಟ ಪುನರ್ರಚನೆಯ ಸಂದರ್ಭದಲ್ಲಿ ಕಿತ್ತು ಹಾಕಲಿದ್ದು, ಅವರ ಜಾಗಕ್ಕೆ ಅವರ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್‌ರನ್ನು ತರಲು ನಿರ್ಧರಿಸಲಾಗಿದೆ.

ಇದೇ ರೀತಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್‌ರನ್ನು ಸಚಿವ ಸಂಪುಟದಿಂದ ಕೈ ಬಿಡಲು ತೀರ್ಮಾನಿಸಲಾಗಿದ್ದು ಅವರ ಜಾಗಕ್ಕೆ ಶಿವಮೊಗ್ಗ ಜಿಲ್ಲೆಯ ಸಾಗರ ವಿಧಾನಸಭಾ ಕ್ಷೇತ್ರದವರಾದ ಸ್ಪೀಕರ್ ಕಾಗೋಡು ತಿಮ್ಮಪ್ಪರನ್ನು ಸೇರ್ಪಡೆ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ.

ಈ ಮಧ್ಯೆ ಮಾಜಿ ಸ್ಪೀಕರ್ ರಮೇಶ್ ಕುಮಾರ್‌ರನ್ನು ಸಚಿವ ಸಂಪುಟಕ್ಕೆ ತೆಗೆದುಕೊಳ್ಳಲು ತೀರ್ಮಾನಿಸಲಾಗಿದ್ದು ಅದೇ ಕಾಲಕ್ಕೆ ಹಿರಿಯ ನಾಯಕರಾದ ಬಸವರಾಜ ರಾಯರೆಡ್ಡಿ, ಶಿವಾನಂದ ಪಾಟೀಲ್ ಸೇರಿದಂತೆ ಹಲವು ಪ್ರಮುಖರ ಹೆಸರುಗಳನ್ನು ಸೇರ್ಪಡೆಯಾಗುವವರ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ.
ಬರಗಾಲದ ಅಧ್ಯಯನಕ್ಕೆಂದು ರಾಜ್ಯ ಪ್ರವಾಸ ಮಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಈ ಕಾಲದಲ್ಲಿ ತಮ್ಮ ಸರಕಾರದಲ್ಲಿರುವ ಸಚಿವರ ವಿಷಯದಲ್ಲಿ ಎದ್ದಿರುವ ತೀವ್ರ ಅಸಮಾಧಾನಗಳನ್ನು ಗಮನಿಸಿದ್ದು ಇದರ ಬೆನ್ನಲ್ಲೇ ಸಂಪುಟ ಪುನರ್ರಚನೆ ಮಾಡಲು ತೀರ್ಮಾನಿಸಿದ್ದಾರೆ.

ಹೀಗೆ ಸಚಿವ ಸಂಪುಟ ಪುನರ್ರಚನೆ ಪ್ರಕ್ರಿಯೆಗೆ ಚಾಲನೆ ಸಿಗುತ್ತಿದ್ದಂತೆಯೇ ಹಲವು ಮಂದಿ ಸಚಿವ ಪದವಿ ಆಕಾಂಕ್ಷಿಗಳು ಹೈಕಮಾಂಡ್ ವರಿಷ್ಟರ ಮೇಲೆ ಒತ್ತಡ ಹೇರುತ್ತಿದ್ದು ಆ ಮೂಲಕ ಮತ್ತೆ ರಾಜ್ಯ ರಾಜಕೀಯ ಕಳೆ ಕಟ್ಟಿದಂತಾಗಿದೆ.

ಇದೇ ಮೂಲಗಳ ಪ್ರಕಾರ, ಮಂತ್ರಿ ಪದವಿ ಸಿಗದ ಪ್ರಮುಖರಿಗೆ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನವನ್ನು ನೀಡಲು ಮುಖ್ಯಮಂತ್ರಿಗಳು ಬಯಸಿದ್ದು ಆ ಸಂಬಂಧ ತಮ್ಮ ಆಪ್ತರ ಮೂಲಕ ಆಯಾ ಶಾಸಕರಿಗೆ ಸಂದೇಶ ನೀಡಿದ್ದಾರೆಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News