ತಾಂಜೇನಿಯಾ, ನೈಜೀರಿಯಾ ವಿದ್ಯಾರ್ಥಿಗಳಿಂದ ಪೊಲೀಸರ ಮೇಲೆ ಹಲ್ಲೆ: ಆರೋಪ
ಬೆಂಗಳೂರು, ಮೇ 13: ನಗರದ ಬಾಗಲೂರು ಹಾಗೂ ಯಲಹಂಕದ ಕಣ್ಣೂರಿನಲ್ಲಿ ವಿದೇಶಿ ಯುವಕರು ಕಂಠಪೂರ್ತಿ ಕುಡಿದು ಪುಂಡಾಟ ಮಾಡಿ ತಡೆಯಲು ಬಂದ ಸ್ಥಳೀಯರು ಹಾಗೂ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಬಾಗಲೂರಿನಲ್ಲಿ ನೈಜೀರಿಯಾ ವಿದ್ಯಾರ್ಥಿಯೊಬ್ಬ ಬಾಡಿಗೆಗಿದ್ದ ಮನೆಯಲಿ ್ಲತನ್ನ ದೇಶದ ಐದಾರು ಮಂದಿಯ ಜೊತೆ ಕಂಠಮಟ್ಟ ಕುಡಿದು ಮೋಜು ಮಸ್ತಿ ಮಾಡುತ್ತಿದ್ದ ಎನ್ನಲಾಗಿದೆ. ಇದನ್ನು ಪ್ರಶ್ನಿಸಿದ ಮನೆ ಮಾಲಕ ಮನೆ ಖಾಲಿ ಮಾಡುವಂತೆ ಹೇಳಿದ್ದು, ಈ ಸಂದರ್ಭ ಮನೆ ಮಾಲಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಮುಂದಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಬಾಗಲೂರು ಪೊಲೀಸ್ ಪೇದೆಯೊಬ್ಬರ ಮೇಲೆ ಬೆಲ್ಟ್‌ನಿಂದ ಹಲ್ಲೆಗೆ ಮುಂದಾಗಿ ಅಂಗಿ ಹರಿದುಕೊಂಡು ಇತರ ವಿದ್ಯಾರ್ಥಿಗಳ ಜೊತೆ ರಸ್ತೆಗೆ ಬಂದು ರಂಪಾಟ ಮಾಡಿದ್ದಾನೆ ಎನ್ನಲಾಗಿದೆ. ತಕ್ಷಣ ಹೆಚ್ಚಿನ ಪೊಲೀಸರು ಆಗಮಿಸಿ ಪುಂಡಾಟ ನಡೆಸಿದ ವಿದ್ಯಾರ್ಥಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಬಾಗಲೂರು ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಮತ್ತೊಂದೆಡೆ ಯಲಹಂಕದ ಕಣ್ಣೂರು ಬಳಿಯಿರುವ ಕಂಟ್ರಿಕ್ಲಬ್’ನಲ್ಲಿ ತಾಂಜೇನಿಯಾ ವಿದ್ಯಾರ್ಥಿಗಳು ಮತ್ತು ನೈಜೀರಿಯಾ ವಿದ್ಯಾರ್ಥಿಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಅಡ್ಡ ಬಂದ ಸಾರ್ವಜನಿಕರ ಮೇಲೂ ಹಲ್ಲೆ ನಡೆಸುವ ಮೂಲಕ ದೌರ್ಜನ್ಯ ಪ್ರದರ್ಶಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರ ಮೇಲೂ ಹಲ್ಲೆ ನಡೆಸಿದ್ದಾರೆ. ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರನ್ನೇ ಥಳಿಸಿದ್ದಾರೆ ಎನ್ನಲಾಗಿದೆ.
ತಾಂಜೇನಿಯಾ, ನೈಜೀರಿಯಾ ಇನ್ನಿತರ ಆಫ್ರಿಕಾ ದೇಶದ ಪ್ರಜೆಗಳು ನಗರದಲ್ಲಿ ಪುಂಡಾಟ ನಡೆಸಿ ಸ್ಥಳೀಯರಿಗೆ ಕಿರುಕುಳ ನೀಡುತ್ತಿರುವುದಲ್ಲದೇ, ತಡೆಯಲು ಬಂದ ಪೊಲೀಸರ ಮೇಲೂ ಹಲ್ಲೆಗೆ ಮುಂದಾಗುತ್ತಿರುವುದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಬೇಕೆಂಬ ಆಗ್ರಹ ಕೇಳಿಬಂದಿದೆ.