ಬೆಂಗಳೂರು: ಲೇಡಿ ರೌಡಿ ಆಸ್ಪತ್ರೆಯಿಂದ ಪರಾರಿ!
ಬೆಂಗಳೂರು, ಮೇ 13: ಎದೆನೋವಿನ ನಾಟಕವಾಡಿ ಬನ್ನೇರುಘಟ್ಟರಸ್ತೆಯ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳಾ ರೌಡಿ ಯಶಸ್ವಿನಿ, ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದಾಳೆ.
ಸುಬ್ರಹ್ಮಣ್ಯಪುರ ಪೊಲೀಸರಿಗೆ ಹೆದರಿ ಎದೆನೋವು ಎಂದು ಗುರುವಾರ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಬಸವನಗುಡಿ ಪೊಲೀಸ್‌ಠಾಣೆಯ ರೌಡಿ ಪಟ್ಟಿಯಲ್ಲಿರುವ ಯಶಸ್ವಿನಿ(35) ಪರಾರಿಯಾಗಿದ್ದಾಳೆ. ಆಕೆಯ ಬಂಧನಕ್ಕೆ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.
ಸಾಲ ಪಡೆದಿದ್ದ ಹಣಕ್ಕೆ ಸಕಾಲಕ್ಕೆ ಬಡ್ಡಿ ಕಟ್ಟಲಿಲ್ಲ ಎನ್ನುವ ಕಾರಣಕ್ಕೆ ಕೊತ್ತನೂರು ಮುಖ್ಯರಸ್ತೆಯ ತಾಯಮ್ಮ ಎಂಬುವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಮುಂದಾಗಿದ್ದರು. ಈ ಸಂಬಂಧ ತಾಯಮ್ಮ ಸುಬ್ರಹ್ಮಣ್ಯಪುರ ಪೊಲೀಸರಿಗೆ ದೂರು ನೀಡಿದ್ದರು. ದೂರು ನೀಡಿದ ವಿಷಯ ತಿಳಿದ ಯಶಸ್ವಿನಿ ನನ್ನ ಮೇಲೆ ಹಲ್ಲೆ ನಡೆಸಿದ್ದಾಗಿ ಆರೋಪ ಮಾಡಿ ಎದೆನೋವಿನ ನಾಟಕವಾಡಿ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಳು.
ಚಿಕಿತ್ಸೆ ಪಡೆಯುತ್ತಿದ್ದ ಯಶಸ್ವಿನಿಯನ್ನು ವೈದ್ಯರ ಅಭಿಪ್ರಾಯ ಪಡೆದು ಸುಬ್ರಹ್ಮಣ್ಯಪುರ ಪೊಲೀಸರು ವಶಕ್ಕೆ ತೆಗೆದುಕೊಳ್ಳಲು ಮುಂದಾದ ಮಾಹಿತಿ ಅರಿತು ಆಸ್ಪತ್ರೆಯಿಂದಲೇ ಆಕೆ ಪರಾರಿಯಾಗಿದ್ದಾಳೆ. ರೌಡಿ ಯಶಸ್ವಿನಿ 2008ರಿಂದಲೂ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಆಕೆಯ ಮೇಲಿನ ಕೆಲವು ಪ್ರಕರಣಗಳು ಇತ್ಯರ್ಥಗೊಂಡಿದ್ದರೆ ಉಳಿದ ಸರಗಳವು, ವಂಚನೆ, ಜೀವ ಬೆದರಿಕೆ ಪ್ರಕರಣಗಳ ವಿರುದ್ಧ ಪೊಲೀಸರು ತಮ್ಮ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಅರ್ಜಿ ಸಲ್ಲಿಸಿದ್ದಾಳೆ.
ಮೊದಲು ಬಸವನಗುಡಿಯಲ್ಲಿದ್ದ ಯಶಸ್ವಿನಿ ಇತ್ತೀಚಿಗೆ ಹುಳಿಮಾವುವಿಗೆ ಮನೆಯನ್ನು ಬದಲಿಸಿ ಅಲ್ಲಿ ವಾಸಿಸುತ್ತಿದ್ದಳು. ಈಕೆಯ ಪತಿ ಮಹೇಶ್ ಕೂಡ ಜೆಪಿ ನಗರ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದಾನೆ. ಇವರಿಬ್ಬರೂ ಮಾನವ ಹಕ್ಕುಗಳ ಹೆಸರಿನಲ್ಲಿ ಅಮಾಯಕರಿಗೆ ವಂಚಿಸಿ ಕಿರುಕುಳ ನೀಡುತ್ತಿದ್ದರು. ಅಲ್ಲದೆ 100 ರೂ.ಗೆ 30 ರೂ.ಬಡ್ಡಿದರ ವಿಧಿಸುತ್ತಿದ್ದರು ಎಂದು ವಿಚಾರಣೆಯಲ್ಲಿ ತಿಳಿದುಬಂದಿದೆ.