×
Ad

ಪ್ರಧಾನಿ ನರೇಂದ್ರ ಮೋದಿ ಒಬ್ಬ ಸರ್ವಾಧಿಕಾರಿ - ಸ್ಟಂಟ್ ಮಾಸ್ಟರ್ : ಪೃಥ್ವಿರಾಜ್ ಚೌಹಾಣ್

Update: 2016-05-26 17:40 IST

ಬೆಂಗಳೂರು,ಮೇ,26-ಅಧಿಕಾರಕ್ಕೆ ಬಂದ ಎರಡು ವರ್ಷಗಳಲ್ಲಿ ದೇಶದ ಜನರ ಎಲ್ಲ ನಿರೀಕ್ಷೆಗಳನ್ನು ಹುಸಿಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಕೇವಲ ಒಬ್ಬ ಸ್ಟಂಟ್ ಮಾಸ್ಟರ್ ಎಂದು ಟೀಕಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪೃಥ್ವಿರಾಜ್ ಚೌಹಾಣ್,ಕರ್ನಾಟಕ ಸೇರಿದಂತೆ ಬರಪೀಡಿತ ರಾಜ್ಯಗಳಲ್ಲಿ ರೈತರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಮಾಡಿದ ಸಾಲ ಮನ್ನಾ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಜಗತ್ತಿನ ಭೂಪಟವನ್ನು ಕಣ್ಣೆದುರು ಇಟ್ಟುಕೊಂಡು ತಾವು ನೋಡದ ದೇಶಗಳು ಯಾವ್ಯಾವುವು ಎಂದು ಪಟ್ಟಿ ಮಾಡಿ ಆಯಾ ದೇಶಗಳಿಗೆ ಸುತ್ತುತ್ತಿರುವ ಮೋದಿಯಿಂದ ದೇಶದ ಉದ್ದಾರ ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದರು.

ಕೇಂದ್ರದಲ್ಲಿ ತಮ್ಮ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಾದವು ಎಂಬ ನೆಪದಲ್ಲಿ ಇವರು ಸಾಧನೆಯ ಪುಸ್ತಕ ಬಿಡುಗಡೆ ಮಾಡಿದ್ದಾರೆ.ಆದರೆ ಇದರಲ್ಲಿ ಮೋದಿ ಅವರ ಭಾವಚಿತ್ರ ಬಿಟ್ಟರೆ ಬೇರೊಬ್ಬ ಸಚಿವರ ಭಾವಚಿತ್ರವಿಲ್ಲ.ಅವರೊಬ್ಬ ಸರ್ವಾಧಿಕಾರಿ ಎಂಬುದಕ್ಕೆ ಇದು ಸಾಕ್ಷಿ ಎಂದು ಹೇಳಿದರು.

ದೇಶದ ಜಿ.ಡಿ.ಪಿ (ಒಟ್ಟಾರೆ ಆಂತರಿಕ ಉತ್ಪನ್ನ) ಪ್ರಮಾಣ ಶೇಕಡಾ 7.5 ರಷ್ಟಾಗಿದೆ ಎಂದು ಇವರು ಹೇಳುತ್ತಾರೆ.ಆದರೆ ಇದು ಸುಳ್ಳು.ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜಿ.ಡಿ.ಪಿ ಪ್ರಮಾಣ ಕುಸಿದಿದೆ.ಆದರೆ ಇವರು ಸಂಖ್ಯೆಗಳನ್ನು ಹಿಡಿದುಕೊಂಡು ಗಿಮಿಕ್ ಮಾಡುತ್ತಿದ್ದಾರೆ ಎಂದರು.

ಅಡಳಿತದ ಎಲ್ಲ ರಂಗಗಳಲ್ಲಿ ಮೋದಿ ಸರ್ಕಾರ ವಿಫಲವಾಗಿದೆ.ಈ ಮಧ್ಯೆ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕಕ್ಕೆ ಇಪ್ಪತ್ತೈದು ಬಾರಿ,ಮಹಾರಾಷ್ಟ್ರಕ್ಕೆ ಇಪ್ಪತ್ತೈದು ಬಾರಿ ಮೋದಿ ಬಂದು ಹೋದರು.ಆದರೆ ಈಗ ಈ ರಾಜ್ಯಗಳು ಬರದಿಂದ ತತ್ತರಿಸುತ್ತಿವೆ.ಅದರೆ ಮೋದಿ ಇದುವರೆಗೆ ಈ ಕಡೆ ತಲೆ ಹಾಕಿಲ್ಲ ಎಂದು ಅವರು ಟೀಕಿಸಿದರು.

ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ವಿದೇಶಿ ನೆಲದಲ್ಲಿರುವ ಕಪ್ಪು ಹಣವನ್ನು ವಾಪಸ್ ತರುತ್ತೇವೆ.ದೇಶದ ಪ್ರತಿಯೊಬ್ಬ ವ್ಯಕ್ತಿಯ ಬ್ಯಾಂಕ್ ಖಾತೆಗೆ ತಲಾ ಹದಿನೈದು ಲಕ್ಷ ರೂ ಹಾಕುತ್ತೇವೆ ಎಂದರು.ಇದುವರೆಗೆ ಒಬ್ಬೇ ಒಬ್ಬ ಭಾರತೀಯ ಪ್ರಜೆಯ ಖಾತೆಗೆ ಹದಿನೈದು ಲಕ್ಷ ರೂ. ಬಂದಿಲ್ಲ ಎಂದರು.

ಮೋದಿಯ ವಿದೇಶಾಂಗ ನೀತಿಗೆ ತಳ ಬುಡ ಏನೂ ಇಲ್ಲ.ಇವರು ಪ್ರಧಾನಿಯಾಗುವ ಮೊದಲು ಅಮೇರಿಕ ಇವರಿಗೆ ವೀಸಾ ನೀಡುವುದಿಲ್ಲ ಎಂದಿತ್ತು.ಅದರ ಕಿಚ್ಚಿಗಾಗಿ ಮೇಲಿಂದ ಮೇಲೆ ಅಮೇರಿಕಕ್ಕೆ ಹೋಗುತ್ತಿದ್ದಾರೆ.ಜಗತ್ತಿನ ಭೂಪಟವನ್ನು ಕಣ್ಣ ಮುಂದಿಟ್ಟುಕೊಂಡು ನೋಡದ ದೇಶಗಳನ್ನು ತಿರುಗುವುದೇ ಇವರ ಹವ್ಯಾಸವಾಗಿದೆ ಎಂದರು.

ಇವರ ವಿದೇಶಾಂಗ ನೀತಿ ಸಂಪೂರ್ಣ ವಿಫಲವಾಗಿದೆ.ಯಾಕೆಂದರೆ ನೆರೆಯ ಚೀನಾ ಹಾಗೂ ಪಾಕಿಸ್ತಾನಗಳ ಜತೆಗಿನ ಸಂಬಂಧ ಹದಗೆಟ್ಟಿದೆ.ನೇಪಾಳ ಕೂಡಾ ನಮ್ಮಲ್ಲಿಗೆ ಬರಬೇಡಿ ಎಂದು ಹೇಳುತ್ತಿದೆ.ಟಿಬೇಟ್‌ನಿಂದ ಪಾಕ್ ಆಕ್ರಮಿತ ಕಾಶ್ಮೀರದವರೆಗೆ 800 ಕಿಲೋಮೀಟರ್ ರಸ್ತೆ ನಿರ್ಮಿಸುವ ಮೂಲಕ ಚೀನಾದವರು ನೇರವಾಗಿ ಪಾಕ್ ಗಡಿಯ ತನಕ ತಲುಪುತ್ತಿದ್ದಾರೆ.

ಹೀಗೆ ಅವರು ಪಾಕ್ ಗಡಿಯನ್ನು ಮುಟ್ಟಿದರೆ ಭಾರತದ ಗಡಿಯನ್ನು ಮುಟ್ಟಿದಂತೆಯೇ.ಆದರೆ ಇದನ್ನರಿಯದ ಮೋದಿ ಅಹ್ಮದಾಬಾದ್‌ನಲ್ಲಿ ಕುಳಿತು ಚೀನಾ ನಿಯೋಗದ ಜತೆ ಮಾತನಾಡುತ್ತಾರೆ.ಇದನ್ನು ಯಾರಾದರೂ ವಿದೇಶಾಂಗ ನೀತಿ ಎನ್ನುತ್ತಾರಾ?ಅಂತ ವ್ಯಂಗ್ಯವಾಡಿದರು.

ಇಷ್ಟಾದರೂ ಕೇವಲ ಸುಳ್ಳು ಪ್ರಚಾರ,ಜಾಹೀರಾತುಗಳ ಮೂಲಕ ಎರಡು ವರ್ಷಗಳನ್ನು ಮೋದಿ ಸರ್ಕಾರ ಪೂರೈಸಿದೆ.ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಫ್ಟರ್‌ಗಳ ಖರೀದಿಯಲ್ಲಿ ಅವ್ಯವಹಾರವಾಗಿದೆ ಎಂಬ ಆರೋಪಗಳ ಕುರಿತು ತನಿಖೆ ನಡೆಸುವಂತೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವೇ ಆದೇಶಿಸಿತ್ತು.ಆದರೆ ಈಗ ಇವರು ರಾಜಕೀಯ ಮಾಡುತ್ತಿದ್ದಾರೆ.

ಇವತ್ತು ಒಂಭತ್ತು ಸಾವಿರ ಕೋಟಿ ರೂ.ಗಳಷ್ಟು ಹಣವನ್ನು ಬ್ಯಾಂಕುಗಳಿಂದ ಸಾಲ ಎತ್ತಿ ವಿಜಯ ಮಲ್ಯ ದೇಶ ಬಿಟ್ಟು ಓಡಿ ಹೋದರು.ಅವರು ಓಡಿ ಹೋಗಲು ಬಿಜೆಪಿಯವರೇ ನೆರವು ನೀಡಿದರು ಎಂದು ಆರೋಪಿಸಿದರು.

ಇದೇ ರೀತಿ ಐಪಿಎಲ್ ಹಗರಣದ ಆರೋಪಿ ಲಲಿತ್ ಮೋದಿ ದೇಶ ಬಿಟ್ಟು ಓಡಿ ಹೋಗಲು ಇವತ್ತು ಕೇಂದ್ರದ ವಿದೇಶಾಂಗ ಸಚಿವೆಯಾಗಿರುವ ಸುಷ್ಮಾ ಸ್ವರಾಜ್ ಅವರೇ ಕಾರಣ.ಈ ವಿಷಯದಲ್ಲಿ ಜಾಣ ಕುರುಡು ತೋರಿಸುತ್ತಿರುವ ಬಿಜೆಪಿ ನಾಯಕರು ಇನ್ನೊಬ್ಬರ ಮೇಲೆ ದೂರುತ್ತಾ ಕೂರುವುದು ಸರಿಯಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News