ರಕ್ಷಣಾ ಉತ್ಪಾದನೆ ಕ್ಷೇತ್ರದತ್ತ ರಿಲಯನ್ಸ್ ಹೆಜ್ಜೆ

Update: 2016-05-30 15:16 GMT

ಹೊಸದಿಲ್ಲಿ/ಮುಂಬೈ, ಮೇ 30: ಅನಿಲ್ ಅಂಬಾನಿಯವರ ರಿಲಯನ್ಸ್ ಗುಂಪು ತನ್ನ ಚರಿತ್ರೆಯಲ್ಲೇ ಸೇನಾ ಹೆಲಿಕಾಪ್ಟರ್, ಕ್ಷಿಪಣಿ ವ್ಯವಸ್ಥೆ ಅಥವಾ ಜಲಾಂತರ್ಗಾಮಿಗಳನ್ನು ನಿರ್ಮಿಸಿಲ್ಲ. ಆದರೆ, ಇದು ಇಂತಹ ಎಲ್ಲ ಸೇನಾ ಪರಿಕರಗಳ ಉತ್ಪಾದನೆಯ ಗುತ್ತಿಗೆಗಳನ್ನು ಗೆಲ್ಲುವ ಭಾರತೀಯ ಉದ್ಯಮಿಯ ಆಸೆಗೆ ತಡೆಯಾಗಿಲ್ಲ.
ಕಳೆದ ದಶಕದಲ್ಲಿ ಹಲವು ಸಾಹಸಗಳಿಗೆ ಕೈಹಾಕಿದ್ದ ಹಾಗೂ ಕೆಲವದರಲ್ಲಿ ವಿಫಲರಾಗಿದ್ದ ಅಂಬಾನಿ, ರಿಲಯನ್ಸನ್ನು ಭಾರೀ ರಕ್ಷಣಾ ಉತ್ಪಾದನೆ ಕಂಪೆನಿಯನ್ನಾಗಿ ಪರಿವರ್ತಿಸುವ ಧೈರ್ಯದ ಹೆಜ್ಜೆಯಿರಿಸಿದ್ದಾರೆ. ಅದು ಈಗಾಗಲೇ ರೂ. 840 ಶತಕೋಟಿಯ ಸರಕಾರಿ ಗುತ್ತಿಗೆಗಳಿಗೆ ಬಿಡ್ ಸಲ್ಲಿಸಿದೆ. ಆದರೆ, ಅವುಗಳಲ್ಲಿ ಯಾವುದನ್ನೂ ಇದುವರೆಗೆ ಗೆದ್ದಿಲ್ಲವೆಂದು ಹಿರಿಯ ಕಾರ್ಯವಾಹಿಯೊಬ್ಬರು ತಿಳಿಸಿದ್ದಾರೆ.
 ಆದರೆ, ಅವರ ಕಾರ್ಯವ್ಯೆದ ಯಶಸ್ಸು, ತಾನು ಅತ್ಯಾಧುನಿಕ ಉಪಕರಣಗಳನ್ನು ತಯಾರಿಸಬಲ್ಲೆನೆಂಬುದನ್ನು ಸರಕಾರಿ ಅಧಿಕಾರಿಗಳು ಹಾಗೂ ಅಂತಾರಾಷ್ಟ್ರೀಯ ಪಾಲುದಾರರ ಮನವೊಲಿಸುವ ಸಾಮರ್ಥ್ಯವನ್ನು ಭಾಗಶಃ ಅವಲಂಬಿಸಿದೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಭಾರತದ ಕುಖ್ಯಾತ ನಿಧಾನಗತಿಯ ರಕ್ಷಣಾ ಖರೀದಿ ಪ್ರಕ್ರಿಯೆಗೆ ವೇಗ ನೀಡುವರೇ ಎಂಬುದು ಸಹ ಅದರ ನಿರ್ಧಾರಕವಾಗಿದೆ.
ಪ್ರಧಾನಿ ಮೋದಿ ತನ್ನ ‘ಮೇಕ್ ಇನ್ ಇಂಡಿಯಾ’ ಯೋಜನೆಯಲ್ಲಿ ರಕ್ಷಣಾ ಉಪಕರಣಗಳಿಗೆ ಆದ್ಯತೆ ನೀಡಿದ್ದಾರೆ. ಸ್ಥಳೀಯ ಪಾಲುದಾರರನ್ನು ಪಡೆದು, ತಂತ್ರಜ್ಞಾನ ವರ್ಗಾವಣೆ ಮಾಡಿ, ಕೆಲವು ಉತ್ಪಾದನೆಗಳನ್ನು ಭಾರತಕ್ಕೆ ನೀಡುವಂತೆ ಅವರು ವಿದೇಶಿ ಕಂಪೆನಿಗಳನ್ನು ಒತ್ತಾಯಿಸಿದ್ದಾರೆ.
ಮುಂದಿನ 10 ವರ್ಷಗಳಲ್ಲಿ ಸರಕಾರವು ಸೇನೆಯ ಬಲವರ್ಧನೆಗಾಗಿ 250 ಶತಕೋಟಿ ಡಾಲರ್‌ಗಳ ರಕ್ಷಣಾ ಗುತ್ತಿಗೆಗಳನ್ನು ನೀಡುವ ನಿರೀಕ್ಷೆಯಿದೆ. ಅದರಲ್ಲಿ ಗಣನೀಯ ಭಾಗ ತಮಗೆ ದೊರೆಯಬಹುದೆಂಬ ಆಶಾವಾದವಿದೆಯೆಂದು ರಿಲಯನ್ಸ್ ಡಿಫೆನ್ಸ್‌ನ ಮುಖ್ಯ ಕಾರ್ಯಕಾರಿ ಆರ್.ಕೆ. ಧಿಂಗ್ರಾ ಹೇಳಿದ್ದಾರೆ.
ಆದರೆ, ಈ ವಿಭಾಗದಲ್ಲಿ ಬೇಗನೆ ಹಣವಾಗುವುದಿಲ್ಲ. ಅದಕ್ಕೆ ಅಪಾರ ಅನುಭವ, ಉನ್ನತಿ ತಾಂತ್ರಿಕ ಸಂಸ್ಕೃತಿ, ಬಂಡವಾಳ ಹಾಗೂ ದೀರ್ಘಾವಧಿ ವ್ಯವಹಾರ ಯೋಜನೆ ಬೇಕೆಂದು ಸಾಬ್ ಇಂಡಿಯಾ ಟೆಕ್ನಾಲಜೀಸ್‌ನ ಮುಖ್ಯಸ್ಥ ಜಾನ್ ವೈಡರ್ ಸ್ಟ್ರೋಮ್ ಅಭಿಪ್ರಾಯಿಸಿದ್ದಾರೆ.
ಆದರೂ, ಸಾಬ್ ಹಾಗೂ ರಿಲಯನ್ಸ್, ಭಾರತೀಯ ಜಲಸೇನೆ ಹಾಗೂ ತಟ ರಕ್ಷಕ ಪಡೆಗಾಗಿ ಮುಂದಿನ ತಲೆಮಾರಿನ ಯುದ್ಧ ಪ್ರಬಂಧನ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಒಟ್ಟಾಗಿ ಕೆಲಸ ಮಾಡುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News