ಪೊಲೀಸರು ಮುಷ್ಕರಕ್ಕೆ ಮುಂದಾದರೆ ‘ಎಸ್ಮಾ’ ಜಾರಿ
ಬೆಂಗಳೂರು, ಜೂ. 1: ‘ಸಾರ್ವಜನಿಕ ಸುವ್ಯವಸ್ಥೆ ಮತ್ತು ಪೊಲೀಸ್ ಸೇವೆ’ಗೆ ಸೇರಿದ ಎಲ್ಲ್ಲ ಸೇವೆ ಮತ್ತು ಉದ್ಯೋಗ ವರ್ಗಗಳನ್ನು ‘ಅತ್ಯಾವಶ್ಯಕ ಸೇವೆ’ ಎಂದು ಘೋಷಿಸಿದ್ದು, ಜೂ.4ರಂದು ಮುಷ್ಕರಕ್ಕೆ ಮುಂದಾಗುವ ಪೊಲೀಸ್ ಸಿಬ್ಬಂದಿ ವಿರುದ್ಧ ‘ಎಸ್ಮಾ’ ಜಾರಿಗೊಳಿಸಲಾಗುವುದು ಎಂದು ಪರೋಕ್ಷ ಎಚ್ಚರಿಕೆ ನೀಡಲಾಗಿದೆ.
ಪೊಲೀಸ್ ಸೇವೆಗೆ ಸೇರಿದ ಸಿಬ್ಬಂದಿಯು ಯಾವುದೇ ವಿಧವಾದ ಮುಷ್ಕರ ಹೂಡುವುದರಿಂದ ಸಾರ್ವಜನಿಕ ಸುವ್ಯವಸ್ಥೆ ಮತ್ತು ಸುರಕ್ಷತೆಗೆ ಧಕ್ಕೆ ಉಂಟಾಗಿ ಸಮಾಜದ ಸ್ವಾಸ್ಥ್ಯದ ಮೇಲೆ ತೀವ್ರ ದುಪ್ಪರಿಣಾಮ (ಕಳ್ಳತನ, ಕೊಲೆ, ಅತ್ಯಾಚಾರ, ಸುಲಿಗೆ, ದರೋಡೆ ಇನ್ನೂ ಮುಂತಾದ ಅಪರಾಧಗಳಿಂದ) ಬೀರಲಿದೆ.
ಆದುದರಿಂದ ಸಾರ್ವಜನಿಕ ಸುವ್ಯವಸ್ಥೆ ಮತ್ತು ಸುರಕ್ಷತೆ ದೃಷ್ಟಿಯಿಂದ ಕರ್ನಾಟಕ ಅತ್ಯಾವಶ್ಯಕ ಸೇವೆಗಳ ನಿರ್ವಹಣಾ ಅಧಿನಿಯಮ, 2013 (2015 ರ ಕರ್ನಾಟಕ ಅಧಿನಿಯಮ 25) ರ 3ನೇ ಪ್ರಕರಣದಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಸರಕಾರವು ಪೊಲೀಸ್ ಸೇವೆಗೆ ಸೇರಿದ ಎಲ್ಲ ಸಿಬ್ಬಂದಿಯು ಮುಷ್ಕರ ಹೂಡುವುದನ್ನು ನಿಷೇಧಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಮುಷ್ಕರನಿರತ ಪೊಲೀಸ್ ವಿರುದ್ಧ ಕ್ರಮ: ಸಂವಿಧಾನ ಅನುಸೂಚಿ 7ರಲ್ಲಿನ 2ನೆ ಪಟ್ಟಿಯಲ್ಲಿರುವ ‘ಸಾರ್ವಜನಿಕ ಸುವ್ಯವಸ್ಥೆ’ ಮತ್ತು ‘ಪೊಲೀಸ್’ ಸಂಬಂಧಿಸಿದ ಎಲ್ಲ ಸೇವೆಗಳ ಕುರಿತು ರಾಜ್ಯ ಶಾಸನಾಂಗವು ಕಾನೂನು ರೂಪಿಸುವ ಅಧಿಕಾರ ಹೊಂದಿರುತ್ತದೆ.
ಅಪರಾಧ ಪತ್ತೆ ಹಾಗೂ ಸಾರ್ವಜನಿಕ ಸುವ್ಯವಸ್ಥೆಯ ನಿರ್ವಹಣೆಯೊಂದಿಗೆ ನಾಗರಿಕರ ಆಸ್ತಿ ಮತ್ತು ಜೀವವನ್ನು ರಕ್ಷಿಸುವುದು ಪೊಲೀಸ್ ಸಿಬ್ಬಂದಿಯ ಮೂಲ ಅತ್ಯಾವಶ್ಯಕ ಕರ್ತವ್ಯ. ಪೊಲೀಸ್ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯು ಕಾರ್ಯನಿರ್ವಹಿಸಲು ನಿರಾಕರಿಸಿದಲ್ಲಿ, ಸಾರ್ವಜನಿಕ ಸುವ್ಯವಸ್ಥೆ ಮತ್ತು ಸುರಕ್ಷತೆಗೆ ದಕ್ಕೆ ಉಂಟಾಗಿ, ಸಮಾಜದ ಸ್ವಾಸ್ಥ್ಯದ ಮೇಲೆ ತೀವ್ರ ದುಪ್ಪರಿಣಾಮ ಹೆಚ್ಚಾಗಿ ಸಾರ್ವಜನಿಕರ ಸುಗಮ ಜೀವನವು ಅಸ್ತವ್ಯಸ್ತವಾಗುವುದೆಂದು ಸರಕಾರ ಅಭಿಪ್ರಾಯಪಟ್ಟಿದೆ.
ಆದುದರಿಂದ ಸಾರ್ವಜನಿಕ ಸುವ್ಯವಸ್ಥೆ ಮತ್ತು ಸುರಕ್ಷತೆ ದೃಷ್ಟಿಯಿಂದ ಕರ್ನಾಟಕ ಅತ್ಯಾವಶ್ಯಕ ಸೇವೆಗಳ ನಿರ್ವಹಣೆ ಅದಿನಿಯಮ, 20(2015ರ ಕರ್ನಾಟಕ ಅಧಿನಿಯಮ 25) ರ 2ನೆ ಪ್ರಕರಣದ (1)ನೆ ಉಪ ಪ್ರಕರಣದ ಖಂಡದಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ರಾಜ್ಯ ಸರಕಾರವು ಪೊಲೀಸ್ ಸೇವೆಗೆ ಸೇರಿದ ಎಲ್ಲ್ಲ ಸೇವೆ ಮತ್ತು ಉದ್ಯೋಗ ವರ್ಗಗಳನ್ನು ಈ ಕಾಯ್ದೆಯ ಉದ್ದೇಶಗಳಿಗಾಗಿ ಅತ್ಯಾವಶ್ಯಕ ಸೇವೆ ಎಂದು ಪರಿಗಣಿಸಿ ಕೂಡಲೇ ಜಾರಿಗೆ ಬರುವಂತೆ ಈ ಮೂಲಕ ಘೋಷಿಸಿ ಆದೇಶ ಹೊರಡಿಸಿದೆ.