19 ವರ್ಷ ಪಾರ್ಶ್ವವಾಯುಪೀಡಿತ ಮನೆಗೆಲಸದಾಕೆಯ ಆರೈಕೆ ಮಾಡಿದ ಸೌದಿ ದಂಪತಿ!

Update: 2016-06-07 09:54 GMT

ಜಿದ್ದಾ, ಜೂ.7: ಹತ್ತೊಂಬತ್ತು ವರ್ಷಗಳಿಂದ ಪಾರ್ಶ್ವವಾಯು ಪೀಡಿತರಾಗಿರುವ ಮನೆಗೆಲಸದಾಕೆಯ ಆರೈಕೆ ಮಾಡಿದ ಉದಾರ ದಂಪತಿಯ ಅಪರೂಪದ ಕಥೆ ಇದು. ಸೌದಿ ಅರೇಬಿಯಾದ ಸಲಾಹ್ ಅಲ್-ಸೌಫಿ ದಂಪತಿ ಈ ಅಪರೂಪದ ಮಾನವೀಯತೆ ಮೆರೆದು ಆದರ್ಶಪ್ರಾಯರಾಗಿದ್ದಾರೆ.

ಇಥಿಯೋಪಿಯಾ ಮೂಲದ ಮನೆಗೆಲಸದಾಕೆ ಸೌಫಿ ಕುಟುಂಬದಲ್ಲಿ ಕೆಲಸದಲ್ಲಿದ್ದಾಗ ಪಾರ್ಶ್ವವಾಯು ಪೀಡಿತರಾದರು. ಅಸ್ವಸ್ಥಗೊಂಡ ತಕ್ಷಣ ಮನೆಗೆ ಹೋಗುವ ಬದಲು ಸಾಯುವವರೆಗೂ ಇಲ್ಲೇ ಇರುವ ಇಂಗಿತ ವ್ಯಕ್ತಪಡಿಸಿದರು. ಕೆಲಸದಾಕೆಯ ದೈನ್ಯ ಬೇಡಿಕೆಗೆ ದಂಪತಿಯ ಮನಕರಗಿ, ಆಕೆಗೆ ಚಿಕಿತ್ಸೆ ಕೊಡಿಸಿದ್ದು ಮಾತ್ರವಲ್ಲದೇ, ಕುಟುಂಬದ ಒಬ್ಬ ಸದಸ್ಯರಂತೆ ಪ್ರೀತಿಯಿಂದ ಆರೈಕೆ ಮಾಡುತ್ತಾ ಬಂದಿದ್ದಾರೆ.

ಆಕೆ ಮನೆಗೆ ಸೇರಿಕೊಂಡ ಘಟನೆಯೂ ಕುತೂಹಲಕಾರಿ. ಅದನ್ನು ಸೌಫಿಯವರ ಮಾತಲ್ಲೇ ಕೇಳೋಣ. "ನನ್ನ ಸ್ನೇಹಿತನೊಬ್ಬ ಮನೆಕೆಲಸಕ್ಕೆ ಇಥಿಯೋಪಿಯಾ ಮಹಿಳೆಯೊಬ್ಬರನ್ನು ನೇಮಕ ಮಾಡಿಕೊಂಡ. ಇದಾದ ಕೆಲವೇ ತಿಂಗಳುಗಳಲ್ಲಿ, ಆಕೆ ಪಾರ್ಶ್ವವಾಯು ಪೀಡಿತಳಾಗಿ ಕಾಲಿಗೆ ಚಿಕಿತ್ಸೆ ಪಡೆದಳು. ಆ ಸಂಪೂರ್ಣ ವೆಚ್ಚವನ್ನು ಸ್ನೇಹಿತ ಭರಿಸಿದ. ಸ್ನೇಹಿತನ ಮನವಿ ಮೇರೆಗೆ ಈಕೆಯ ಚಿಕಿತ್ಸೆಗೆ ಅಲ್‌ಸೌಫಿ ಕೂಡಾ ಕೊಡುಗೆ ನೀಡಿದರು.

ಆಕೆಯ ಕೆಲಸದ ವೀಸಾವನ್ನು ಪರಿಷ್ಕರಿಸಲು ಸ್ನೇಹಿತ ನಿರಾಕರಿಸಿದ ಬಳಿಕ, ಕೆಲಸದಾಕೆ, ಅಲ್‌ಸೌಫಿ ಕುಟುಂಬವನ್ನು ಭೇಟಿ ಮಾಡುವ ಇಂಗಿತ ವ್ಯಕ್ತಪಡಿಸಿದಳು. ಆಸ್ಪತ್ರೆಗೆ ದಂಪತಿ ಭೇಟಿ ನೀಡಿದಾಗ ದೈನ್ಯದಿಂದ ತನ್ನ ಚಿಕಿತ್ಸೆಗೆ ನೆರವಾಗುವಂತೆ ಕೋರಿದಳು. ನಾವು ಅದಕ್ಕೆ ಒಪ್ಪಿಅಗತ್ಯ ಕಾಗದಪತ್ರಗಳನ್ನು ಸಿದ್ಧ ಮಾಡಿದೆವು. ಅಲ್ಲಿಂದ ಆಕೆಯ ಸೇವೆಯಲ್ಲಿದ್ದೇವೆ. ನನ್ನ ಪತ್ನಿ ಆಕೆಯ ಎಲ್ಲ ಅಗತ್ಯಗಳನ್ನು ಪೂರೈಸುತ್ತಿದ್ದಾಳೆ. ಆಕೆಗೆ ತಿನ್ನಿಸುವಲ್ಲಿಂದ ಹಿಡಿದು, ಸ್ನಾನ ಮಾಡಿಸುವುದು, ಬಟ್ಟೆ ಧರಿಸಿಕೊಳ್ಳಲು ಸಹಕರಿಸುವುದು ಹೀಗೆ ಸ್ವಂತ ಸಹೋದರಿಯಂತೆ ನೋಡಿಕೊಳ್ಳುತ್ತಿದ್ದಾರೆ" ಎಂದು ಅಲ್ ಸೌಫಿ ವಿವರಿಸುತ್ತಾರೆ.

ಹಲವು ಮಂದಿ ಇದನ್ನು ಹೊರೆ ಎಂದು ಪರಿಗಣಿಸುತ್ತಾರೆ. ಆದರೆ ಆಕೆಗೆ ನೀಡಿದ ನೆರವಿನಲ್ಲಿ ಸಿಕ್ಕಿದ ಆನಂದಕ್ಕೆ ಹೋಲಿಸಿದರೆ, ನಾವು ಆಕೆಗೆ ನೀಡಿದ್ದು ಕಡಿಮೆ. ನಾವು ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದೆವು. ಇದೀಗ ವಿಲ್ಲಾ ಹೊಂದಿದ್ದೇವೆ ಎಂದು ಅವರು ವಿವರಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News