ಚಂಡಮಾರುತಕ್ಕೆ ಮಧ್ಯಪ್ರಾಚ್ಯ ಆರ್ಥಿಕ ಕೇಂದ್ರ ತತ್ತರ: ಯುಎಇ-ಭಾರತದ ನಡುವಿನೆ 28 ವಿಮಾನಗಳ ಸಂಚಾರ ರದ್ದು

Update: 2024-04-17 09:05 GMT

Screengrab: X/PTI

ದುಬೈ: ಮಧ್ಯಪ್ರಾಚ್ಯದ ಆರ್ಥಿಕ ಕೇಂದ್ರವಾದ ದುಬೈ, ಭಾರೀ ಮಳೆ ಮತ್ತು ಚಂಡಮಾರುತದಿಂದ ತತ್ತರಿಸಿದೆ. ಎಡೆಬಿಡದೆ ಸುರಿದ ಮಳೆಯಿಂದಾಗಿ ಯುಎಇಯಾದ್ಯಂತ ವ್ಯಾಪಕವಾದ ಪ್ರವಾಹದ ಸ್ಥಿತಿ ಉಂಟಾಗಿದ್ದು ಭಾರತ ಮತ್ತು ಯುಎಇ ನಡುವಿನ 28 ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ.

ಭಾರತೀಯ ವಾಯುಯಾನ ಅಧಿಕಾರಿಗಳು ದುಬೈಗೆ ಹೋಗುವ ಸುಮಾರು 15 ವಿಮಾನಗಳನ್ನು ರದ್ದುಗೊಳಿಸಿದ್ದಾರೆ, ಅದೇ ವೇಳೆ ಭಾರತಕ್ಕೆ ಬರಬೇಕಿದ್ದ 13 ವಿಮಾನಗಳನ್ನು ರದ್ದುಗೊಳಿಸಲಾಗಿದೆ.

1949 ರ ಬಳಿಕ ಇದೇ ಮೊದಲ ಬಾರಿಗೆ ಯುಎಇಯಲ್ಲಿ ದಾಖಲೆ ಪ್ರಮಾಣದ ಮಳೆ ಸುರಿದಿದ್ದು, ವಿಮಾನಗಳ ವಿಳಂಬ ಅಥವಾ ಮಾರ್ಗ ಬದಲಾವಣೆಗೆ ಕಾರಣವಾಗಿದೆ. ಕಾರುಗಳು ಜಲಾವೃತಗೊಂಡ ರಸ್ತೆಗಳಲ್ಲಿ ಸಿಲುಕಿಕೊಂಡಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿವೆ.

"ವಿಮಾನಗಳು ವಿಳಂಬವಾಗುತ್ತಿವೆ ಹಾಗೂ ಬೇರೆಡೆಗೆ ತಿರುಗಿಸಲ್ಪಡುತ್ತಿವೆ. ನಾವು ಅತ್ಯಂತ ಸವಾಲಿನ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದು, ಸಾಧ್ಯವಾದಷ್ಟು ಬೇಗ ಕಾರ್ಯಾಚರಣೆ ಚೇತರಿಸಿಕೊಳ್ಳಲು ಶ್ರಮಿಸುತ್ತಿದ್ದೇವೆ" ಎಂದು ದುಬೈ ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.

ದುಬೈನ ಪ್ರಮುಖ ಎಮಿರೇಟ್ಸ್ ಏರ್‌ಲೈನ್ ದುಬೈನಲ್ಲಿ ಹವಾಮಾನ ವೈಪರೀತ್ಯವು ಪ್ರಯಾಣದ ಅವ್ಯವಸ್ಥೆಗೆ ಕಾರಣವಾಗಿರುವುದರಿಂದ ಪ್ರಯಾಣಿಕರಿಗೆ ಎಲ್ಲಾ ಚೆಕ್-ಇನ್‌ಗಳನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ. "ನಮ್ಮ ನಿಗದಿತ ಕಾರ್ಯಾಚರಣೆಗಳನ್ನು ಪುನಃಸ್ಥಾಪಿಸಲು ಎಮಿರೇಟ್ಸ್ ಶ್ರಮಿಸುತ್ತಿದೆ ಮತ್ತು ನಮ್ಮ ತಂಡಗಳು ಪೀಡಿತ ಗ್ರಾಹಕರಿಗೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ಒದಗಿಸುತ್ತವೆ" ಎಂದು ಎಮಿರೇಟ್ಸ್ ಏರ್‌ಲೈನ್ ಹೇಳಿಕೆಯಲ್ಲಿ ತಿಳಿಸಿದೆ.

ಪ್ರಮುಖ ಶಾಪಿಂಗ್ ಸೆಂಟರ್‌ಗಳಾದ ದುಬೈ ಮಾಲ್ ಮತ್ತು ಮಾಲ್ ಆಫ್ ಎಮಿರೇಟ್ಸ್ ಎರಡೂ ಪ್ರವಾಹಕ್ಕೆ ಸಿಲುಕಿದ್ದು, ಮೆಟ್ರೋ ನಿಲ್ದಾಣಗಳಿಗೂ ನೀರು ನುಗ್ಗಿದೆ. ರೆಡ್ ಮತ್ತು ಗ್ರೀನ್ ಲೈನ್‌ಗಳಲ್ಲಿನ ನಿಲ್ದಾಣಗಳಲ್ಲಿ ನಿರ್ವಹಣಾ ಕಾರ್ಯ ನಡೆಯುತ್ತಿರುವುದರಿಂದ ಸದ್ಯ, ಕೆಲವು ಮಾರ್ಗಗಳಲ್ಲಿ ಮೆಟ್ರೋ ರೈಲುಗಳು ಕಾರ್ಯನಿರ್ವಹಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಂಡಮಾರುತದ ಪ್ರಭಾವವು ದುಬೈನ ಆಚೆಗೂ ವಿಸ್ತರಿಸಿದ್ದು, ಇಡೀ ಯುಎಇ ಮತ್ತು ನೆರೆಯ ಬಹ್ರೇನ್ ಪ್ರವಾಹ ಮತ್ತು ಅವ್ಯವಸ್ಥೆಯಿಂದ ತತ್ತರಿಸಿದೆ. ಶಾಲೆಗಳನ್ನು ಮುಚ್ಚಲಾಗಿದ್ದು, ಸರ್ಕಾರಿ ನೌಕರರಿಗೆ ರಿಮೋಟ್ ಕೆಲಸದ ವ್ಯವಸ್ಥೆಯನ್ನು ವಿಸ್ತರಿಸಲಾಗಿದೆ.

ಒಮನ್‌ಗೆ ಅಪ್ಪಳಿಸಿದ ನಂತರ ಯುಎಇ ಮತ್ತು ಬಹ್ರೇನ್‌ಗೆ ಚಂಡಮಾರುತ ಅಪ್ಪಳಿಸಿದ್ದು, ಅಲ್ಲಿ ಹಲವಾರು ಮಕ್ಕಳು ಸೇರಿದಂತೆ 18 ಜನರು ಸಾವನ್ನಪ್ಪಿದರು. 1949 ರ ನಂತರ ಇದು ಅತ್ಯಧಿಕ ಮಳೆಯಾಗಿದೆ ಎಂದು ಯುಎಇ ಅಧಿಕೃತ ಮಾಧ್ಯಮ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News