ಪ್ರವಾಹದಿಂದ ಯುಎಇ ತತ್ತರ: ಭಾರತೀಯರು ಅನಗತ್ಯ ಪ್ರಯಾಣ ಮುಂದೂಡುವಂತೆ ಭಾರತೀಯ ರಾಯಭಾರ ಕಚೇರಿ ಸಲಹೆ

Update: 2024-04-19 10:52 GMT

ಸಾಂದರ್ಭಿಕ ಚಿತ್ರ | PC : PTI 

ಹೊಸದಿಲ್ಲಿ: ದುಬೈ ಈ ವಾರ ಅಭೂತಪೂರ್ವ ಮಳೆಗೆ ಸಾಕ್ಷಿಯಾಗಿದ್ದು,ನಗರವು ಐತಿಹಾಸಿಕ ಪ್ರವಾಹದಿಂದ ತತ್ತರಿಸಿದೆ. ಈ ಹಿನ್ನೆಲೆಯಲ್ಲಿ ಸಾಮಾನ್ಯ ಪರಿಸ್ಥಿತಿ ಮರಳುವವರೆಗೂ ತಮ್ಮ ಅನಗತ್ಯ ಪ್ರವಾಸವನ್ನು ಮುಂದೂಡುವಂತೆ ದುಬೈಗೆ ಆಗಮಿಸುವ ಅಥವಾ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸುವ ಭಾರತೀಯರಿಗೆ ಯುಎಇಯಲ್ಲಿನ ಭಾರತಿಯ ರಾಯಭಾರ ಕಚೇರಿಯು ಶುಕ್ರವಾರ ಸಲಹೆ ನೀಡಿದೆ.

ದುಬೈ ಮತ್ತು ಸುತ್ತುಮುತ್ತಲಿನ ಪ್ರದೇಶಗಳಲ್ಲಿ ಭಾರೀ ಪ್ರವಾಹಕ್ಕೆ ಕಾರಣವಾಗಿರುವ ಈ ವಾರದ ದಾಖಲೆ ಮಳೆಯ ಹೊಡೆತದಿಂದ ಚೇತರಿಸಿಕೊಳ್ಳಲು ಯುಎಇ ಪ್ರಯತ್ನಿಸುತ್ತಿದೆ.

ನಿರ್ಗಮನ ದಿನಾಂಕ ಮತ್ತು ವಿಮಾನಗಳ ಸಮಯಕ್ಕೆ ಸಂಬಂಧಿಸಿದಂತೆ ಆಯಾ ವಿಮಾನಯಾನ ಸಂಸ್ಥೆಗಳಿಂದ ಅಂತಿಮ ದೃಢೀಕರಣದ ಬಳಿಕವೇ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಹುದು ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ಸೂಚಿಸಿದ್ದಾರೆ.

ಪ್ರತಿಕೂಲ ಹವಾಮಾನದಿಂದಾಗಿ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಒಳಬರುವ ವಿಮಾನಯಾನಗಳ ಸಂಖ್ಯೆಯನ್ನು ತಾತ್ಕಾಲಿಕವಾಗಿ ಸೀಮಿತಗೊಳಿಸಿದೆ.

ಅಂತರರಾಷ್ಟ್ರೀಯ ಪ್ರಯಾಣಕ್ಕಾಗಿ ವಿಶ್ವದ ಅತ್ಯಂತ ವ್ಯಸ್ತ ವಿಮಾನ ನಿಲ್ದಾಣವಾಗಿರುವ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಕಾರ್ಯಾಚರಣೆಗಳು 24 ಗಂಟೆಗಳಲ್ಲಿ ಸಹಜ ಸ್ಥಿತಿಗೆ ಮರಳುವ ಭರವಸೆಯನ್ನು ಹೊಂದಿದೆ.

ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರತೀಯ ಪ್ರಜೆಗಳಿಗೆ ನೆರವಾಗಲು ನಗರದಲ್ಲಿಯ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ ಎ.17ರಿಂದ ತುರ್ತು ಸಹಾಯವಾಣಿ ಸೇವೆಗಳನ್ನು ಸಕ್ರಿಯಗೊಳಿಸಿದ್ದಾರೆ ಎಂದು ರಾಯಭಾರ ಕಚೇರಿಯು ಹೇಳಿಕೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News