ಮುಂಬೈ ದಾಳಿಗೆ ಪಾಕ್ ಕಾರಣ ಎಂದು ಬಹಿರಂಗವಾಗಿ ಒಪ್ಪಿದ ಚೀನಾ

Update: 2016-06-07 13:13 GMT

ಹಾಂಕಾಂಗ್, ಜೂ. 7: ಮಹತ್ವದ ಬೆಳವಣಿಗೆಯೊಂದರಲ್ಲಿ, ಮುಂಬೈಯಲ್ಲಿ 2008 ನವೆಂಬರ್ 26ರಿಂದ 29ರವರೆಗೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಪಾತ್ರವಿರುವುದನ್ನು ಚೀನಾ ಮೊದಲ ಬಾರಿಗೆ ಸಾರ್ವಜನಿಕವಾಗಿ ಒಪ್ಪಿಕೊಂಡಿದೆ.

ಈ ದಾಳಿಯಲ್ಲಿ 164 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ 308 ಮಂದಿ ಗಾಯಗೊಂಡಿದ್ದಾರೆ.

ಜಗತ್ತನ್ನೇ ತಲ್ಲಣಿಸಿದ ಈ ಭಯಾನಕ ದಾಳಿಯಲ್ಲಿ ಲಷ್ಕರೆ ತಯ್ಯಬ ಮತ್ತು ಪಾಕಿಸ್ತಾನದಲ್ಲಿರುವ ಅದರ ಪೋಷಕರ ಪಾತ್ರವನ್ನು ಇತ್ತೀಚೆಗೆ ಪ್ರಸಾರಗೊಂಡ ಸಾಕ್ಷಚಿತ್ರವೊಂದರಲ್ಲಿ ಚೀನಾದ ಸರಕಾರಿ ಟೆಲಿವಿಶನ್ ಸಿಸಿಟಿವಿ9 ಎತ್ತಿ ತೋರಿಸಿದೆ.

ಲಷ್ಕರೆ ತಯ್ಯಬ/ಜಮಾತ್ ಉದ್-ದಾವ ಸಂಘಟನೆಯ ಮೂವರು ಭಯೋತ್ಪಾದಕರಾದ ಹಫೀಝ್ ಅಬ್ದುಲ್ ರಹಮಾನ್ ಮಕ್ಕಿ, ತಲ್ಹ ಸಯೀದ್ ಮತ್ತು ಹಫೀಝ್ ಅಬ್ದುಲ್ ರವೂಫ್ ಎಂಬವರನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸುವ ನಿರ್ಧಾರಕ್ಕೆ ಚೀನಾ ಈಗಾಗಲೇ ತಡೆ ಹೇರಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಚೀನಾದ ಈ ನಿರ್ಧಾರದ ವಾಯಿದೆ ಜೂನ್ 9ರಂದು ಮುಗಿಯಲಿದೆ. ಈ ಹಿನ್ನೆಲೆಯಲ್ಲಿ, ಅದರ ಮುನ್ನಾ ದಿನದಂದು ಚೀನಾದ ನಿಲುವಿನಲ್ಲಿ ಆಗಿರುವ ಬದಲಾವಣೆ ಗಮನಾರ್ಹವಾಗಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಲ್-ಖಾಯಿದ ದಿಗ್ಬಂಧನ ಸಮಿತಿಯು 2015ರ ಸೆಪ್ಟಂಬರ್‌ನಲ್ಲಿ ಈ ಭಯೋತ್ಪಾದಕರನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಪ್ರಸ್ತಾಪವನ್ನು ಮಂಡಿಸಿತ್ತು. ಈ ಪ್ರಸ್ತಾಪಕ್ಕೆ ಅಂತಾರಾಷ್ಟ್ರೀಯ ಸಮುದಾಯದ ಎಲ್ಲ ಸದಸ್ಯ ದೇಶಗಳು ಅಗಾಧ ಬೆಂಬಲವನ್ನು ವ್ಯಕ್ತಪಡಿಸಿದವು. ಆದರೆ, ಚೀನಾ ಮಾತ್ರ ಪಾಕಿಸ್ತಾನಕ ಕುಮ್ಮಕ್ಕಿನ ಮೇರೆಗೆ ಪ್ರಸ್ತಾಪವನ್ನು ತಿರಸ್ಕರಿಸಿತು.

ಜೈಶ ಮುಹಮ್ಮದ್ ಮುಖ್ಯಸ್ಥ ಹಫೀಝ್ ಸಯೀದ್‌ನನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸುವುದನ್ನೂ ಚೀನಾ ಈಗಾಗಲೇ ವಿರೋಧಿಸಿದೆ. ಈ ನಿರ್ಧಾರಕ್ಕಾಗಿ ಚೀನಾ ಜಾಗತಿಕ ಟೀಕೆಯನ್ನು ಎದುರಿಸಿರುವುದನ್ನು ಸ್ಮರಿಸಬಹುದಾಗಿದೆ.

ಭಯೋತ್ಪಾದನೆಗೆ ಬೆಂಬಲ ನೀಡುವ ಇಂಥ ನಿಲುವು ಜಾಗತಿಕ ಮಟ್ಟದಲ್ಲಿ ತನ್ನ ಪ್ರತಿಷ್ಠೆಗೆ ಪೆಟ್ಟು ನೀಡುತ್ತಿದೆ ಎಂಬುದನ್ನು ಚೀನಾ ಮನಗಂಡಿದೆಯೇ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News